ಉನ್ನಾವೊ ಅತ್ಯಾಚಾರ ಪ್ರಕರಣ: ಬಿಜೆಪಿ ಶಾಸಕ ಕುಲದೀಪ್‌ಗೆ ಕಠಿಣ ಶಿಕ್ಷೆ ವಿಧಿಸಲು ಎಐಎಂಎಸ್‌ಎಸ್ ಒತ್ತಾಯ

Update: 2019-08-02 16:59 GMT

ಬೆಂಗಳೂರು, ಆ. 2: ‘ಬೇಲಿಯೇ ಎದ್ದು ಹೊಲ ಮೇಯುತ್ತಿರುವಾಗ ಇನ್ನು ಈ ದೇಶದಲ್ಲಿ ಹೆಣ್ಣುಮಕ್ಕಳಿಗೆ ನ್ಯಾಯ ಸಿಗುವುದಾದರೂ ಹೇಗೆ?’ ಎಂದು ಪ್ರಶ್ನಿಸಿರುವ ಎಐಎಂಎಸ್‌ಎಸ್‌ನ ಕಾರ್ಯದರ್ಶಿ ಎಸ್.ಶೋಭಾ, ‘ಉನ್ನಾವೊ ಅತ್ಯಾಚಾರ ಪ್ರಕರಣದ ಆರೋಪಿಯಾದ ಬಿಜೆಪಿ ಶಾಸಕ ಕುಲದೀಪ್ ಸೆಂಗರ್‌ಗೆ ಉತ್ತರ ಪ್ರದೇಶ ಸರಕಾರ ರಕ್ಷಣೆ ನೀಡುತ್ತಿದೆ’ ಎಂದು ಆರೋಪಿಸಿದ್ದಾರೆ.

ಶುಕ್ರವಾರ ಇಲ್ಲಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಎಐಎಂಎಸ್‌ಎಸ್‌ನಿಂದ ಉನ್ನಾವೊ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹಿಸಿ ಏರ್ಪಡಿಸಿದ್ದ ಧರಣಿಯಲ್ಲಿ ಮಾತನಾಡಿದ ಅವರು, ಸಂತ್ರಸ್ತೆ ಎರಡು ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಡುತ್ತಿದ್ದಾಳೆ.

ಆದರೆ, ಪ್ರಕರಣವನ್ನು ದುರ್ಬಲಗೊಳಿಸುವ ತಂತ್ರಗಳನ್ನು ಮಾಡಲಾಗಿದೆ. ಈಗ ಸುಪ್ರೀಂ ಕೋರ್ಟಿನಿಂದ ಹೊರಬಂದ ತೀರ್ಪು ಜನರ ಹೋರಾಟದ ಪ್ರತಿಫಲದಿಂದ ಬಂದಿದೆ. ಉನ್ನಾವೊ ಸಂತ್ರಸ್ತೆ ಹೋರಾಟಕ್ಕೆ ನಮ್ಮ ಬೆಂಬಲ ಇರುತ್ತದೆ. ಇದು ಕೇವಲ ಉತ್ತರ ಪ್ರದೇಶದ ಕಥೆಯಲ್ಲ. ದೇಶದಲ್ಲಿ ಇಂತಹ ದುರ್ಘಟನೆಗಳು ನಿರಂತರವಾಗಿ ನಡೆಯುತ್ತಲೇ ಇವೆ ಎಂದು ಬೇಸರ ವ್ಯಕ್ತಪಡಿಸಿದರು.

ಇಂತಹ ಕೃತ್ಯಗಳ ತಡೆಗೆ ಪ್ರತಿಯೊಂದು ಬಡಾವಣೆಗಳಲ್ಲಿ ಜನ ಸಮಿತಿಗಳನ್ನು ರಚಿಸಬೇಕು. ಸಂಘಟಿತ ಹೋರಾಟದಿಂದ ಮಾತ್ರವೇ ನ್ಯಾಯ ದೊರಕಿಸಿಕೊಳ್ಳಲು ಸಾಧ್ಯ ಎಂದ ಅವರು, ಉನ್ನಾವೋ ಪ್ರಕರಣದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಿದರೆ ಮಾತ್ರ ಇಂತಹ ಕೃತ್ಯಗಳನ್ನು ತಡೆಗಟ್ಟಲು ಸಾಧ್ಯ ಎಂದು ಹೇಳಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಶಾಂತಾ ಮಾತನಾಡಿ, ಉನ್ನಾವೋ ಸಂತ್ರಸ್ಯೆಗೆ ನ್ಯಾಯ ದೊರೆಯುವವರೆಗೂ ಹೋರಾಟ ನಿಲ್ಲದು. ಪ್ರಕರಣದ ಆರೋಪಿ ಬಿಜೆಪಿ ಶಾಸಕ ಕುಲದೀಪ್‌ಗೆ ಸುಪ್ರೀಂ ಕೋರ್ಟ್ ಕಠಿಣ ಶಿಕ್ಷೆ ವಿಧಿಸಬೇಕು ಮತ್ತು ಉತ್ತರ ಪ್ರದೇಶ ಸರಕಾರಕ್ಕೆ ಕೋರ್ಟ್ ಛೀಮಾರಿ ಹಾಕಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News