ಉನ್ನಾವೊ ಪ್ರಕರಣ ಮತ್ತು ನ್ಯಾಯದ ಕಗ್ಗೊಲೆ

Update: 2019-07-31 18:26 GMT

ಅತ್ಯಂತ ಅಪಾಯಕಾರಿ ಬೆಳವಣಿಗೆಯೊಂದರ ಒಳಗೆ ನಾವೆಲ್ಲರೂ ಸಿಕ್ಕಿ ಹಾಕಿಕೊಂಡಿದ್ದೇವೆ. ಸುರಕ್ಷಿತ ವಲಯದಲ್ಲಿ ನಮ್ಮಬದುಕು ಲಯ ತಪ್ಪದ ಹಾಗೆ ನೋಡಿಕೊಂಡು ಒಂದು ಮಟ್ಟಿಗೆ ಸುಖವಾಗಿ ಇದ್ದು, ದೇಶದ ಇಡೀ ಸಾಮಾಜಿಕ ವ್ಯವಸ್ಥೆಯನ್ನು ಮೂಕ ಪ್ರೇಕ್ಷಕರಂತೆ ನೋಡುತ್ತಿದ್ದೇವೆ. 2017ರಲ್ಲಿ ನಡೆದ ಉನ್ನಾವೊ ಅತ್ಯಾಚಾರ ಪ್ರಕರಣದ ನಂತರದ ಬೆಳವಣಿಗೆಗಳು ನಿಜಕ್ಕೂ ಇಡೀ ದೇಶವನ್ನು ನಡುಗಿಸಬೇಕಿತ್ತು. ಜನರು ಬೀದಿಗಿಳಿದು ಹೋರಾಟ ಮಾಡಬೇಕಿತ್ತು. ದೇಶದ ಮೂಲೆ ಮೂಲೆಯಲ್ಲೂ ಹೋರಾಟ ನಡೆಯಬೇಕಿತ್ತು. ಆದರೆ ಇವು ಯಾವುವೂ ನಡೆದಿಲ್ಲ. 2012ರ ದಿಲ್ಲಿ ಸಾಮೂಹಿಕ ಅತ್ಯಾಚಾರ, ಲೆಸ್ಲಿ ಉಡ್ವಿನ್ ಎಂಬ ಹಾಲಿವುಡ್ ನಿರ್ದೇಶಕಿ ಸಾಕ್ಷ್ಯಚಿತ್ರ ನಿರ್ಮಿಸುವ ಮಟ್ಟಕ್ಕೆ ತಲುಪಿರುವಾಗ, ದೇಶದ ಒಳಗೆ ನ್ಯಾಯಕ್ಕಾಗಿಯಾದರೂ, ಆ ಕುಟುಂಬದ ನಾಳೆಗಾಗಿ, ಆ ಹೆಣ್ಣಿನ ಭವಿಷ್ಯಕ್ಕಾಗಿಯಾದರೂ ದೊಡ್ಡ ಮಟ್ಟದ ಪ್ರತಿಭಟನೆ ನಡೆಯಬೇಕಿತ್ತು

ಇದಕ್ಕೆ ಕಾರಣ ಹುಡುಕಲು ಹೊರಟು, ಸ್ಪಂದಿಸುವ ಗುಣ ನಾಶವಾಗುತ್ತಿದೆ ಎನ್ನಬೇಕೇ? ನಮಗೇಕೆ ಉಸಾಬರಿ ಎಂದು ಜನರು ಸುಮ್ಮನಾಗುತ್ತಿದ್ದಾರೆ ಎಂದು ಭಾವಿಸಬೇಕೇ? ಅಥವಾ ಬಲಿಷ್ಠ ಶಕ್ತಿಯ ಮೂಲಕ ಮಾಧ್ಯಮಗಳೂ ಬಾಯಿ ಮುಚ್ಚಿಕೊಂಡು ಆಟ ನೋಡಿದಂತೆ ನೋಡುತ್ತಿದೆ ಎಂದು ಭಾವಿಸಬೇಕೇ? ಯಾವುದೂ ಅರ್ಥವಾಗದಷ್ಟು ಒಳಸುಳಿಗಳನ್ನು ಈ ವ್ಯವಸ್ಥೆಯೊಳಗೆ ಸೃಷ್ಟಿಸಲಾಗಿದೆ. ಒಬ್ಬ ಶಾಸಕ, ತನ್ನದೇ ಗ್ರಾಮದ ಹೆಣ್ಣು ಮಗಳೊಬ್ಬಳನ್ನು ಅತ್ಯಾಚಾರ ಮಾಡುತ್ತಾನೆ ಎಂದಾದರೆ, ಅಧಿಕಾರದಲ್ಲಿರುವ ಯಾರ ಬಳಿ ಆ ಇಡೀ ಪ್ರದೇಶ ರಕ್ಷಣೆ ಕೇಳಬೇಕು? ಇಂತಹ ಶಾಸಕನ ಮುಂದೆ ಈತನದ್ದೇ ಪಕ್ಷದ ‘ಬೇಟಿ ಬಚಾವೊ ಬೇಟಿ ಪಢಾವೊ’ ಎಂಬ ಘೋಷವಾಕ್ಯವನ್ನು ಹೇಗೆ ವ್ಯಾಖ್ಯಾನಿಸಬೇಕು? ಈ ಪ್ರಕರಣದಲ್ಲಿ ಇಡೀ ಕುಟುಂಬ ತತ್ತರಿಸಿ ಹೋಗಿದೆ.

ತಂದೆ ಜೈಲಿನಲ್ಲಿ ಸಾವಿಗೀಡಾಗುತ್ತಾನೆ. ಚಿಕ್ಕಪ್ಪಬಂಧನಕ್ಕೊಳಗಾಗುತ್ತಾನೆ. ಪ್ರತ್ಯಕ್ಷ ಸಾಕ್ಷಿಯಾಗಿದ್ದ ಯುವಕನೊಬ್ಬ ಗುಂಡಿಗೆ ಬಲಿಯಾಗುತ್ತಾನೆ. ತನ್ನ ಕುಟುಂಬ ಅದೇ ಶಾಸಕನಿಂದ ಜೀವ ಬೆದರಿಕೆಯನ್ನು ಎದುರಿಸಿದ ಕೆಲವೇ ದಿನಗಳಲ್ಲಿ ಸಂತ್ರಸ್ತೆ ಸಂಚರಿಸುತ್ತಿದ್ದ ಕಾರಿಗೆ ಟ್ರಕ್ ಢಿಕ್ಕಿಯಾಗಿ ಆಕೆಯ ಇಬ್ಬರು ಕುಟುಂಬಸ್ಥರು ಸಾವನ್ನಪ್ಪುತ್ತಾರೆ. ಸಂತ್ರಸ್ತೆ, ಆಕೆಯ ವಕೀಲ ಗಂಭೀರ ಸ್ಥಿತಿಯಲ್ಲಿದ್ದಾರೆ... ಸಿನೆಮಾ ಕತೆಯಂತಿರುವ ಭೀಕರ ಸತ್ಯವೊಂದು ಇಷ್ಟು ಕರಾಳವಾಗಿದೆ, ಹಾಗೂ ಇವೆಲ್ಲ ಅಭಿವೃದ್ಧಿಯತ್ತ ದಾಪುಗಾಲಿಡುತ್ತಿರುವ ಭಾರತದಲ್ಲಿ, ನಮ್ಮ ಕಣ್ಣ ಮುಂದೆಯೇ ನಡೆದು ಹೋಗಿವೆ ಎಂಬುದನ್ನು ಅರಗಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ! ನಾವಿನ್ನೂ ಬದುಕಿಯೇ ಇದ್ದೇವೆಯೇ ಎಂದು ಅಂತಃಸಾಕ್ಷಿಯನ್ನು ಪ್ರಶ್ನಿಸಬೇಕಿದೆ.

 ಈ ಘಟನೆಯೊಂದೇ ಅಲ್ಲ, ಇತ್ತೀಚೆಗೆ ಸುದ್ದಿಯಾದ ಪುತ್ತೂರು ಕಾಲೇಜೊಂದರ ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರದ ವೀಡಿಯೊ ವೈರಲ್ ಘಟನೆಯೂ ಸಾಮಾನ್ಯ ಘಟನೆ ಎಂದು ನಿರ್ಲಕ್ಷಿಸುವಂಥದ್ದಲ್ಲ. ಇವು ಯಾವುವೂ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸುದ್ದಿಯಾಗದೇ ಇರುವುದು, ಪ್ರತಿಭಟನೆಗೆ ಕಾರಣವಾಗದೇ ಇರುವುದು, ಸರಕಾರಕ್ಕೆ ಒತ್ತಡ ಹೇರದೇ ಇರುವುದು ಇವೆಲ್ಲ ಒಂದು ರಾಜಕೀಯ ಷಡ್ಯಂತ್ರದೊಳಗಿನ ಜಾಣ ಮೌನ ಇರಬಹುದೇನೋ ಎಂಬ ಸಂಶಯ ಮೂಡುತ್ತದೆ. ಕರಾವಳಿ ಈಗಾಗಲೇ ಕೆಲವು ಸುಳಿವಿರದ ಅತ್ಯಾಚಾರ ಪ್ರಕರಣಗಳಿಗೆ, ವಿದ್ಯಾರ್ಥಿನಿ ಅಸಹಜ ಸಾವಿನ ಪ್ರಕರಣಗಳಿಗೆ ಸಾಕ್ಷಿಯಾಗಿದೆ. ಇನ್ನೆಷ್ಟು ಇಂತಹ ಉತ್ತರವಿಲ್ಲದ ಕ್ರೌರ್ಯ ಘಟಿಸಬಹುದು ಎಂದು ಹೇಳಲಾಗದು.

‘‘ಮದರ್ ಇಂಡಿಯಾ ಎಂದು ದೇಶವನ್ನು ಕರೆಯುತ್ತೇವೆಯೇ ಹೊರತು ಫಾದರ್ ಇಂಡಿಯಾ ಎಂದು ಕರೆಯುವುದಿಲ್ಲ. ಇದು ನಮ್ಮ ದೇಶ ಹೆಣ್ಣಿಗೆ ಕೊಡುವ ಗೌರವ’’ ಎಂದು ತೀರಾ ಇತ್ತೀಚೆಗೆ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿಕೆ ನೀಡಿದ್ದರು. ಗಮನಿಸಬೇಕಾದ ಅಂಶ ಎಂದರೆ, ಇಂತಹ ಘೋಷವಾಕ್ಯಗಳು ನಿಜಕ್ಕೂ ಹೆಣ್ಣಿಗೆ ಮುಳುವಾಗಿವೆಯೇ ಎಂಬುದು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ, ಹೆಣ್ಣು ಸಮಾಜದ ಕಣ್ಣು, ಬೇಟಿ ಬಚಾವೊ ಬೇಟಿ ಪಢಾವೊ, ಮದರ್ ಇಂಡಿಯಾ, ಭಾರತ ಮಾತೆ.... ಇವೆಲ್ಲವೂ ಏನು? ಪ್ರತಿಮಾತ್ಮಕವಾಗಿ ಹೆಣ್ಣಿನ ಕೊರಳಿಗೆ ತೂಗು ಹಾಕಲಾದ ಬೋರ್ಡುಗಳು. ಆದರೆ ವ್ಯವಸ್ಥೆಯ ಒಳಗೆ ನಡೆಯುತ್ತಿರುವುದಕ್ಕೂ, ಈ ಘೋಷವಾಕ್ಯಗಳಿಗೂ ಎಷ್ಟೊಂದು ವೈರುಧ್ಯ! ಹೆಣ್ಣು ಸಮಾಜದ ಕಣ್ಣು ಎನ್ನುತ್ತಲೇ ಕೆಲಸ ಇಲ್ಲದ ವಿಕೃತ ಕಾಮಿಗಳಿಂದ ಹಿಡಿದು ಅಧಿಕಾರದಲ್ಲಿರುವವರೂ ಹೆಣ್ಣನ್ನು ಅತ್ಯಾಚಾರ ಮಾಡುತ್ತಿದ್ದಾರೆ. ಅದು ಇತಿಹಾಸದ ಪುಟ ಸೇರಿದ ಮೇಲೆ ರೇಪ್ ಕೇಸಿನ ಕತೆ ಹೇಳಿಕೊಂಡು ಸದನದಲ್ಲಿ ಹಾಸ್ಯ ಮಾಡುತ್ತಾರೆ ! ಏನಿದು? ಇದು ಭಾರತವೇ?

ದೇಶ ಆಯ್ಕೆಯಿಲ್ಲದೆ ಸೋತಿದೆ. ಅಮಾಯಕ ಹೆಣ್ಣು ಅಸಹಾಯಕಳಾಗಿ ತತ್ತರಿಸುತ್ತಿದ್ದಾಳೆ. ಹಳ್ಳಿಗಳನ್ನು ಹಳ್ಳಿಗಳಾಗಿ ಉಳಿಸದೆ ಅಲ್ಲಿಯ ಹೆಣ್ಣು ಮಕ್ಕಳಿಗೆ ಸಿಟಿ ಬದುಕಿನ ರಂಗು ರಂಗಿನ ಲೋಕಕ್ಕೆ ಇನ್ಯಾವುದೋ ರೂಪದಲ್ಲಿ ಸೆಳೆಯಳಾಗುತ್ತಿದೆ. ಕೆಲಸ ಹುಡುಕಿಕೊಂಡು ನಗರಕ್ಕೆ ಬರುವ ಹೆಣ್ಣುಮಕ್ಕಳು ಬಂದಷ್ಟೇ ಜಾಗರೂಕತೆಯಿಂದ ತಿರುಗಿ ಮನೆ ತಲುಪಬಹುದು ಎನ್ನುವ ಧೈರ್ಯವನ್ನು, ವಿಶ್ವಾಸವನ್ನು ಅವರಿಗೆ ನೀಡುವಲ್ಲಿ ‘‘ಭಾರತ್ ಮಾತಾ ಕಿ ಜೈ’’ ಎಂದು ಘೋಷಣೆ ಕೂಗುವ ನಾವು ಸೋತಿದ್ದೇವೆ. ಹೋರಾಟದ ಬಿಸಿಯನ್ನು ಕಳೆದ ಐದು ವರ್ಷದ ಅವಧಿಯಲ್ಲಿ ಈ ಸರಕಾರ ಅನುಭವಿಸಲೇ ಇಲ್ಲ. ದಿಲ್ಲಿಗೆ ಹೊರಟ ರೈತರ ಹೋರಾಟವೂ ಇವರಿಗೆ ಸಾಕೆನಿಸಲಿಲ್ಲ. ದೇಶದ ಪ್ರತಿ ಮೂಲೆಯೂ ಎಚ್ಚೆತ್ತುಕೊಂಡು ಹೋರಾಡಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ. ನ್ಯಾಯದ ಉದ್ದೇಶವಿಟ್ಟುಕೊಂಡು ಹೋರಾಡಿದರೆ, ಇಡೀ ದೇಶವನ್ನು ನಡುಗಿಸುವ ಶಕ್ತಿ ಸದ್ಯದ ವಿರೋಧ ಪಕ್ಷಕ್ಕಿದೆ. ಆದರೆ ಅದು ಜವಾಬ್ದಾರಿ ಮರೆತಿದೆ. ಅತ್ಯಾಚಾರ ಪ್ರಕರಣಗಳು ಈ ದೇಶಕ್ಕೆ ಹೊಸತಲ್ಲ ಎಂಬ ಸತ್ಯವನ್ನು ತಲೆ ತಗ್ಗಿಸಿಯೇ ಹೇಳಬೇಕು. ಹಿಂದೆ ಇಂತಹ ಘಟನೆಗಳು, ಅವುಗಳ ರಹಸ್ಯ ಬಯಲಾಗುವಷ್ಟರಲ್ಲಿ ಅವೆಲ್ಲ ಕರಾಳ ಇತಿಹಾಸ ವಾಗಿರುತ್ತಿತ್ತು. ಆದರೂ ಜನರಲ್ಲಿ ಹೋರಾಟದ ಕಿಚ್ಚಿತ್ತು. ಏನೇ ಆದರೂ ಬೀದಿಗಿಳಿಯುವ ಗಟ್ಟಿತನ ಇತ್ತು. ತಂತ್ರಜ್ಞಾನ ಬೆಳೆದು, ಜಗತ್ತಿನ ಸುದ್ದಿಯನ್ನೂ ಸೆಕೆಂಡುಗಳಲ್ಲಿ ಪಡೆಯಬಲ್ಲಷ್ಟು ವೇಗ ಗಳಿಸಿಕೊಂಡ ಈ ಕಾಲಘಟ್ಟದಲ್ಲಿಯೂ ಇಂತಹ ಘಟನೆಗಳು ಕಣ್ಣ ಮುಂದೆಯೇ ಕರಾಳತೆಯ ಕಡೆಗೆ ಮುಖ ಮಾಡುವುದನ್ನು ನೋಡುತ್ತಾ, ಏನೂ ಅನಿಸದೆ ನಿಲ್ಲುತ್ತೇವಲ್ಲ ಎಂಬುದು ಭಯ ಹುಟ್ಟಿಸುತ್ತದೆ.
ಹಾಗಾಗಿ ಎಚ್ಚೆತ್ತುಕೊಳ್ಳಲು, ಒಂದಿಷ್ಟು ದನಿಯಾಗಲು, ಬದುಕಿದ್ದೇವೆ ಎಂದು ತೋರಿಸುವ ಜನರು ಇನ್ನಾದರೂ ಒಟ್ಟಾಗಬೇಕಿದೆ. ಪರಂಪರೆಯ ಚಳವಳಿಯ ಸ್ವರೂಪಕ್ಕೆ ಮರುಜೀವ ಕೊಡಬೇಕಿದೆ.

Writer - ಮುಹಮ್ಮದ್ ಶರೀಫ್, ಕಾಡುಮಠ

contributor

Editor - ಮುಹಮ್ಮದ್ ಶರೀಫ್, ಕಾಡುಮಠ

contributor

Similar News