ಒಬ್ಬ ವ್ಯಕ್ತಿಯನ್ನು 'ಉಗ್ರ' ಎಂದು ಘೋಷಿಸುವ ಯುಎಪಿಎ ತಿದ್ದುಪಡಿ ಮಸೂದೆಗೆ ರಾಜ್ಯಸಭೆ ಅನುಮೋದನೆ

Update: 2019-08-02 08:59 GMT

ಹೊಸದಿಲ್ಲಿ, ಆ.2: ಒಬ್ಬ ವ್ಯಕ್ತಿಯನ್ನು `ಉಗ್ರವಾದಿ' ಎಂದು ಘೋಷಿಸುವ ಅಧಿಕಾರವನ್ನು ನೀಡುವ ಕಾನೂನುಬಾಹಿರ ಚಟುವಟಿಕೆ (ತಡೆ) ತಿದ್ದುಪಡಿ ವಿಧೇಯಕಕ್ಕೆ ಇಂದು ರಾಜ್ಯಸಭೆ ಅನುಮೋದನೆ  ನೀಡಿದೆ. ಒಟ್ಟು 147 ಮತಗಳು ವಿಧೇಯಕದ ಪರ ಬಿದ್ದರೆ, 42 ಮತಗಳು ವಿಧೇಯಕದ ವಿರುದ್ಧ ಬಿದ್ದವು. ಈ ತಿದ್ದುಪಡಿ ಮಸೂದೆಗೆ ಲೋಕಸಭೆ ಜುಲೈ 24ರಂದೇ ಅನುಮೋದನೆ ನೀಡಿತ್ತು,

“ಉಗ್ರವಾದಕ್ಕೆ ಯಾವುದೇ ಧರ್ಮವಿಲ್ಲ, ಉಗ್ರರು ಮಾನವತೆಯ ವಿರುದ್ಧವಾಗಿದ್ದಾರೆ. ಉಗ್ರವಾದದ ವಿರುದ್ಧದ ಕಠಿಣ ಕಾನೂನುಗಳಿಗೆ ಎಲ್ಲರೂ ಬೆಂಬಲ ನೀಡಬೇಕು'' ಎಂದು ವಿಧೇಯಕದ ಮೇಲಿನ ಮತದಾನ ಆರಂಭಗೊಳ್ಳುವ ಮುನ್ನ ಗೃಹ ಸಚಿವ ಅಮಿತ್ ಶಾ ಹೇಳಿದರು.

ಒಬ್ಬ ವ್ಯಕ್ತಿಯನ್ನು ಉಗ್ರವಾದಿ ಎಂದು ಘೋಷಿಸುವ ಮೊದಲು ನಾಲ್ಕು ಹಂತದ ಪರಿಶೀಲನೆ ನಡೆಯುವುದರಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗುವುದಿಲ್ಲ ಎಂದೂ ಅವರು ಆಶ್ವಾಸನೆ ನೀಡಿದರು.

ಈ ತಿದ್ದುಪಡಿ ಮಸೂದೆಯನ್ನು ಆಯ್ಕೆ ಸಮಿತಿಯ ಮುಂದಿರಿಸಬೇಕೆಂಬ  ಆಗ್ರಹದೊಂದಿಗೆ ವಿಪಕ್ಷಗಳು ಮಂಡಿಸಿದ ನಿಲುವಳಿಯನ್ನು ಕೂಡ ರಾಜ್ಯಸಭೆ 104-85 ಮತಗಳ ಅಂತರದಿಂದ ತಿರಸ್ಕರಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News