ವಕೀಲರಿಗೆ ಹಣ ನೀಡಲು ಕಳ್ಳತನ ಮಾಡಿದ್ದ ಇಬ್ಬರ ಬಂಧನ
ಬೆಂಗಳೂರು, ಆ.2: ಜೈಲಿನಿಂದ ಬಿಡುಗಡೆಗಾಗಿ ಜಾಮೀನು ಕೊಡಿಸಿದ ವಕೀಲರಿಗೆ ಹಣ ನೀಡುವ ಸಲುವಾಗಿ ಮನೆಗಳ್ಳತನ ಮಾಡಿದ್ದ ಇಬ್ಬರನ್ನು ಇಲ್ಲಿನ ಕೋರಮಂಗಲ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕೋರಮಂಗಲ ನಿವಾಸಿ ಇಮ್ರಾನ್, ವಸೀಂ ಅಕ್ರಮ್ ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಿಬ್ಬರು ಈ ಹಿಂದೆ ಹಲವು ಕಡೆ ಮನೆಗಳ್ಳತನ ಮಾಡಿ ಜೈಲಿಗೆ ಹೋಗಿದ್ದು, ಅವರಿಗೆ ವಕೀಲರೊಬ್ಬರು ಜಾಮೀನು ನೀಡಿ, ಹೊರಗೆ ತಂದಿದ್ದರು. ವಕೀಲರಿಗೆ ಹಣ ಹೊಂದಿಸಿಕೊಡಲು ಮತ್ತೆ ಕಳ್ಳತನ ಮಾಡಿ, ಚಿನ್ನಾಭರಣ ಮಾರುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ.
ಆರೋಪಿಗಳು ಕಳ್ಳತನ ಮಾಡಿದ್ದ ಚಿನ್ನಾಭರಣ ಮಾರಾಟ ಮಾಡಿ, ವಕೀಲರಿಗೆ ಶುಲ್ಕ ಪಾವತಿಸಿ ಉಳಿದ ಹಣವನ್ನು ದುಶ್ಚಟಗಳಿಗೆ ಬಳಸಿಕೊಳ್ಳುತ್ತಿದ್ದರು. ಕೇವಲ ಕೋರಮಂಗಲ ಅಷ್ಟೇ ಅಲ್ಲದೆ, ಆಡುಗೋಡಿ, ಬೊಮ್ಮನಹಳ್ಳಿ ಸೇರಿದಂತೆ 6ಕ್ಕೂ ಹೆಚ್ಚು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದಾಗಿ ಆರೋಪಿಗಳು ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.