ಟಿಪ್ಪು ಜಯಂತಿ ರದ್ದು ಆದೇಶ ಹಿಂಪಡೆಯಿರಿ: ವಾಟಾಳ್ ನಾಗರಾಜ್

Update: 2019-07-31 17:29 GMT

ಬೆಂಗಳೂರು, ಜು.31: ಮೈಸೂರು ಹುಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ರದ್ದುಗೊಳಿಸಿರುವ ಆದೇಶವನ್ನು ಈ ಕೂಡಲೇ ರಾಜ್ಯ ಸರಕಾರ ಹಿಂಪಡೆಯ ಬೇಕೆಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಒತ್ತಾಯಿಸಿದರು.

ಮೈಸೂರು ಹುಲಿ ಟಿಪ್ಪು ಸುಲ್ತಾನ್ ಜಯಂತಿ ರದ್ದು ಆದೇಶ ಖಂಡಿಸಿ ಬುಧವಾರ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕನ್ನಡ ಚಳವಳಿ ವಾಟಾಳ್ ಪಕ್ಷದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಟಿಪ್ಪು ಸುಲ್ತಾನ್ ಈ ದೇಶದ ಮಹಾವೀರ. ಆದರೆ, ಬಿಜೆಪಿ ಸರಕಾರ ಜಯಂತಿ ಆದೇಶ ರದ್ದುಗೊಳಿಸಿರುವುದು ಅಪಚಾರ. ಅಷ್ಟೇ ಅಲ್ಲದೆ, ಮಾಜಿ ರಾಷ್ಟ್ರಪತಿಯಾಗಿದ್ದ ಎ.ಪಿ.ಜೆ.ಅಬ್ದುಲ್ ಕಲಾಂ, ರಾಮನಾಥ್ ಕೋವಿಂದ್ ಅವರು ಸಹ ಟಿಪ್ಪು ಸುಲ್ತಾನ್ ಗುಣಗಾನ ಮಾಡಿದ್ದಾರೆ ಎಂದರು.

ಇಡೀ ಜಗತ್ತಿನಲ್ಲೇ ತನ್ನ ಶೌರ್ಯ, ಎದೆಗಾರಿಕೆ ಹಾಗೂ ಆಡಳಿತ ಕ್ರಮಗಳಿಗೆ ಸುಪ್ರಸಿದ್ದವಾದ ಟಿಪ್ಪು ಸುಲ್ತಾನ್ ನಮ್ಮ ರಾಜ್ಯದ ಮಾತ್ರವಲ್ಲದೆ ದೇಶದ ಹೆಮ್ಮೆಯಾಗಿದ್ದಾರೆ. ತಂತ್ರಜ್ಞಾನ, ನೀರಾವರಿ, ಕೃಷಿ, ಕನ್ನಡ ಸಾಹಿತ್ಯ, ಸಾಮಾಜಿಕ ಸುಧಾರಣಾ ಕ್ಷೇತ್ರಗಳಲ್ಲಿ ಟಿಪ್ಪುಸುಲ್ತಾನ್‌ರಂತಹ ಅಪ್ರತಿಮ ಕೊಡುಗೆ ನೀಡಿದ ರಾಜ ದೇಶದಲ್ಲೇ ಇನ್ನೊಬ್ಬನಿಲ್ಲ ಎಂಬುವುದು ಇತಿಹಾಸದ ಅತ್ಯಂತ ಸ್ಪಷ್ಟ ಸತ್ಯವಾಗಿದೆ. ಹಾಗಾಗಿ, ಯಾವುದೇ ಕಾರಣ ಟಿಪ್ಪು ಜಯಂತಿ ನಿಲ್ಲಿಸಬಾರದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News