ಪ್ರಗತಿಶೀಲ ಕಾಲದ ಸಣ್ಣ ಕತೆಗಳು

Update: 2019-07-31 19:11 GMT

ವಡ್ಡಾರಾಧನೆಯಿಂದ ಹಿಡಿದು ಈವರೆಗೆ ಕನ್ನಡ ಕಥಾ ಇತಿಹಾಸ, ಇಲ್ಲಿನ ಜನಜೀವನವನ್ನು ಕಾಲಕ್ಕೆ ತಕ್ಕಂತೆ ಬೇರೆ ಬೇರೆ ನೆಲೆಗಳಲ್ಲಿ ಕಟ್ಟಿ ಕೊಟ್ಟಿದೆ. ನವೋದಯ ಪೂರ್ವ, ನವೋದಯ, ನವ್ಯ, ಪ್ರಗತಿಶೀಲ, ಬಂಡಾಯ, ದಲಿತ....ಹೀಗೆ ಸಾಹಿತ್ಯ ಮಗ್ಗಲು ಬದಲಿಸಿದಂತೆಯೇ ಕತೆಗಳೂ ತನ್ನ ಅಭಿವ್ಯಕ್ತಿಯ ವಿಧಾನಗಳನ್ನು ಬದಲಿಸಿದೆ. ಮತ್ತು ಆಯಾ ಕಾಲಕ್ಕೆ ತನ್ನ ಪ್ರತಿಕ್ರಿಯೆಗಳನ್ನು ನೀಡಿದೆ. ಕನ್ನಡ ಕತೆಗಳ ಕಣಜಗಳನ್ನು ಅಧ್ಯಯನ ಮಾಡಿದಂತೆಯೇ ಇಲ್ಲಿನ ಜನಜೀವನ ಹಾದು ಬಂದ ದಾರಿಯೊಂದು ತೆರೆದುಕೊಳ್ಳುತ್ತದೆ. ಈ ಕಾರಣದಿಂದಲೇ, ಕನ್ನಡದ ಮಹತ್ವದ ಕತೆಗಳ ಹಾದಿಯನ್ನು ಮತ್ತೆ ಮತ್ತೆ ನಾವು ಅವಲೋಕಿಸಬೇಕಾಗುತ್ತದೆ. ಹಲವರು ಕನ್ನಡ ಕತೆಗಳನ್ನು ಮುಂದಿಟ್ಟುಕೊಂಡು ಇಲ್ಲಿನ ಸಾಮಾಜಿಕ, ಸಾಂಸ್ಕೃತಿಕ ಬದುಕನ್ನು ವಿಶ್ಲೇಷಿಸಿದ್ದಾರೆ. ಇನ್ನು ಹಲವರು, ಇಲ್ಲಿನ ಪ್ರಾತಿನಿಧಿಕ ಕತೆಗಳನ್ನು ಸಂಗ್ರಹಿಸಿ, ಸಂಪಾದಿಸಿ ಹೊರತಂದಿದ್ದಾರೆ. ಇಂತಹ ಯಾವುದೇ ಸಂಪಾದನೆ ಅಲ್ಲಿಗೆ ಮುಗಿಯುವುದಿಲ್ಲ. ಕಾಲಕ್ಕೆ ತಕ್ಕಂತೆಯೇ ಕತೆಗಳ ಮಹತ್ವ ಬದಲಾಗುತ್ತಾ ಹೋಗುತ್ತದೆ. ಈ ನಿಟ್ಟಿನಲ್ಲಿ ಅತ್ಯುತ್ತಮ ಕತೆಗಳನ್ನು ಗುರುತಿಸುವ ಕೆಲಸ ಪದೇ ಪದೇ ನಡೆಯುತ್ತಲೇ ಇರಬೇಕಾಗುತ್ತದೆ. ಇಂದಿನವರೆಗೆ ಬಂದಿರುವ ಕೆಲವು ಸಂಕಲನಗಳಲ್ಲಿ ಅನಕೃ ಅವರ ‘ಕಾಮನಬಿಲ್ಲು’ ಒಂದು ಮೈಲುಗಲ್ಲು ಎಂದು ಗುರುತಿಸುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಂಪಾದಿಸಿರುವ 12 ಕತೆಗಳ ಸಂಕಲನ ನಮಗೆ ಮುಖ್ಯವಾಗುತ್ತದೆ. ಕೆ. ನರಸಿಂಹ ಮೂರ್ತಿ ಅವರು ಕೃತಿಯನ್ನು ಸಂಪಾದಿಸಿದ್ದಾರೆ.

ಇಲ್ಲಿರುವ ಕತೆಗಳು ಪ್ರಗತಿಶೀಲ ಕಾಲದವುಗಳು. ಬಸವರಾಜ ಕಟ್ಟೀಮನಿ ಅವರ ಗಿರಿಜಾ ಕಂಡ ಸಿನೆಮಾ, ಚದುರಂಗ ಅವರ ನಾಲ್ಕು ಮೊಳ ಭೂಮಿ, ಅನುಪಮಾ ಅವರ ದೇವರೇ ಬರಲಿಲ್ಲ, ಎಸ್. ಅನಂತನಾರಾಯಣ ಅವರ ಮಾನವ ಪ್ರೇಮ, ಕೋ. ಚೆನ್ನಬಸಪ್ಪ ಅವರ ಮುಕ್ಕಣ್ಣನ ಮುಕ್ತಿ, ವರಗಿರಿ ಅವರ ದ್ಯಾಮ-ಕೆಂಚಿ, ಶೇಷಗಿರಿರಾವ್ ಅವರ ಮುಯ್ಯಿ, ವರದರಾಜ ಹುಯಿಲಗೋಳ ಅವರ ಬಾಗಿಲು ತೆರೆದಿತ್ತು, ಮಿರ್ಜಿ ಅಣ್ಣಾರಾಯರ ನಮ್ಮೂರ ನಾಯಕರು, ವಿ.ಜಿ.ಭಟ್ಟರ ರಾಮರಾಜ್ಯ, ಅನುಭವಾಮೃತ, ಗುಪ್ತಚಾರ, ಶ್ರೀಕಾಂತ ಅವರ ಭೂಮಿಕಂಪಿಸಲಿಲ್ಲ, ಸದಾಶಿವ ಅವರ ನಲ್ಲಿಯಲ್ಲಿ ನೀರು ಬಂತು ಕತೆಗಳು ಇಲ್ಲಿವೆ.

ಹೊಸತಲೆಮಾರಿನ ಕತೆಗಾರರು ಇಲ್ಲಿರುವ ಬಹುತೇಕ ಕತೆಗಾರರ ಹೆಸರನ್ನು ಕೇಳಿರುವುದು ಕಡಿಮೆ. ಹಾಗೆಯೇ ಇಲ್ಲಿರುವ ಕತೆಗಳನ್ನು ಓದಿರುವ ಸಾಧ್ಯತೆಗಳು ಅಲ್ಪ. ಹಳೆಬೇರನ್ನು ಅರಿತುಕೊಂಡಾಗಷ್ಟೇ ಹೊಸ ಚಿಗುರು ತನ್ನ ಮುಂದಿರುವ ದಾರಿಯನ್ನು ಸ್ಪಷ್ಟಪಡಿಸಿಕೊಳ್ಳಲು ಸಾಧ್ಯ. ಇಲ್ಲಿರುವ ಕತೆಗಳ ಸರಳತೆ, ಜೀವಂತಿಕೆ, ಮಾನವೀಯತೆ ನಮ್ಮನ್ನು ಕಾಡುವಂಥವುಗಳು.150 ಪುಟಗಳ ಈ ಕೃತಿಯ ಮುಖಬೆಲೆ 80 ರೂಪಾಯಿ.

Writer - ಕಾರುಣ್ಯಾ

contributor

Editor - ಕಾರುಣ್ಯಾ

contributor

Similar News