ಎಸ್‌ಐಟಿ ತನಿಖಾ ಪ್ರಗತಿ ವರದಿ ಹೈಕೋರ್ಟ್‌ಗೆ ಸಲ್ಲಿಕೆ

Update: 2019-08-01 15:57 GMT

ಬೆಂಗಳೂರು, ಆ.1: ಐಎಂಎ(ಐ ಮಾನಿಟರಿ ಅಡ್ವೈಸರಿ) ಸಮೂಹ ಕಂಪೆನಿ ಹಗರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ(ಎಸ್‌ಐಟಿ) ಈತನಕ ನಡೆಸಿರುವ ತನಿಖೆಯ ವರದಿಯನ್ನು ಗುರುವಾರ ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್‌ಗೆ ಸಲ್ಲಿಸಿತು.

ಐಎಂಎ ಹಗರಣವನ್ನು ಸಿಬಿಐ ತನಿಖೆಗೆ ವಹಿಸಲು ನಿರ್ದೇಶಿಸಲು ಕೋರಿ ಸಲ್ಲಿಸಲಾಗಿದ್ದ ಐದು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಹಾಗೂ ನ್ಯಾಯಮೂರ್ತಿ ಮುಹಮ್ಮದ್ ನವಾಝ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ತನಿಖಾ ವರದಿಯನ್ನು ಪಡೆದುಕೊಂಡ ನ್ಯಾಯಪೀಠವು ಸದ್ಯ ಎಸ್‌ಐಟಿ ತನಿಖೆಯ ಪ್ರಗತಿಯನ್ನು ಗಮನಿಸಿದ್ದೇನೆ. ಈ.ಡಿ. ಹಾಗೂ ಎಸ್‌ಐಟಿ ಪರಸ್ಪರ ಪೂರಕವಾಗಿ ತನಿಖೆಯನ್ನು ನಡೆಸಲಿ. ಆಸ್ತಿ ಜಪ್ತಿ ಮಾಡಿರುವ ವಿವರವನ್ನು ಪರಸ್ಪರ ವಿನಿಯಮ ಮಾಡಿಕೊಳ್ಳಬೇಕು. ತನಿಖಾ ಪ್ರಗತಿ ವರದಿಯನ್ನು ಲಕೋಟೆಯಲ್ಲಿಡಿ ಕೋರ್ಟ್ ಮುಂದಿನ ಆದೇಶದವರೆಗೆ ಲಕೋಟೆ ತೆರೆಯದಂತೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ಗೆ ಹೈಕೋರ್ಟ್ ನಿರ್ದೇಶನ ನೀಡಿತು.

ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ವಾದಿಸಿ, ಐಎಂಎ ಬಗ್ಗೆ ಎಸ್‌ಐಟಿ ತನಿಖೆ ನಡೆಸುತ್ತಿದೆ. ಹಾಗೆಯೇ ಹಲವಾರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಫೊರೆನ್ಸಿಕ್ ಆಡಿಟ್ ಬಗ್ಗೆಯೂ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಎಸ್‌ಐಟಿ ಪರವಾಗಿ ಎಸ್‌ಪಿಪಿ ಬಿ.ಎನ್.ಜಗದೀಶ್ ವಾದಿಸಿದರು. ಅರ್ಜಿದಾರರ ಪರವಾಗಿ ವಕೀಲ ರಹಮತುಲ್ಲಾ ಕೊತ್ವಾಲ್, ಜಿ.ಆರ್.ಮೋಹನ್, ಮುಜಾಮಿಲ್ ಮುಷ್ತಾಕ್ ಶಾ, ಅರ್ಜಿದಾರ ಮೊಹಮ್ಮದ್ ತಾಹಿರ್ ವಾದಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ವಿಚಾರಣೆಯನ್ನು ಆ.20ರವರೆಗೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News