‘ಮೋದಿ ಪ್ರತಿಯೊಬ್ಬರಿಗೂ 15 ಲಕ್ಷ ರೂ. ನೀಡುತ್ತಿದ್ದಾರೆ’: ವದಂತಿ ನಂಬಿ ಅಂಚೆ ಕಚೇರಿ ಮುಂದೆ ಸಾಲುಗಟ್ಟಿ ನಿಂತ ಜನರು!

Update: 2019-08-01 10:29 GMT
Photo: The News Minute

ತಿರುವನಂತಪುರ, ಆ.1: ಕೇರಳದ ಮುನ್ನಾರ್ ಪೋಸ್ಟ್ ಆಫೀಸ್ ಸಿಬ್ಬಂದಿಗೆ ರವಿವಾರ ಅಚ್ಚರಿ ಕಾದಿತ್ತು. ನೂರಾರು ಜನರು ಆ ದಿನ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ತೆರೆಯಲು ಕಾದು ನಿಂತಿದ್ದರು. ಅವರಲ್ಲಿನ ಈ ಉತ್ಸಾಹ  ಒಳ್ಳೆಯದೇ ಆದರೂ ಇದರ ಹಿಂದಿನ ಕಾರಣ ಒಂದು ವಾಟ್ಸ್ಯಾಪ್ ಸಂದೇಶವಾಗಿತ್ತು. ಅಷ್ಟಕ್ಕೂ ಈ ಸಂದೇಶ ನಕಲಿ ಎಂದು ತಿಳಿಯದ ಮುಗ್ಧರು ಸರತಿ ನಿಂತಿದ್ದರು.

ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ತೆರೆಯುವವರಿಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ 2014 ಚುನಾವಣಾ ಪ್ರಚಾರದಲ್ಲಿ ಆಶ್ವಾಸನೆ ನೀಡಿದಂತೆ 3 ಲಕ್ಷ ರೂ.ಗಳಿಂದ ಹಿಡಿದು 15 ಲಕ್ಷ ರೂ.ವರೆಗೆ ಹಣ ಜಮೆಯಾಗಲಿದೆ ಎಂಬುದೇ ಆ ನಕಲಿ ಸಂದೇಶವಾಗಿತ್ತು.

ಈ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿ ಹೆಚ್ಚಾಗಿ ಎಸ್ಟೇಟ್ ಕಾರ್ಮಿಕರು ಪೋಸ್ಟ್ ಆಫೀಸ್ ಮುಂದೆ ಸರತಿ ನಿಂತಿದ್ದರು.

ರವಿವಾರ ಅಂಚೆ ಕಚೇರಿ ಖಾತೆ ತೆರೆಯುವ ಅಭಿಯಾನವೂ ಇದ್ದುದರಿಂದ ಆ ದಿನ ಅಂಚೆ ಕಚೇರಿ ತೆರೆದಿತ್ತು. ಇದು  ಕೂಡ  ಈ ವದಂತಿಯನ್ನು ಜನರು ನಂಬುವಂತೆ ಮಾಡಿತ್ತು. ಅಂಚೆ ಕಚೇರಿಗೆ ಆಗಮಿಸುವವರ ಸಂಖ್ಯೆ ಅಧಿಕವಾದಂತೆಯೇ ಪೊಲೀಸರು  ಅಲ್ಲಿದ್ದವರನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು.

ಜನರ ಸಂಶಯ ನಿವಾರಿಸಲು ಅಂಚೆ ಕಚೇರಿ ಅಧಿಕಾರಿಗಳು ಕಚೇರಿಯೆದುರು ಒಂದು ಸೂಚನಾ ಫಲಕ ಅಳವಡಿಸಿದರೂ ಅದರಿಂದ ಪ್ರಯೋಜನವಾಗಲಿಲ್ಲ.  ದೇವಿಕುಳಂನಲ್ಲಿನ ಆರ್‍ಡಿಒ ಕಚೇರಿಯಲ್ಲೂ ಇದೇ ಪರಿಸ್ಥಿತಿಯಿತ್ತು.

ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ತೆರೆದವರ ಖಾತೆಗೆ ಹಣ ಜಮೆ ಮಾಡಲಾಗುವುದು ಎಂಬ ನಕಲಿ ಸುದ್ದಿ ಕುರಿತಂತೆ ಯಾವುದೇ ದೂರು ದಾಖಲಾಗಿಲ್ಲ, ದೂರು ಬಂದರೆ ತನಿಖೆ ನಡೆಸಲಾಗುವುದು ಎಂದು ಜಿಲ್ಲಾ ಕಲೆಕ್ಟರ್ ಎಚ್ ದಿನೇಶನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News