ಸವಿತಾ ಸಮಾಜಕ್ಕೆ ರಾಜಕೀಯ, ಉದ್ಯೋಗವಕಾಶ ಮರೀಚಿಕೆ: ಜೆಡಿಎಸ್ ಮುಖಂಡ ರಮೇಶ್‌ ಬಾಬು

Update: 2019-08-02 16:19 GMT

ಬೆಂಗಳೂರು, ಆ.2: ನಿರ್ಲಕ್ಷಕ್ಕೆ ಒಳಗಾಗಿರುವ ಸವಿತಾ ಸಮಾಜಕ್ಕೆ ಇನ್ನೂ ರಾಜಕೀಯ ಹಾಗೂ ಉದ್ಯೋಗವಕಾಶಗಳು ಮರೀಚಿಕೆಯಾಗಿಯೆ ಉಳಿದಿವೆ ಎಂದು ಜೆಡಿಎಸ್ ಮುಖಂಡ ರಮೇಶ್‌ಬಾಬು ಬೇಸರ ವ್ಯಕ್ತಪಡಿಸಿದರು.

ಶುಕ್ರವಾರ ನಗರದ ಜೆಪಿ ಭವನದಲ್ಲಿ ಆಯೋಜಿಸಿದ್ದ ಸವಿತಾ ಸಮಾಜದ ಮುಖಂಡರ ಜೆಡಿಎಸ್‌ಗೆ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೈತ್ರಿ ಸರಕಾರದ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಸವಿತಾ ಸಮಾಜಕ್ಕೆ ಪ್ರತ್ಯೇಕ ನಿಗಮ ಸ್ಥಾಪನೆ ಮಾಡುವ ಮೂಲಕ ಶಕ್ತಿ ತುಂಬುವಂತಹ ಕೆಲಸ ಮಾಡಿದ್ದಾರೆ. ಆದರೂ ಇನ್ನು ಹಲವು ಸಮಸ್ಯೆಗಳು ಹಾಗೆ ಜೀವಂತವಾಗಿವೆ ಎಂದು ತಿಳಿಸಿದರು.

ಸವಿತಾ ಸಮಾಜದ ಜನಸಂಖ್ಯೆ ಕಡಿಮೆಯಿದ್ದರೂ ರಾಜಕೀಯ ಬದಲಾವಣೆಯಲ್ಲಿ ಮಹತ್ವದ ಪಾತ್ರ ವಹಿಸುವ ಸಾಮರ್ಥ್ಯವಿದೆ. ಹಾಗಿದ್ದರೂ ಈ ಸಮುದಾಯಕ್ಕೆ ಸರಿಯಾದ ಪ್ರಾತಿನಿಧ್ಯ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಜೆಡಿಎಸ್ ವತಿಯಿಂದ ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಹೆಚ್ಚಿನ ಅವಕಾಶ ಕಲ್ಪಿಸಲಾಗುವುದು ಎಂದು ಅವರು ಹೇಳಿದರು.

ರಾಜ್ಯದಲ್ಲಿ ಜೆಡಿಎಸ್‌ನ್ನು ಬಲಗೊಳಿಸವ ಮೂಲಕ ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿಗೆ ಶಕ್ತಿ ತುಂಬಬೇಕು. ಪಕ್ಷದ ಸಿದ್ದಾಂತದಂತೆ ಎಲ್ಲ ಜಾತಿ, ಸಮುದಾಯಗಳನ್ನು ಸಮಾನವಾಗಿ ಕಾಣುವುದು ಹಾಗೂ ಸಮಾನ ಅವಕಾಶಗಳನ್ನು ಒದಗಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕಿದೆ ಎಂದು ಅವರು ಹೇಳಿದರು.

ವಿಧಾನಪರಿಷತ್ ಸದಸ್ಯ ತಿಪ್ಪೇಸ್ವಾಮಿ ಮಾತನಾಡಿ, ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಸವಿತಾ, ಉಪ್ಪಾರ ಸೇರಿದಂತೆ ಪ್ರತಿಯೊಂದು ಸಮಾಜವನ್ನು ಗುರುತಿಸುವ ಕೆಲಸ ಮಾಡಿದ್ದಾರೆ. ಬಜೆಟ್‌ನಲ್ಲಿ ಅನುದಾನ ಒದಗಿಸಿದ್ದಾರೆ. ಜೆಡಿಎಸ್ ಅಧಿಕಾರದಲ್ಲಿದ್ದಾಗ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮನವರಿಕೆ ಮಾಡಿ, ಪಕ್ಷ ಸಂಘಟನೆಗೆ ಮುಂದಾಗಬೇಕಿದೆ ಎಂದು ತಿಳಿಸಿದರು.

ಸವಿತಾ ಸಮಾಜದ ಮುಖಂಡ ನರಸಿಂಹ ಮಾತನಾಡಿ, ಸಮುದಾಯದ ನಿಗಮ ಸ್ಥಾಪಿಸಿದ್ದ ಕುಮಾರಸ್ವಾಮಿ, ಬಜೆಟ್‌ನಲ್ಲಿ ಅದಕ್ಕಾಗಿ 20ಕೋಟಿ ರೂ.ಗಳನ್ನು ಮೀಸಲಿರಿಸಿದ್ದರು ಎಂದರು. ಇದೇ ವೇಳೆ ಗೋವಿಂದರಾಜನಗರ, ವಿಜಯನಗರ, ಯಶವಂತಪುರ, ಆರ್‌ಆರ್ ನಗರದ ಸಮುದಾಯದ ಮುಖಂಡರು ಜೆಡಿಎಸ್‌ಗೆ ಸೇರ್ಪಡೆಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News