×
Ad

ನಕ್ಷೆ ಮಂಜೂರಾತಿ ಪಡೆಯುವ ಅಗತ್ಯವಿಲ್ಲ: ಮಂಜುನಾಥ್ ಪ್ರಸಾದ್

Update: 2019-08-01 22:53 IST

ಬೆಂಗಳೂರು, ಆ.1: ಬಿಬಿಎಂಪಿ ವ್ಯಾಪ್ತಿಯಲ್ಲಿ 40x60(2,400ಚ.ಅಡಿ) ಹಾಗೂ ಅದಕ್ಕಿಂತ ಕಡಿಮೆ ವಿಸ್ತೀರ್ಣದ ನಿವೇಶನದಲ್ಲಿ ಮನೆ ನಿರ್ಮಿಸಲು ಬಿಬಿಎಂಪಿ ನಕ್ಷೆ ಮಂಜೂರಾತಿ ಪಡೆಯುವ ಅಗತ್ಯವಿಲ್ಲ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದರೆ ಸಾಕು ಎಂದು ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.

ನಂಬಿಕೆ ಮತ್ತು ಪರಿಶೀಲನೆ ಆಧಾರದ ಮೇಲೆ 2,400 ಚ.ಅಡಿ ಅಥವಾ ಅದಕ್ಕಿಂತ ಕಡಿಮೆ ವಿಸ್ತೀರ್ಣದ ನಿವೇಶನಗಳಲ್ಲಿ ನಕ್ಷೆ ಮಂಜೂರಾತಿ ಇಲ್ಲದಿದ್ದರೂ ಕಟ್ಟಡ ನಿರ್ಮಾಣಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಆದರೆ, ಕಟ್ಟಡ ನಿರ್ಮಿಸುವವರು ಕಡ್ಡಾಯವಾಗಿ ನೋಂದಾಯಿತ ವಾಸ್ತುಶಿಲ್ಪಿಗಳಿಂದ ನಕ್ಷೆಯನ್ನು ಸಿದ್ಧಪಡಿಸಿ ಪಾಲಿಕೆಗೆ ಸಲ್ಲಿಸಬೇಕು. ಕಟ್ಟಡದ ನಿರ್ಮಾಣದ ಬಳಿಕ ಅಗತ್ಯವಿದ್ದಲ್ಲಿ ಬಿಬಿಎಂಪಿಯಿಂದ ಪರಿಶೀಲನೆ ನಡೆಸಲಾಗುವುದು. ಈ ನೂತನ ವ್ಯವಸ್ಥೆಯು ಆ.15 ರಿಂದ ಜಾರಿಯಾಗಲಿದೆ ಎಂದರು.

ನಕ್ಷೆಯನ್ನು ಆನ್‌ಲೈನ್ ಮೂಲಕ ಸಲ್ಲಿಕೆ ಮಾಡಿದ ತಕ್ಷಣ ಕೆಲಸ ಆರಂಭ ಮಾಡಬಹುದು. ಬಿಬಿಎಂಪಿ ಅಧಿಕಾರಿಗಳ ಪರಿಶೀಲನೆ ಹಾಗೂ ಅನುಮೋದನೆಗೆ ಕಾಯುವಂತಿಲ್ಲ. ಒಂದು ವೇಳೆ ಸುಳ್ಳು ದಾಖಲೆ ನೀಡಿ ಅಥವಾ ನಕ್ಷೆ ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡಿದ್ದಲ್ಲಿ ಅಂತಹ ಕಟ್ಟಡ ಮಾಲಕರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ವಾಣಿಜ್ಯ ಉದ್ದೇಶಕ್ಕೆ ಅನ್ವಯಿಸದು: 40x60 ನಿವೇಶನದಲ್ಲಿ ವಸತಿ ಉದ್ದೇಶಕ್ಕೆ ಕಟ್ಟುವ ಕಟ್ಟಡಗಳಿಗೆ ಮಾತ್ರ ನಂಬಿಕೆ ಹಾಗೂ ಪರಿಶೀಲನೆ ಆಧಾರದ ನಿಯಮ ಅನ್ವಯವಾಗಲಿದೆ. ವಾಣಿಜ್ಯ ಕಟ್ಟಡಗಳಿಗೆ ಅನ್ವಯಿಸುವುದಿಲ್ಲ. ನೆಲಮಾಳಿಗೆ ಹಾಗೂ ಮೂರು ಅಂತಿಸ್ತಿನ ಕಟ್ಟಡ ನಿರ್ಮಿಸಬಹುದು. ಈ ಮೊದಲು 300 ಚ.ಅಡಿಗಿಂತ ಹೆಚ್ಚಿನ ಎಲ್ಲ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ಪಡೆಯಬೇಕಿತ್ತು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News