ಹಿಂದೂ ಅಸ್ಮಿತೆಯ ರಾಜಕಾರಣದ ಸುತ್ತ

Update: 2019-07-31 11:05 GMT

ಸ್ವಾತಂತ್ರೋತ್ತರ ಭಾರತೀಯ ಸಂದರ್ಭ-ವಿಶೇಷವಾಗಿ ಸುಮಾರು 1980ರ ದಶಕದಿಂದ ಇತ್ತೀಚೆಗೆ ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಆಯಾಮಗಳಿಗೆ ಸಂಬಂಧಿಸಿದಂತೆ ಹೊಸ ಹೊಸ ಪ್ರಶ್ನೆಗಳನ್ನು ಹುಟ್ಟು ಹಾಕುತ್ತಿದೆ. ಅದು ಗತ ಮತ್ತು ಚರಿತ್ರೆಯನ್ನು ಆಧರಿಸಿ ವರ್ತಮಾನವನ್ನು ವಿವರಿಸುತ್ತಾ ವರ್ತಮಾನವೇ ಗತ ಅಥವಾ ಚರಿತ್ರೆಯ ನಿರೂಪಣೆ ಎಂಬಂತೆ ಕಾಣಿಸುತ್ತಿದೆ. ಹಿಂದೂ ಅಸ್ಮಿತೆಯ ಪ್ರಶ್ನೆ ಕೂಡಾ ಇಂತಹ ಗೋಜಲಿನ ಒಂದು ರೂಪಕವಷ್ಟೇ. ಅದಕ್ಕೆ ಭಾರತದಲ್ಲಿ ಚರಿತ್ರಕಾರರು, ಸಮಾಜಶಾಸ್ತ್ರಜ್ಞರು ಮತ್ತು ವಿದ್ವಾಂಸರು ಹಲವು ರೀತಿಯಲ್ಲಿ ತಾತ್ವಿಕವಾಗಿ ಮುಖಾಮುಖಿಯಾಗಿ ಅತ್ಯಂತ ಪ್ರಮುಖ ಪ್ರಶ್ನೆಗಳನ್ನು ಒಡ್ಡಿದರು. ಅಂತಹವರಲ್ಲಿ ಒಬ್ಬರಾದ ಡಿ. ಎನ್. ಝಾ ಅವರು ಕೇಳಿದ ಪ್ರಶ್ನೆ, ವಿಶ್ಲೇಷಣೆ ಮತ್ತು ವಾದ ಸರಣಿಯ ಪ್ರತಿಮೆಯೇ ‘ಹಿಂದೂ ಅಸ್ಮಿತೆಗಾಗಿ ಹುಡುಕಾಟ’ ಎನ್ನುವ ಕಿರು ಕೃತಿ. ಪ್ರದೀಪ ಕುಮಾರ ಶೆಟ್ಟಿ ಕೆ. ಅವರು ಇದನ್ನು ಕನ್ನಡಕ್ಕೆ ತಂದಿದ್ದಾರೆ.

‘‘...ಇತ್ತೀಚಿನ ದಿನಗಳಲ್ಲಿ ಭಾರತೀಯ ರಾಷ್ಟ್ರೀಯ ಅಸ್ಮಿತೆ ಅಥವಾ ಐಡೆಂಟಿಟಿಯನ್ನು ಹಿಂದೂ ಧಾರ್ಮಿಕ ರಾಷ್ಟ್ರೀಯವಾದದ ಮೂಲಕ ಗುರುತಿಸುವ ಕಾತರ ಮತ್ತು ಅಪರಿಮಿತ ಕುತೂಹಲವು ಹಿಂದೂ ಬಲಪಂಥೀಯ ಕೋಮುವಾದಿ ಗುಂಪುಗಳಿಂದ ವಿಪುಲವಾಗಿ ಎಗ್ಗಿಲ್ಲದೆ ನಡೆಯುತ್ತಿದೆ. ತನ್ಮೂಲಕ ಅವು ತೀವ್ರವಾದ ಹಿಂಗೆ ಮತ್ತು ಅಸಹನೆಯ ಹಿಂದೂ ಮೂಲಭೂತವಾದ ಅಥವಾ ಇದಮಿತ್ಥಂ ವಾದದ ಮೂಲಕ ಅದನ್ನೇ ಹಿಂದೂ ಧರ್ಮವೆಂದು ಪ್ರಚಾರ ನಡೆಸುತ್ತಿವೆ. ಅವುಗಳು ಪ್ರಾಚೀನ ಭಾರತೀಯ ಧಾರ್ಮಿಕ ಪಠ್ಯಗಳಿಂದ ಪ್ರೇರಣೆಯನ್ನು ಪಡೆದಿವೆಯೆಂದು ತಮ್ಮನ್ನು ನ್ಯಾಯಬದ್ಧಗೊಳಿಸಿಕೊಳ್ಳಲು ಪ್ರಯತ್ನ ಪಡುತ್ತಿವೆ. ಆದರೆ ಈ ಪ್ರಕ್ರಿಯೆಯಲ್ಲಿ ಅವರು ಈ ಪಠ್ಯಗಳನ್ನು ತಿರುಚಿದ ಮತ್ತು ತಪ್ಪಾಗಿ ಅರ್ಥೈಸಿದ ಬಗ್ಗೆ ಸ್ವಲ್ಪವೂ ತಲೆಕೆಡಿಸಿಕೊಳ್ಳುವುದಿಲ್ಲ. ಅವುಗಳನ್ನು ತೀರಾ ಕೃತಕವಾಗಿ ಪುನರ್‌ಸೃಷ್ಟಿಸಲಾಗುತ್ತಿದೆ. ಹೀಗೆ ಇಂತಹ ಪ್ರಕ್ರಿಯೆಯಲ್ಲಿ ಇನ್ನೂ ಹಲವು ಮಿಥ್ಯೆಗಳನ್ನು ಸೃಷ್ಟಿಸಲಾಗುತ್ತಿದೆ....’’ ಎನ್ನುವ ಝಾ, ಆ ಮಿಥ್ಯೆಗಳನ್ನು ಬಯಲು ಮಾಡುವ ಕೆಲಸವನ್ನು ಈ ಕೃತಿಯ ಮೂಲಕ ಮಾಡುತ್ತಾರೆ.

ಧರ್ಮದ ಅಧ್ಯಯನವನ್ನು ಧರ್ಮದ ವಿದ್ವಾಂಸರುಗಳಿಂದ ಸ್ವತಂತ್ರಗೊಳಿಸಬೇಕಾಗಿದೆ. ಧರ್ಮದ ವಿದ್ವಾಂಸರು ಇಂತಹ ಮಿಥ್ಯೆಗಳನ್ನು ಹಾಗೂ ಕಲ್ಪಿತ ಕಥೆಗಳನ್ನು ಇನ್ನೂ ಬಲಪಡಿಸುವ ಕಾರಣ ಅವು ಧಾರ್ಮಿಕ ಮೂಲಭೂತವಾದಕ್ಕೆ ಸಾಮಗ್ರಿಯಾಗುತ್ತವೆ. ಧರ್ಮದ ಬಗೆಗಿನ ಅಧ್ಯಯನವನ್ನು ನೈಜ, ವಸ್ತುನಿಷ್ಠ ಚರಿತ್ರೆಯ ಆಧಾರದ ಮೇಲೆ ಅಧ್ಯಯನ ಮಾಡಬೇಕಾಗಿದೆ ಎಂದು ಝಾ ವಾದಿಸುತ್ತಾರೆ. ನವಕರ್ನಾಟಕ ಪ್ರಕಾಶನ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 72. ಮುಖಬೆಲೆ 80 ರೂಪಾಯಿ.

Writer - ಕಾರುಣ್ಯಾ

contributor

Editor - ಕಾರುಣ್ಯಾ

contributor

Similar News