×
Ad

ಸಂಸ್ಕರಣ ಘಟಕಗಳಿಗೆ ಸಾಗದ ಕಸ: ಬಿಬಿಎಂಪಿ ವ್ಯಾಪ್ತಿಯಲ್ಲಿ ವಿಲೇವಾರಿ ಸಮಸ್ಯೆ ಉಲ್ಬಣ

Update: 2019-08-02 18:56 IST

ಬೆಂಗಳೂರು, ಆ.2: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಸದ ವಿಲೇವಾರಿ ಸಮಸ್ಯೆ ಬಿಗಡಾಯಿಸುವ ಲಕ್ಷಣಗಳು ಕಂಡುಬರುತ್ತಿದ್ದು, ಪ್ರತಿ ವಾರ್ಡ್‌ನಿಂದ ನಿತ್ಯ ಸಂಸ್ಕರಣ ಘಟಕಗಳಿಗೆ ರವಾನೆಯಾಗುತ್ತಿದ್ದ ಎರಡು ಲೋಡ್‌ಗಳಷ್ಟು ಕಸವನ್ನು ಒಂದು ಲೋಡ್‌ಗೆ ಸೀಮಿತಗೊಳಿಸಲಾಗಿದೆ.

ಪ್ರಸ್ತುತ ಬೆಳ್ಳಳ್ಳಿಯ ಡಂಪಿಂಗ್ ಯಾರ್ಡ್‌ಗೆ ಕಸ ರವಾನೆಯಾಗುತ್ತಿದ್ದು, ನಗರದಲ್ಲಿ ಪ್ರತಿನಿತ್ಯ ಉತ್ಪತ್ತಿಯಾಗುವಷ್ಟು ಕಸ ಅಲ್ಲಿ ತುಂಬಿಸಲು ಆಗುತ್ತಿಲ್ಲ. ಒಂದು ವಾರದ ಹಿಂದೆ ಬೆಳ್ಳಳ್ಳಿ ಸುತ್ತಮುತ್ತ ಮಳೆಯಾಗಿರುವ ಕಾರಣ ಕ್ವಾರಿಯ ಒಳಭಾಗಕ್ಕೆ ಕಾಂಪ್ಯಾಕ್ಟರ್‌ಗಳು ಹೋಗಲು ಆಗುತ್ತಿಲ್ಲ. ಅಲ್ಲದೆ ಬೆಳ್ಳಳ್ಳಿ ಕ್ವಾರಿಯು ಕಸದಿಂದ ತುಂಬಿದೆ. ಇನ್ನೂ ಹೆಚ್ಚಿನ ತ್ಯಾಜ್ಯ ಅಲ್ಲಿ ಸುರಿಯಲು ಸ್ಥಳೀಯರು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಹಾಗಾಗಿ ಕಳೆದ ಒಂದು ವಾರದಿಂದ ಪಾಲಿಕೆಯ ತ್ಯಾಜ್ಯ ವಿಲೇವಾರಿ ಕಷ್ಟವಾಗುತ್ತಿದೆ.

ಮಿಟಗಾನಹಳ್ಳಿಯಲ್ಲಿ ಬದಲಿ ಜಾಗ ಗುರುತಿಸಿದ್ದರೂ ಇನ್ನೂ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಹೀಗಾಗಿ, ನಗರದ ಬಹುತೇಕ ವಾರ್ಡ್‌ಗಳಲ್ಲಿ ಎಲ್ಲೆಂದರಲ್ಲಿ ಕಸದ ರಾಶಿಗಳು ತಲೆ ಎತ್ತಿವೆ. ಕಳೆದೊಂದು ವಾರದಿಂದ ಕಸ ವಿಲೇವಾರಿ ಸಮಸ್ಯೆ ಬಿಗಡಾಯಿಸಿದ್ದು, ವಾರ್ಡ್‌ಗಳಲ್ಲಿ ಮತ್ತೆ ಬ್ಲಾಕ್ ಸ್ಪಾಟ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಹೀಗೇ ಮುಂದುವರಿದರೆ ನೂತನ ಬಿಜೆಪಿ ಸರಕಾರಕ್ಕೆ ತಲೆನೋವಾಗುವ ಸಾಧ್ಯತೆಯೂ ಇದೆ.

ಸದ್ಯ ಮಿಟಗಾನಹಳ್ಳಿಯಲ್ಲಿ ಡಂಪಿಂಗ್ ಯಾರ್ಡ್ ನಿರ್ಮಿಸಲು ಟೆಂಡರ್ ಕರೆಯಲಾಗಿದೆ. ಪ್ರಕ್ರಿಯೆ ಮುಗಿಯುತಿದ್ದಂತೆ ಕಸ ವಿಲೇವಾರಿ ಸುಲಭವಾಗಲಿದೆ. ಅಲ್ಲಿಯ ತನಕ ಸದ್ಯ ಎದುರಾಗಿರುವ ಕಸದ ಸಮಸ್ಯೆ ನಿರ್ವಹಿಸಲು ಪರ್ಯಾಯ ವ್ಯವಸ್ಥೆ ಕಂಡುಕೊಳ್ಳಲಾಗುವುದು ಎಂದು ಪಾಲಿಕೆಯ ಘನ ತ್ಯಾಜ್ಯ ನಿರ್ವಹಣೆ ಘಟಕಗಳ ಜಂಟಿ ಆಯುಕ್ತ ಸರ್ಫರಾಜ್ ಖಾನ್ ಹೇಳುತ್ತಾರೆ.

ಪ್ರತಿನಿತ್ಯ ಬೆಂಗಳೂರಿನಲ್ಲಿ 4500 ಟನ್ ಕಸ ಉತ್ಪತ್ತಿಯಾಗುತ್ತಿದೆ. ಈ ಕಸವನ್ನು ವಿಲೇವಾರಿ ಮಾಡಲು ಬಿಬಿಎಂಪಿ ಹೊರವಲಯಗಳಲ್ಲಿ 7 ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ತೆರೆದಿದೆ. ಕನ್ನಹಳ್ಳಿ, ಸೀಗೆಹಳ್ಳಿ, ಚಿಕ್ಕನಾಗಮಂಗಲ, ಸುಬ್ಬರಾಯನಪಾಳ್ಯ, ಲಿಂಗಧೀರನಹಳ್ಳಿ, ದೊಡ್ಡಬಿದರಕಲ್ಲು ಮತ್ತು ದೊಡ್ಡಬಳ್ಳಾಪುರದಲ್ಲಿ ಈ ತ್ಯಾಜ್ಯ ಸಂಸ್ಕರಣಾ ಘಟಕಗಳು ನಿರ್ಮಾಣವಾಗಿವೆ.

ದಿನವೊಂದಕ್ಕೆ ಪ್ರತಿ ಘಟಕದಲ್ಲಿ 100ರಿಂದ 150 ಟನ್ ಕಸ ವಿಲೇವಾರಿ ಆಗುತ್ತಿದೆ. ಈ ಪೈಕಿ 2000-2500ಟನ್ ಬೆಳ್ಳಳ್ಳಿ ಕ್ವಾರಿಯ ಹಳ್ಳಗಳಿಗೆ ತುಂಬಲಾಗುತ್ತಿದೆ. 1000-1500 ಟನ್ ಹಸಿ ಕಸ ಉತ್ಪತ್ತಿಯಾಗುತ್ತಿದ್ದು, ಇದನ್ನು ಗೊಬ್ಬರವಾಗಿ ಪರಿವರ್ತಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಕಾಂಪ್ಯಾಕ್ಟರ್‌ನಲ್ಲೇ ಕೊಳೆಯುತ್ತಿರುವ ಕಸ: ಬೆಳ್ಳಳ್ಳಿ ಕ್ವಾರಿಗೆ ಸುರಿಯ್ತುತಿರುವ ಕಸದ ಪೈಕಿ ಕಾರ್ಪೊರೇಟ್ ಕಂಪನಿ, ರಿಯಲ್ ಎಸ್ಟೇಟ್ ಕಂಪನಿಗಳ ಕಟ್ಟಡ ತ್ಯಾಜ್ಯ, ವಾಣಿಜ್ಯ ಮಳಿಗೆಗಳ ತ್ಯಾಜ್ಯದ ಪ್ರಮಾಣ ಹೆಚ್ಚಾಗಿದೆ. ಆದ್ಯತೆ ಮೇರೆಗೆ ಅಲ್ಲಿನ ಕಸ ವಿಲೇವಾರಿ ಮಾಡುತ್ತಿದ್ದು, ನಗರದಲ್ಲಿ ಉತ್ಪತ್ತಿಯಾಗುತ್ತಿರುವ ಕಸ ಕಾಂಪ್ಯಾಕ್ಟರ್‌ಗಳಲ್ಲೇ ಕೊಳೆಯುವಂತಾಗಿದೆ.

ಇಲ್ಲೆಲ್ಲ ಕಸದ ರಾಶಿ: ನಗರದ ಕೆ.ಆರ್.ಮಾರುಕಟ್ಟೆ, ನಾಯಂಡಹಳ್ಳಿ ಹೊರ ವರ್ತುಲ ರಸ್ತೆ, ಗಾಂಧಿನಗರ, ಕೋರಮಂಗಲ, ಸದಾಶಿವನಗರ, ಡಾಲರ್ಸ್ ಕಾಲನಿ, ಎಚ್‌ಎಸ್‌ಆರ್ ಲೇಔಟ್, ಬಿಟಿಎಂ ಲೇಔಟ್, ಶಿವಾಜಿನಗರ, ಜಯನಗರ, ವಿಜಯನಗರ, ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ.

ಈಗಾಗಲೇ ಕಸದ ಸಮಸ್ಯೆ ಬಗೆಹರಿಸಲು ಕೌನ್ಸಿಲ್ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಇನ್ನು ಮೂರು ದಿನಗಳ ಒಳಗೆ ಮಿಟಗಾನಹಳ್ಳಿ ಡಂಪಿಂಗ್ ಯಾರ್ಡ್ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ನಗರದ ಎಲ್ಲಾ ಬ್ಲಾಕ್ ಸ್ಪಾಟ್‌ಗಳನ್ನು ಸಂಪೂರ್ಣವಾಗಿ ತೆರವು ಮಾಡಲಾಗುವುದು.

-ಗಂಗಾಂಬಿಕೆ, ಬಿಬಿಎಂಪಿ ಮೇಯರ್

ಮೂರು ದಿನಗಳಿಂದೀಚೆಗೆ ಬ್ಲಾಕ್ ಸ್ಪಾಟ್‌ಗಳ ಸಂಖ್ಯೆ ಹೆಚ್ಚಾಗಿದೆ. ಬ್ಲಾಕ್ ಸ್ಪಾಟ್‌ಗಳಿಂದ ಬರುತ್ತಿರುವ ದುರ್ವಾಸನೆಯಿಂದ ಸ್ಥಳೀಯರು ಕಂಗಾಲಾಗಿದ್ದಾರೆ. ಈ ಕುರಿತು ಸ್ಥಳೀಯ ಪಾಲಿಕೆ ಸದಸ್ಯರಿಗೆ ದೂರು ನೀಡಿದರೂ ಪ್ರಯೋಜನ ಆಗುತ್ತಿಲ್ಲ.

-ಶ್ರೀನಿವಾಸ್, ನಾಯಂಡಹಳ್ಳಿ ನಿವಾಸಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News