ಅಬುಲ್ದ್ ಅಝೀಮ್‌ಗೆ ಸಚಿವ ಸ್ಥಾನ ನೀಡಲು ಮುಖಂಡರ ಆಗ್ರಹ
ಬೆಂಗಳೂರು, ಆ.1: ವಿಧಾನಪರಿಷತ್ತಿನ ಮಾಜಿ ಸದಸ್ಯ ಹಾಗೂ ರಾಜ್ಯ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾದ ಅಧ್ಯಕ್ಷ ಅಬ್ದುಲ್ ಅಝೀಮ್‌ರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ರಾಜ್ಯ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ಉಪಾಧ್ಯಕ್ಷ ಚಾಂದ್ ಪಾಷ ಆಗ್ರಹಿಸಿದರು.
ಗುರುವಾರ ಇನ್‌ಫೆಂಟ್ರಿ ರಸ್ತೆಯಲ್ಲಿರುವ ಗುಲಿಸ್ತಾನ್ ಶಾದಿ ಮಹಲ್‌ನಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾವನ್ನು ಸಂಘಟಿಸುವಲ್ಲಿ ಅಬ್ದುಲ್ ಅಝೀಮ್ ಪ್ರಮುಖ ಪಾತ್ರ ವಹಿಸಿದ್ದಾರೆ. ಪೊಲೀಸ್ ಅಧಿಕಾರಿಯಾಗಿ, ವಿಧಾನಪರಿಷತ್ ಸದಸ್ಯರಾಗಿ ಸಾಕಷ್ಟು ಅನುಭವವನ್ನು ಹೊಂದಿದ್ದಾರೆ. ಆದುದರಿಂದ, ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ ಎಂದರು.
ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಶ್ರಮಿಸಲಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಬಜೆಟ್ 400 ಕೋಟಿ ರೂ.ಗಳಿಗೆ ತಲುಪಿಸಿದ್ದು, ಹಜ್ ಭವನ ನಿರ್ಮಾಣಕ್ಕೆ ಅನುದಾನ ಒದಗಿಸಿದ್ದು ಯಡಿಯೂರಪ್ಪ ಸರಕಾರ. ಈ ಅವಧಿಯಲ್ಲಿ ಪ್ರಮುಖವಾಗಿ ಅಲ್ಪಸಂಖ್ಯಾತರ ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಒತ್ತು ನೀಡುವಂತೆ ಮನವಿ ಮಾಡಲಾಗುವುದು ಎಂದು ಅವರು ಹೇಳಿದರು.
ಬೆಂಗಳೂರು ನಗರ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ಅಧ್ಯಕ್ಷ ಮುಹಮ್ಮದ್ ಕಬೀರ್ ಅಹ್ಮದ್ ಮಾತನಾಡಿ, ಬಿಜೆಪಿಯಿಂದ ದೂರ ಹೋಗುತ್ತಿದ್ದ ಅಲ್ಪಸಂಖ್ಯಾತರನ್ನು ಸಂಘಟಿಸುವಲ್ಲಿ ಅಬ್ದುಲ್ ಅಝೀಮ್ ಶ್ರಮಿಸಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡುವಂತೆ ನಿನ್ನೆ ನಡೆದ ನಮ್ಮ ಮೋರ್ಚಾದ ಕಾರ್ಯಕಾರಿಣಿ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಂಡು, ಮುಖ್ಯಮಂತ್ರಿಗೆ ಮನವಿ ಮಾಡಿದ್ದೇವೆ ಎಂದರು.
ಟಿಪ್ಪು ಜಯಂತಿ ಬಗ್ಗೆ ಸ್ಪಷ್ಟಣೆ: ಯಡಿಯೂರಪ್ಪ ಎಂದಿಗೂ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಮಾಡಿಲ್ಲ. ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ಭಾವಚಿತ್ರಗಳು, ಅವರು ಕೆಜೆಪಿ ಕಟ್ಟಿದಾಗ ನಾನು ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷನಾಗಿದ್ದೆ. ಆಗ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಅವರನ್ನು ಸನ್ಮಾನಿಸಲು ಟಿಪ್ಪು ಪೇಟವನ್ನು ತೊಡಿಸಲಾಗಿತ್ತು ಎಂದು ಕಬೀರ್ ಅಹ್ಮದ್ ಸ್ಪಷ್ಟಣೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಅಲ್ಪಸಂಖ್ಯಾತರ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಮುಬಾರಕ್, ಉಪಾಧ್ಯಕ್ಷ ನಝೀರ್ ಪಾಷ, ಬೆಂಗಳೂರು ನಗರ ಜಿಲ್ಲಾ ಉಪಾಧ್ಯಕ್ಷ ಸಯ್ಯದ್ ಅಝ್ಗರ್ ಪಾಷ ಉಪಸ್ಥಿತರಿದ್ದರು.