ಆ. 3 - 4ರಂದು ಕಲರ್ಸ್ ಸೂಪರ್ ನಲ್ಲಿ ಆರು ಅಪ್ರತಿಮ ಹಾಡುಗಾರರ ಸೆಣಸಾಟ

Update: 2019-07-31 17:34 GMT

ಬೆಂಗಳೂರು: ಖುಷಿಗಾಗಿ ಹಾಡುವ ಶೋ "ಕನ್ನಡ ಕೋಗಿಲೆ" ಅಂತಿಮ ಹಂತ ತಲುಪಿದೆ. ಆ. 3 ಮತ್ತು 4ರಂದು ರಾತ್ರಿ 8ರಿಂದ ಕನ್ನಡ ಕೋಗಿಲೆಯ ಗ್ರ್ಯಾಂಡ್ ಫಿನಾಲೆ ಕಲರ್ಸ್ ಸೂಪರ್ ಚಾನೆಲ್‍ನಲ್ಲಿ ಪ್ರಸಾರವಾಗಲಿದೆ.

ಮೈಸೂರಿನ ಆಲಾಪ್, ಕೊಪ್ಪಳದ ಏಳು ವರ್ಷ ವಯಸ್ಸಿನ ಸಂಗೀತ ಸೆನ್ಸೇಷನ್ ಅರ್ಜುನ್ ಇಟಗಿ, ಉಡುಪಿಯ ಕಲಾವತಿ ದಯಾನಂದ್, ಹಾವೇರಿಯ ಖಾಸಿಂ, ಬೆಂಗಳೂರಿನ ನೀತು ಸುಬ್ರಹ್ಮಣ್ಯಂ ಮತ್ತು ಶಿವಮೊಗ್ಗದ ಪಾರ್ಥ ಪ್ರತಿಷ್ಠಿತ "ಕನ್ನಡ ಕೋಗಿಲೆ" ಕಿರೀಟಕ್ಕಾಗಿ ಸೆಣಸಲಿದ್ದಾರೆ.

ಸಂಗೀತ ಪ್ರಿಯರ ನಡುವಲ್ಲಿ ಈಗಾಗಲೇ ದೊಡ್ಡ ಹೆಸರು ಮಾಡಿರುವ "ಕನ್ನಡ ಕೋಗಿಲೆ"ಯ ಎರಡನೇ ಸೀಸನ್ ಇದು. ವೈವಿಧ್ಯಮಯ ಹಾಡುಗಾರರು ಮತ್ತು ಮನಮೋಹಕ ಹಾಡುಗಾರಿಕೆಯ ಮೂಲಕ ಆರಂಭದಿಂದಲೇ ಜನರನ್ನು ತನ್ನತ್ತ ಸೆಳೆದಿರುವ "ಕೋಗಿಲೆ"ಯ ಎರಡನೇ ಸೀಸನ್ ಸಂಗೀತದ ಗುಣಮಟ್ಟದ ವಿಷಯದಲ್ಲಿ ಇನ್ನೂ ಒಂದು ಹಂತ ಮೇಲಕ್ಕೆ ಹೋಗಿದೆ. ಶೋ ನಡೆಯುತ್ತಿರುವಾಗಲೇ ಇದರ ಸ್ಪರ್ಧಿಗಳು ಸಿನಿಮಾಗಳಲ್ಲಿ ಹಾಡಿರುವುದು ಅವರ ಪ್ರತಿಭೆಗೆ ಸಾಕ್ಷಿ.

ಸಾಧು ಕೋಕಿಲ, ಅರ್ಚನಾ ಉಡುಪ ಮತ್ತು ಚಂದನ್ ಶೆಟ್ಟಿ ತೀರ್ಪುಗಾರರಾಗಿರುವ "ಕನ್ನಡ ಕೋಗಿಲೆ"ಯನ್ನು ಸಿರಿ ನಡೆಸಿಕೊಡುತ್ತಿದ್ದಾರೆ. ಗ್ರ್ಯಾಂಡ್ ಫಿನಾಲೆಯಲ್ಲಿ ಸಂಗೀತ ಮಾಂತ್ರಿಕ ಗುರುಕಿರಣ್ ವಿಶೇಷ ತೀರ್ಪುಗಾರರಾಗಿದ್ದರು.

"ಕನ್ನಡ ಕೋಗಿಲೆ" ಈ ಸೀಸನ್‍ನಲ್ಲಿ ರಿಯಲ್ ಸ್ಟಾರ್ ಉಪೇಂದ್ರ, ಪ್ರಿಯಾಂಕಾ ಉಪೇಂದ್ರ, ಅಭಿಷೇಕ್ ಅಂಬರೀಷ್, ರಾಕ್‍ಲೈನ್ ವೆಂಕಟೇಶ್, ದೊಡ್ಡಣ್ಣ, ಅನೂಪ್ ಸೀಳಿನ್, ಕವಿ ದೊಡ್ಡರಂಗೇಗೌಡ ಅತಿಥಿಗಳಾಗಿ ಭಾಗವಹಿಸಿ ಸ್ಪರ್ಧಿಗಳನ್ನು ಹೊಗಳಿದ್ದರು.

"ಕಲರ್ಸ್ ಸಮೂಹದ ಚಾನೆಲ್‍ಗಳಲ್ಲಿ ಸಂಗೀತದ ಕಾರ್ಯಕ್ರಮ ಬೇಕು ಎಂಬ ವೀಕ್ಷಕರ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದ ಶೋ "ಕನ್ನಡ ಕೋಗಿಲೆ.” ಇದರ ಗುಣಮಟ್ಟದ ಬಗ್ಗೆ ನನಗೆ ನಿಜವಾಗಿಯೂ ಹೆಮ್ಮೆ ಇದೆ. ಇಂದು ಕನ್ನಡದ ಅಪ್ರತಿಮ ಸಂಗೀತದ ಕಾರ್ಯಕ್ರಮವಾಗಿ ನೆಲೆಯೂರಲು ಈ ಕಾರ್ಯಕ್ರಮಕ್ಕೆ ಸಾಧ್ಯವಾಗಿದೆ. ರಾಜ್ಯದ ನಾನಾ ಭಾಗಗಳಿಂದ ಬೆಳಕಿಗೆ ಬಾರದ ಪ್ರತಿಭೆಗಳನ್ನು ನಮ್ಮ ತಂಡ ಹುಡುಕಿ ತಂದಿದೆ. ಗ್ರ್ಯಾಂಡ್ ಫಿನಾಲೆಯಲ್ಲಿ ಮನರಂಜನೆಯ ಮಹಾಪೂರವೇ ಇರಲಿದೆ," ಎನ್ನುತ್ತಾರೆ ವಯಾಕಾಂ 18ನ ಕನ್ನಡ ಕ್ಲಸ್ಟರ್ ಬ್ಯುಸಿನೆಸ್ ಹೆಡ್ ಪರಮೇಶ್ವರ ಗುಂಡ್ಕಲ್.

ಫೈನಲ್‍ಗೆ ಬಂದಿರುವ ಒಬ್ಬೊಬ್ಬ ಸ್ಪರ್ಧಿಯೂ ವಿಶೇಷವಾದ ಪ್ರತಿಭಾವಂತರೇ. ಆರರಿಂದ ಅರುವತ್ತು ವರ್ಷ ವಯಸ್ಸಿನ ಹಾಡುಗಾರರು ಭಾಗವಹಿಸುವ ಈ ಶೋ ಗ್ರ್ಯಾಂಡ್ ಫಿನಾಲೆಯಲ್ಲಿ ಶಾಸ್ತ್ರೀಯ ಸಂಗೀತ ಕಲಿತಿರುವ ಆಲಾಪ್, ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಮಲಯಾಳಿ ಹುಡುಗಿ ನೀತು ಸುಬ್ರಹ್ಮಣ್ಯಂ, ಭಾವಗೀತೆ ಮತ್ತು ಜಾನಪದ ಹಾಡುಗಾರ್ತಿ ಕಲಾವತಿ ದಯಾನಂದ್, ಸ್ವಯಂ ಗಿಟಾರ್ ಮತ್ತು ಹಾಡುಗಾರಿಕೆ ಕಲಿತಿರುವ ಪಾರ್ಥ, ಬಾಲ ಪ್ರತಿಭೆ ಅರ್ಜುನ್ ಇಟಗಿ ಮತ್ತು ಸಿಹಿ ಕಂಠದ ಖಾಸಿಂ ಇದ್ದಾರೆ.

ಇವರಲ್ಲಿ ಯಾರ ಮುಡಿಗೆ "ಕನ್ನಡ ಕೋಗಿಲೆ" ಕಿರೀಟ ಸಿಗಲಿದೆ ಎಂಬುದು ಶನಿವಾರ ಮತ್ತು ರವಿವಾರ ರಾತ್ರಿ 8 ಗಂಟೆಗೆ ಕಲರ್ಸ್ ಸೂಪರ್ ಚಾನೆಲ್‍ನಲ್ಲಿ ಗೊತ್ತಾಗಲಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News