ಸಿದ್ಧಯ್ಯ ಪುರಾಣಿಕ ಅಸಾಮಾನ್ಯ ಚೈತನ್ಯ: ಡಾ.ಸಿದ್ದಲಿಂಗಯ್ಯ

Update: 2019-07-31 17:27 GMT

ಬೆಂಗಳೂರು, ಜು.31: ನವ್ಯ ನವೋದಯ ಕವಿ ಹಾಗೂ ಪ್ರಗತಿಪರ ವಿಚಾರಧಾರೆಗಳ ಒಲವಿದ್ದ ಸಿದ್ದಯ್ಯ ಪುರಾಣಿಕ ಅವರು ಅಸಾಮಾನ್ಯ ಚೈತನ್ಯ ಎಂದು ಹಿರಿಯ ಕವಿ ಡಾ.ಸಿದ್ಧಲಿಂಗಯ್ಯ ಅಭಿಪ್ರಾಯಪಟ್ಟಿದ್ದಾರೆ.

ಬುಧವಾರ ಸಾಹಿತ್ಯ ಅಕಾಡೆಮಿಯ ಜಂಟಿಯಾಗಿ ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆಯೋಜಿಸಿದ್ದ ಡಾ.ಸಿದ್ದಯ್ಯ ಪುರಾಣಿಕ(ಕಾವ್ಯಾನಂದ), ಮಿರ್ಜಿ ಅಣ್ಣಾರಾಯ ಹಾಗೂ ಡಾ.ರಾ.ಯ.ಧಾರವಾಡಕರ ಅವರ ಜನ್ಮದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಿದ್ದಯ್ಯ ಪುರಾಣಿಕ ಕವಿ, ಮಾನವತವಾದಿ ಹಾಗೂ ತತ್ವಶಾಲಿ ರಚನಾಕಾರ. ಅವರನ್ನು ಮರೆಯಲು ಸಾಧ್ಯವಿಲ್ಲ. ಉನ್ನತ ಅಧಿಕಾರಿಯಾಗಿ ಕನ್ನಡದ ಪರ ಸಾಕಷ್ಟು ಶ್ರಮಿಸಿದ್ದಾರೆ. ಪ್ರಕೃತಿ ವರ್ಣಿಸುವುದರಲ್ಲಿ, ವಚನಗಳ ಸಂಗ್ರಹ, ಮಕ್ಕಳ ಕವಿತೆ ಸೇರಿದಂತೆ ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ತೊಡಗಿಸಿಕೊಂಡಿದ್ದರು ಎಂದು ಅವರು ತಿಳಿಸಿದರು.

ಇವತ್ತಿನ ರಾಜಕೀಯ ಮತ್ತು ಸಾಮಾಜಿಕ ಸ್ಥಿತಿಗೆ ಸಿದ್ದಯ್ಯ ಪುರಾಣಿಕರ ಪದ್ಯಗಳು ಪ್ರಸ್ತುತವೆನಿಸಿವೆ. ಜಾತ್ಯತೀತ ಮನೋಭಾವ ಹೊಂದಿದ್ದರು. ಅವರು ಹೇಳಿದ್ದ ಮಾತಿನಂತೆ ಇವತ್ತು ಮನುಷ್ಯ ಬ್ರಾಹ್ಮಣ, ವೈಶ್ಯ, ಶೂದ್ರನಾಗಿದ್ದಾನೆ ಆದರೆ ಮಾನವನಾಗಿಲ್ಲ, ಮನುಷ್ಯತ್ವವನ್ನು ಉಳಿಸಿಕೊಂಡಿಲ್ಲ. ಜಾತಿಯ ಸೋಂಕಿಗೆ ಮದ್ದನ್ನು ನೀಡುವ ಪದ್ಯಗಳನ್ನು ಅವರು ನೀಡಿದ್ದಾರೆ. ಮಿರ್ಜಿ ಅಣ್ಷಾರಾಯರು ಹೇಳಿದಂತೆ ಹಿಂದು ಮುಸಲ್ಮಾನರ ಐಕ್ಯತೆ ಇಂದಿಗೆ ಅವಶ್ಯಕ. ಸೌಹಾರ್ದವನ್ನು ಪ್ರತಿಪಾದನೆ ಮಾಡಿದವರು ಮಿರ್ಜಿ ಅಣ್ಣಾರಾಯರು ಎಂದು ನುಡಿದರು.

ಹಿರಿಯ ಸಾಹಿತಿ ಹಾಗೂ ಜ್ಞಾನಪೀಠ ಪುರಸ್ಕೃತ ಚಂದ್ರಶೇಖರ ಕಂಬಾರ ಮಾತನಾಡಿ, ಕನ್ನಡತನದ ಬಗ್ಗೆ ಜಾಗೃತಿ ಮೂಡಿಸಿರುವುದರಿಂದ ಅವರನ್ನು ಪದೇ ಪದೇ ಸ್ಮರಿಸುವುದು ಕನ್ನಡಿಗರ ಕರ್ತವ್ಯ. ಪುರಾಣಿಕರು 50ಕ್ಕೂ ಅಧಿಕ ಕೃತಿಗಳನ್ನು, 1500 ವಚನಗಳನ್ನು ಬರೆದಿದ್ದಾರೆ. ಒತ್ತಡದ ಬದುಕಿನಲ್ಲಿಯೂ ಸಾಹಿತ್ಯವನ್ನು ರಚಿಸುವಂತಹ ಅಭಿರುಚಿಯನ್ನು ಹೊಂದಿದ್ದರು ಎಂದು ಹೇಳಿದರು

ನಮ್ಮ ನಾಡಿನಲ್ಲಿ ಆಡಳಿತಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಾ ಸಾಹಿತ್ಯ ಕೃಷಿ ಮಾಡಿದವರಲ್ಲಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ನವರತ್ನರಾಮ್ ಹಾಗೂ ಸಿದ್ದಯ್ಯ ಪುರಾಣಿಕರು ಪ್ರಮುಖರಾಗಿದ್ದು, ಅವರಲ್ಲಿ ಸಿದ್ದಯ್ಯ ಪುರಾಣಿಕರು ತಮ್ಮದೇ ಆಗಿರುವ ಸಾಹಿತ್ಯವನ್ನು ಕನ್ನಡ ನಾಡಿಗೆ ನೀಡಿದ್ದಾರೆ. ಅವರ ಮೇಲೆ ಹರ್ಡೆಕರ್ ಮಂಜಪ್ಪನವರ ಪ್ರಭಾವವಿತ್ತು ಎಂದು ಅವರು ತಿಳಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್ ವಹಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News