ಲಂಡನ್ ಹೈಕೋರ್ಟ್‌ಗೆ ದುಬೈ ರಾಜಕುಟುಂಬ ವಿವಾದ

Update: 2019-07-31 04:17 GMT

ಲಂಡನ್, ಜು.31: ದುಬೈ ರಾಜ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಅವರ ಪತ್ನಿ ಜೋರ್ಡಾನ್ ರಾಣಿ ಹಯಾ, ತಮ್ಮ ಇಬ್ಬರು ಮಕ್ಕಳ ಪೈಕಿ ಒಬ್ಬರಿಗೆ ಸಂಬಂಧಿಸಿದಂತೆ ಇಂಗ್ಲಿಷ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ, "ಬಲಾತ್ಕಾರದ ವಿವಾಹ ರಕ್ಷಣೆ ಆದೇಶ" ಹೊರಡಿಸುವಂತೆ ಕೋರಿದ್ದಾರೆ. ರಾಣಿ ಹಯಾ ಬಿಂತ್ ಅಲ್ ಹುಸೈನ್ (45) ಅವರು ದಿವಂಗತ ರಾಜ ಹುಸೈನ್ ಅವರ ಪುತ್ರಿ ಹಾಗೂ ದೊರೆ ಅಬ್ದುಲ್ಲಾ ಅವರ ಮಲ ಸಹೋದರಿಯೂ ಹೌದು. ಕಿರುಕುಳದಿಂದ ರಕ್ಷಣೆ ಪಡೆಯುವ ಸಂಬಂಧ ಆದೇಶ ಹೊರಡಿಸುವಂತೆಯೂ ಮನವಿ ಮಾಡಿದ್ದಾರೆ.

ಲಂಡನ್ ಹೈಕೋರ್ಟ್‌ನಲ್ಲಿ ಅವರು ವಾರ್ಡ್‌ಶಿಪ್‌ಗೆ ಕೂಡಾ ಮನವಿ ಸಲ್ಲಿಸಿದ್ದಾರೆ. ವಾರ್ಡ್‌ಶಿಪ್ ಎಂದರೆ ಪ್ರಮುಖ ನಿರ್ಧಾರಗಳಿಗಾಗಿ ಮಗುವನ್ನು ನ್ಯಾಯಾಲಯದ ವಶಕ್ಕೆ ನೀಡುವುದು. ಬ್ರಿಟಿಷ್ ಕಾನೂನು ವ್ಯಾಖ್ಯೆಗಳ ಅನ್ವಯ, ಬಲಾತ್ಕಾರದ ಮದುವೆಯಿಂದ ರಕ್ಷಣಾ ಆದೇಶದಲ್ಲಿ ತನಗೆ ಬಲಾತ್ಕಾರದಿಂದ ವಿವಾಹ ಮಾಡಲಾಗಿದೆ ಎಂದು ವಾದಿಸುವವರಿಗೆ ನೆರವು ದೊರಕುತ್ತದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ಯುಎಇ ವಕ್ತಾರರು ನಿರಾಕರಿಸಿದ್ದಾರೆ. ಶೇಖ್ ಅವರ ಪ್ರತಿನಿಧಿಗಳು ಕೂಡಾ ಪ್ರತಿಕ್ರಿಯಿಸಿಲ್ಲ.

ಎಪ್ಪತ್ತು ವರ್ಷ ವಯಸ್ಸಿನ ಶೇಖ್ ಅವರು ಯುಎಇಯ ಉಪಾಧ್ಯಕ್ಷರಾಗಿದ್ದು, ಅಂದಿನ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಮಾಜಿ ಸದಸ್ಯೆಯನ್ನು 2004ರಲ್ಲಿ ವಿವಾಹವಾಗಿದ್ದರು. ಇದು ಶೇಖ್ ಅವರ ಆರನೇ ವಿವಾಹ ಎನ್ನಲಾಗಿತ್ತು. ವಿವಿಧ ಪತ್ನಿಯರಲ್ಲಿ 20ಕ್ಕೂ ಹೆಚ್ಚು ಮಕ್ಕಳನ್ನು ಅವರು ಹೊಂದಿದ್ದಾರೆ. ರಾಣಿ ಹಯಾ, 2000ನೇ ಇಸ್ವಿಯ ಸಿಡ್ನಿ ಒಲಿಂಪಿಕ್ಸ್‌ನಲ್ಲಿ ಈಕ್ವೆಸ್ಟ್ರಿಯಲ್ ಜಂಪಿಂಗ್‌ನಲ್ಲಿ ಕಣಕ್ಕೆ ಇಳಿದಿದ್ದರು. ಸಾಮಾನ್ಯವಾಗಿ ಬ್ರಿಟನ್‌ನ ರಾಯಲ್ ಅಸ್ಕಾಟ್ ಕುದುರೆ ರೇಸ್‌ನಲ್ಲಿ ಶೇಖ್ ಮುಹಮ್ಮದ್ ಜತೆ ಭಾಗವಹಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News