ಕಾಫಿ ಡೇ ಸಿದ್ಧಾರ್ಥ ಸಾವು ಪ್ರಕರಣ; ಬೆಂಗಳೂರಿನ ಕಚೇರಿಯ ಪರಿಶೀಲನೆ
ಬೆಂಗಳೂರು, ಜು.31: ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ ಸಾವು ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿರುವ ಮಂಗಳೂರು ಪೊಲೀಸರು, ರಾಜಧಾನಿ ಬೆಂಗಳೂರಿನಲ್ಲಿರುವ ಕಾಫಿ ಡೇ ಕಚೇರಿಯಲ್ಲಿ ಪರಿಶೀಲನೆ ನಡೆಸಿದರು ಎನ್ನಲಾಗಿದೆ.
ಇಲ್ಲಿನ ವಿಠಲ್‌ಮಲ್ಯ ರಸ್ತೆಯಲ್ಲಿರುವ ಸಿದ್ಧಾರ್ಥ್ ಅವರ ಕಚೇರಿಗೆ ಭೇಟಿ ನೀಡಿದ ಎಂಟು ತನಿಖಾಧಿಕಾರಿಗಳು, ತೀವ್ರ ಪರಿಶೀಲನೆ ನಡೆಸಿದರು. ಬಳಿಕ ಕೆಲ ದಾಖಲೆಗಳನ್ನು ಜಪ್ತಿ ಮಾಡಿ, ಸಿಬ್ಬಂದಿ ಹೇಳಿಕೆಗಳನ್ನು ದಾಖಲು ಮಾಡಿದರು ಎಂದು ತಿಳಿದುಬಂದಿದೆ.
ಸಿದ್ಧಾರ್ಥ್ ಕಚೇರಿಯಿಂದ ಹೊರಡುವ ಮುನ್ನ ಯಾರನ್ನು ಭೇಟಿಯಾಗಿದ್ದರು. ಕಳೆದ ಒಂದು ವಾರದಿಂದ ಕಚೇರಿಗೆ ಯಾರೆಲ್ಲ ಬಂದಿದ್ದರು. ಶುಕ್ರವಾರ ಮೈಸೂರಿಗೆ ಹೋಗುವ ಮುನ್ನ ಯಾರನ್ನು ಭೇಟಿಯಾಗಿದ್ದರು ಎಂಬುದರ ಕುರಿತು ಕೂಲಂಕಷವಾಗಿ ಪರಿಶೀಲಿಸುತ್ತಿದ್ದಾರೆ. ಅಲ್ಲದೆ, ಸಿಬ್ಬಂದಿ ಬಳಿ ಸಹ ವಿವರ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಕಚೇರಿಯ ಮೂವರು ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದ್ದು, ಸಿದಾರ್ಥ್ ಅವರ ಕೊಠಡಿನಲ್ಲಿದ್ದ ಕೆಲವು ದಾಖಲೆಗಳನ್ನೂ ವಶಪಡಿಸಿಕೊಂಡಿದ್ದು, ಮಾಹಿತಿಯನ್ನು ಸಹ ಕಲೆಹಾಕಲಾಗುತ್ತಿದೆ ಎಂಬ ಮಾಹಿತಿ ತಿಳಿದು ಬಂದಿದೆ.