ನಾಗಾರಾಧನೆಗಾಗಿ ದಳವಾಯಿ ಮನೆತನಕ್ಕೆ ಉಚಿತ ಜಮೀನು ಕೊಟ್ಟ ಶಾಸಕ ಯು.ಟಿ. ಖಾದರ್

Update: 2019-08-03 12:05 GMT

ಶ್ರಾವಣ ಮಾಸದ ಮೊದಲ ಹಬ್ಬ ನಾಗರಪಂಚಮಿಗೂ ಮಾಜಿ ಸಚಿವರು ಹಾಗೂ ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ.ಖಾದರ್ ಗೂ ಎತ್ತಣದಿಂದೆತ್ತಣ ಸಂಬಂಧ? ಎಂದು ಈ ಪ್ರಶ್ನೆಗೆ ಉತ್ತರ ಕೇಳಿದರೆ "ಸಂಬಂಧವಿದೆ"..! ಎನ್ನುತ್ತಾರೆ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಪುಣಚ ಪರಿಯಾಲ್ತಡ್ಕದ ಗ್ರಾಮಸ್ಥರು.

ಯು.ಟಿ.ಖಾದರ್ ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರು. ವಿವಿಧ ಇಲಾಖೆಗಳಲ್ಲಿ ಸಚಿವರು ಹಾಗೂ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದವರು. ಒಬ್ಬ ಜನಪ್ರತಿನಿಧಿಯಾಗಿ ಹತ್ತು ಹಲವು ಸಾರ್ವಜನಿಕ ನಾಗರಪಂಚಮಿ ಸಮಾರಂಭಗಳಲ್ಲಿ ಭಾಗವಹಿಸಿರಬಹುದು ಎಂದು ನೀವು ಉತ್ತರ ಕಂಡು ಹುಡುಕಿದರೆ ಅದಲ್ಲ ನಿಜವಾದ ಉತ್ತರ.

ಶಾಸಕರಾದ ಯು.ಟಿ.ಖಾದರ್ ಅವರ ತಂದೆ ಮಾಜಿ ಶಾಸಕರಾದ ದಿ. ಯು.ಟಿ.ಫರೀದ್. ಫರೀದ್ ಅವರ ತಂದೆ ಮಹಮ್ಮದ್ ಹಾಜಿ. ಯು.ಟಿ.ಖಾದರ್ ಅಜ್ಜ ಮಹಮ್ಮದ್ ಹಾಜಿಯವರ ಮನೆ ವಿಟ್ಲ ಸಮೀಪದ ಪುಣಚ, ಪರಿಯಾಲ್ತಡ್ಕದಲ್ಲಿದೆ.

ಅವರು "ಮಲ್ಲಂಗಡಿ ಸಾಹುಕಾರ" ಎಂದೇ ಪ್ರಸಿದ್ಧಿ. ಅಲ್ಲಿ ಅಂಗಡಿ ಇಟ್ಟು ದಿನಸಿ ವ್ಯಾಪಾರ ಮಾಡುತ್ತಿದ್ದರು. ಪುಣಚ ಸಮೀಪದ ಹಿತ್ತಿಲು (ಸಾಗ್) ಎಂಬಲ್ಲಿ ಮಹಮ್ಮದ್ ಹಾಜಿಗೆ ಕೃಷಿ ಜಮೀನಿದೆ. ಖಾದರ್ ತಂದೆ ಯು.ಟಿ. ಫರೀದ್ ಅವರಿಗೆ ತಂದೆ ಮಹಮ್ಮದ್ ಹಾಜಿ ಮೂಲಕ ಪಿತ್ರಾರ್ಜಿತವಾಗಿ ಬಂದ ಸೊತ್ತಲ್ಲಿ ಪಾಲು ಸಿಕ್ಕಿದೆ. ಎರಡು ಎಕರೆಯಷ್ಟು ಅಡಕೆ ತೋಟ ಸಹಿತ ಸುಮಾರು ಹನ್ನೊಂದು ಎಕರೆ ಜಮೀನು ಈಗ ಯು.ಟಿ.ಖಾದರ್ ಮತ್ತು ಅವರ ಸಹೋದರರು, ಸಹೋದರಿಗೆ ಸಿಕ್ಕಿದೆ. ಖಾದರ್ ಕುಟುಂಬಿಕರು ಮಂಗಳೂರಲ್ಲಿ ನೆಲೆಸಿರುವ ಕಾರಣ ಈ ಜಮೀನನ್ನು ಖಾದರ್ ಅವರ ಭಾವ ಪುಣಚ ಅಜ್ಜಿನಡ್ಕದ ಅಬ್ದುಲ್ ರಹಿಮಾನ್ ಹೋನೆಸ್ಟ್ ಅವರು ನೋಡಿಕೊಳ್ಳುತ್ತಿದ್ದಾರೆ.

ವಿಷಯ ಇಷ್ಟೇ ಆಗಿದ್ದರೆ ಈ ಬರಹದ ಅಗತ್ಯವಿರಲಿಲ್ಲ. ಹದಿನಾರನೆಯ ಶತಮಾನದ ಆರಂಭದಿಂದ ಹದಿನೆಂಟನೆಯ ಶತಮಾನದ ಉತ್ತರಾರ್ಧದವರೆವಿಗೂ ಸಮೃಧ್ಧಿಯ ತಾಣವಾಗಿ ಮೆರೆದದ್ದು ಕೆಳದಿ ಸಂಸ್ಥಾನ. ಕರ್ನಾಟಕದ ಮಲೆನಾಡು ಮತ್ತು ಕರಾವಳಿಯ ಭಾಗಗಳೆರಡನ್ನೂ ತನ್ನ ಆಳ್ವಿಕೆಯಡಿಯಲ್ಲಿ ಇಟ್ಟುಕೊಂಡಿದ್ದವರು ಈ ಪ್ರಾಂತ್ಯದ ಅರಸರು.

ಕೆಳದಿ ಸಂಸ್ಥಾನದಲ್ಲಿ ದಳವಾಯಿ (ಸೇನಾಧಿಪತಿ) ಆಗಿ ವೀರಪುರುಷ ಎನಿಸಿಕೊಂಡಿದ್ದ ಈಶ್ವರಯ್ಯ ದಳವಾಯಿ ಅವರು ವಿಟ್ಲ ಅರಮನೆಯ ಡೊಂಬ ಹೆಗ್ಗಡೆ ಅರಸರಿಗೂ ಪ್ರೀತಿಯ ವ್ಯಕ್ತಿ. ಈಶ್ವರಯ್ಯ ಅವರ ಸಾಹಸಗಾಥೆ ಹಾಗೂ ಸ್ವಾಮಿನಿಷ್ಠೆಯನ್ನು ಗುರುತಿಸಿದ ವಿಟ್ಲದರಸರು ಈಶ್ವರಯ್ಯ ದಳವಾಯಿಯಾಗಿ ನಿವೃತ್ತರಾಗುವಾಗ ಪುಣಚ ಪರಿಯಾಲ್ತಡ್ಕ ಗ್ರಾಮವನ್ನು ಉಂಬಳಿಯಾಗಿ (ಕೊಡುಗೆ) ನೀಡಿ ಶಾಸನ ಬರೆಸಿದರು. ಹಿರಿಯ ವ್ಯಕ್ತಿ ಈಶ್ವರಯ್ಯ ದಳವಾಯಿಯವರ ಪುಣಚದ ದೊಡ್ಡಮನೆ ಕುಟುಂಬಕ್ಕೆ ಅದರದೇ ಆದ ಗತ್ತು ಗೈರತ್ತು ಇತ್ತು. ದಳವಾಯಿಯವರ ಕುಟುಂಬ ಕ್ರಮೇಣ ಛಿದ್ರವಾಗಿ ಹಲವು ತಲೆಮಾರಿನ ನಂತರ ಪುಣಚ ಗ್ರಾಮವನ್ನು ಕಾಡುಮಠ ಮನೆತನಕ್ಕೆ ಅಡಮಾನ ಇಡಲಾಯಿತು. ನಂತರದ ದಿನಗಳಲ್ಲಿ ಡಿಕ್ಲರೇಶನ್ (ಭೂಮಿಯಲ್ಲಿ ವಾಸಿಸುವವನೇ ಒಡೆಯ) ಕಾನೂನಿಂದ ಆ ಜಾಗ ಕಾಡುಮಠ ಕುಟುಂಬದಿಂದ ಇತರ ಗ್ರಾಮಸ್ಥರ ಕೈ ಸೇರಿತು. ಕಾಲಕ್ರಮೇಣ ಹಿತ್ತಿಲುವಿನಲ್ಲಿರುವ ಜಮೀನು ಪುಣಚ ಪರಿಯಾಲ್ತಡ್ಕ ದೊಡ್ಡಂಗಡಿಯ ಯು.ಟಿ.ಖಾದರ್ ಅವರ ಅಜ್ಜನ ಪಾಲಾಯಿತು.

ಕೆಳದಿ ಸಂಸ್ಥಾನದ ಈಶ್ವರಯ್ಯ ದಳವಾಯಿಯವರ ಕುಟುಂಬ ಬೇರೆ ಬೇರೆ ಪ್ರದೇಶಗಳಲ್ಲಿ ಹಂಚಿ ಹೋದವು. ಪುತ್ತೂರು, ಮಂಗಳೂರು, ಕಾಸರಗೋಡು ಪ್ರದೇಶಗಳಲ್ಲಿ ದಳವಾಯಿ ಕುಟುಂಬ ಹಂಚಿಹೋಗಿವೆ. ಸಾವಿರಕ್ಕೂ ಅಧಿಕ ಮಂದಿ ಇರಬೇಕಾಗಿದ್ದ ಈಶ್ವರಯ್ಯ ದಳವಾಯಿಯವರ ಪೀಳಿಗೆಯಲ್ಲಿ ಪ್ರಸ್ತುತ ಸುಮಾರು 350 ರಿಂದ 400 ಮಂದಿ ಸದಸ್ಯರು ಇದ್ದಾರೆ. ಆ ಕುಟುಂಬದ ಕೊಂಡಿ ಸುಳ್ಯ ಕೆಎಫ್'ಡಿಸಿ ಡಿವಿಶನಲ್ ಮ್ಯಾನೇಜರ್ (ಡಿಎಫ್ಒ) ಆಗಿ ನಿವೃತ್ತರಾಗಿರುವ ಮೂಲತಃ ಪುತ್ತೂರು ಮರೀಲ್ ನಿವಾಸಿ ರವಿರಾಜ್ ದಳವಾಯಿ ಅವರು ದಳವಾಯಿ ಕುಟುಂಬದ ಮುಖ್ಯಸ್ಥರಾಗಿದ್ದಾರೆ.

ಹಲವು ವರ್ಷಗಳ ಹಿಂದೆ ದಳವಾಯಿ ಕುಟುಂಬದಲ್ಲಿ ಸಮಸ್ಯೆ ತಲೆದೋರಿ ಅಷ್ಟಮಂಗಲ ಪ್ರಶ್ನೆ ಇಟ್ಟಾಗ ಅವರ ಹಿರಿ ತಲೆಮಾರಿನ ಪುಣಚ ಪರಿಯಾಲ್ತಡ್ಕ ಹಿತ್ತಿಲು ಜಮೀನಿನಲ್ಲಿ ನಾಗಬನ ಇದ್ದು, ಅದರ ಪುನರ್ ಪ್ರತಿಷ್ಟೆ, ಪೂಜಾ ವಿಧಿ ವಿಧಾನ ಆಗಬೇಕೆಂಬ ಸಂಕಲ್ಪವಾಗುತ್ತದೆ. ಆದರೆ ಆ ಸ್ಥಳ ಯು.ಟಿ.ಖಾದರ್ ಅವರ ಅಡಕೆ ತೋಟದಲ್ಲಿದ್ದುದರಿಂದ ರವಿರಾಜ್ ದಳವಾಯಿ ಅವರಿಗೆ ಕಗ್ಗಂಟಾಗುತ್ತದೆ. ಯು.ಟಿ.ಖಾದರ್ ಅವರಲ್ಲಿ ಕೇಳಿಯೇ ಬಿಡೋಣ ಎಂದು ಖಾದರ್ ಭಾವ ಅಬ್ದುಲ್ ರಹಿಮಾನ್ ಹಾಗೂ ಹಿತ್ತಿಲು ಜಮೀನಿನ ನೆರೆಯ ನಿವಾಸಿ ರಾಘವ ಪೂಜಾರಿಯವರನ್ನು ಕರೆದುಕೊಂಡು ಮಂಗಳೂರು ಸರ್ಕ್ಯುಟ್ ಹೌಸಿಗೆ ರವಿರಾಜ್ ದಳವಾಯಿ ತೆರಳುತ್ತಾರೆ. ಖಾದರ್ ಆವಾಗ ಉಳ್ಳಾಲ ಕ್ಷೇತ್ರದ ಶಾಸಕರಾಗಿದ್ದರು. ತಮ್ಮ ಜಾಗದಲ್ಲಿರುವ ನಾಗಬನದಲ್ಲಿ ಪೂಜೆಗೆ ಅನುವು ಮಾಡಿಕೊಡುವಂತೆ ರವಿರಾಜ್ ಖಾದರ್ ಅವರಲ್ಲಿ ವಿನಂತಿಸುತ್ತಾರೆ. ಏನು ಉತ್ತರ ಸಿಗಬಹುದೆಂಬ ಸಂದಿಗ್ದ ಪರಿಸ್ಥಿಯಲ್ಲಿದ್ದ ದಳವಾಯಿ ಅವರಿಗೆ ಖಾದರ್ ಮಾತಿನಿಂದ ದು:ಖದ ಬದಲು ಸಂತೋಷ ಇಮ್ಮಡಿಯಾಗುತ್ತದೆ. ಕೂಡಲೇ ಸಂತೋಷದಿಂದ ಸ್ಪಂದಿಸಿದ ಯು.ಟಿ.ಖಾದರ್ ತಮ್ಮ ಅಡಕೆ ತೋಟದ ನಾಗಬನ ಮತ್ತು ಪೂಜೆ ಪುನಸ್ಕಾರಕ್ಕೆ ಸುಮಾರು 20 ಸೆಂಟ್ಸ್ ಸ್ಥಳವನ್ನು ಉಚಿತವಾಗಿ ಬಿಟ್ಟುಕೊಟ್ಟು ಉದಾರಿಯಾಗುತ್ತಾರೆ.

ಉಚಿತವಾಗಿ ಬಿಟ್ಟುಕೊಟ್ಟ ಜಮೀನಲ್ಲಿ ಉತ್ತಮ ನೀರಿರುವ ಬಾವಿ ಕೂಡಾ ಇದ್ದು, ಅದನ್ನೂ ದಾನ ಮಾಡಿ ಮಾದರಿಯಾಗುತ್ತಾರೆ. ಕಳೆದ 9 ವರ್ಷಗಳ ಹಿಂದೆ ಅಂದರೆ 2010 ಮಾರ್ಚ್ 10ರಂದು ರವಿರಾಜ್ ದಳವಾಯಿ ಅವರ ದೊಡ್ಡಮನೆ ಕುಟುಂಬದಿಂದ ಆ ಜಾಗದಲ್ಲಿ ಶ್ರೀ ಸಪರಿವಾರ ನಾಗಬ್ರಹ್ಮಸ್ಥಾನದ ನವೀಕರಣ, ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯುತ್ತದೆ. ಪ್ರತಿವರ್ಷ ಮಾರ್ಚ್ ತಿಂಗಳಲ್ಲಿ ಪ್ರತಿಷ್ಠಾ ವಾರ್ಷಿಕ ಹಾಗೂ ನಾಗರಪಂಚಮಿ ದಿನ ನಾಗಾರಾಧನೆಯು ನೂರಾರು ಊರ ಭಕ್ತರ ಸಮ್ಮಖದಲ್ಲಿ ನಡೆಯುತ್ತದೆ. ಕುರುಚಲು ಗಿಡಮರಗಳಿಂದ ಆವರಿಸಿದ್ದ ನಾಗಬನ ಸಮೃದ್ಧಿಯಾಗುತ್ತದೆ. ಪ್ರಾರಂಭದಲ್ಲಿ ಸುಬ್ರಹ್ಮಣ್ಯ ಸ್ವಾಮೀಜಿ ಹಾಗೂ ಕಲ್ಲಡ್ಕ ಪ್ರಭಾಕರ ಭಟ್ ಆಗಮಿಸಿ ಶುಭ ಹಾರೈಸುತ್ತಾರೆ.

ವಿಶೇಷ ಅಂದರೆ ಆ ನಾಗಬನದ ಮತ್ತೊಂದು ದಿಕ್ಕಿನಲ್ಲಿ ಬೆಳಕು ಹೊತ್ತಿಸುವ ಚಾವಡಿಯಿದೆ. ಅದುಕೂಡಾ ಹಿಂದಿನ ಕಾಲದಲ್ಲಿ ದೊಡ್ಡಮನೆ ಕುಟುಂಬದ ಈಶ್ವರಯ್ಯರಲ್ಲಿತ್ತು. ಅದರ ಪ್ರತಿಷ್ಟೆ ಆಗಬೇಕೆಂಬ ಸಂಕಲ್ಪ ರವಿರಾಜ್ ಕುಟುಂಬದ ಅಷ್ಟಮಂಗಲದಲ್ಲಿ ಆಗುತ್ತದೆ. ಪ್ರಸ್ತುತ ಆ ಸ್ಥಳವು ಓರ್ವ ಹಿಂದೂ ಅವರ ಸುಪರ್ದಿಯಲ್ಲಿದೆ. ರವಿರಾಜ್ ಅವರು ಆ ಕುಟುಂಬದವರಲ್ಲಿ ಬಿಟ್ಟುಕೊಡುವಂತೆ ವಿನಂತಿಸಿದ್ದರೂ ಅವರು ಕೊಡಲಿಲ್ಲ. ಖರೀದಿಸುವ ಬೇಡಿಕೆ ಇಟ್ಟರೂ ಕೊಡದೇ ಇದ್ದಾಗ ರವಿರಾಜ್ ದಳವಾಯಿಗೆ ನಿರಾಶೆಯಾಗುತ್ತದೆ.

ಆ. 5ರಂದು ನಾಡಿನೆಲ್ಲೆಡೆ ನಾಗರಪಂಚಮಿಯ ಸಂಭ್ರಮ. ಪುಣಚ ಪರಿಯಾಲ್ತಡ್ಕದಲ್ಲಿರುವ ಯು.ಟಿ.ಖಾದರ್ ಅವರ ಜಮೀನಿನ ನಾಗಬನದಲ್ಲೂ ದಳವಾಯಿಯವರ ದೊಡ್ಡ ಮನೆ ಕುಟುಂಬದವರಿಂದ ಸಂಭ್ರಮದ ನಾಗಾರಾಧನೆ ನಡೆಯಲಿದೆ. ಈ ಸ್ಥಳದಲ್ಲಿ ಗಣಪತಿ ಹೋಮ, ನವಕಲಶಾರಾಧನೆ, ಪ್ರಧಾನ ಹೋಮ, ನಾಗದೇವರಿಗೆ ಹಾಗೂ ಪರಿವಾರ ದೇವತೆಗಳಿಗೆ ಪಂಚಮೃತಾಭಿಷೇಕ, ತಂಬಿಲ, ವಟು ಆರಾಧನೆ, ನಾಗ ತನು ತರ್ಪಣ ಸೇವೆ ನಡೆಯುತ್ತದೆ. ನಾಗಬನದಲ್ಲಿ ಶ್ರೀ ಗಣಪತಿ, ಶ್ರೀ ರಕ್ತೇಶ್ವರಿ, ಶ್ರೀ ಕ್ಷೇತ್ರಪಾಲ, ಶ್ರೀ ನಂದಿಕೇಶ್ವರ, ಶ್ರೀ ವ್ಯಾಘ್ರ ಚಾಮುಂಡಿ ಮೂರ್ತಿಯಿದೆ.

''ಎಳೆಯದರಲ್ಲಿ ನಾನು ವಿಟ್ಲ ಸಮೀಪದ ಪುಣಚ ಪರಿಯಾಲ್ತಡ್ಕ ಅಜ್ಜನ ಮನೆಯಲ್ಲಿದ್ದೆ. ನನ್ನ ಚಿಕ್ಕಪ್ಪನವರು ತೋಟದ ಒಂದು ಬದಿಗೆ ಹೋಗಬಾರದೆಂದು ಎಚ್ಚರಿಸುತ್ತಿದ್ದರು. ಅಲ್ಲಿ ಗಲೀಜು ಮಾಡಬಾರದೆಂದು ಹೇಳುತ್ತಿದ್ದರು. ಕೆಲಸಗಾರರು, ನಮ್ಮನ್ನೆಲ್ಲಾ ಪೊದೆ ಹತ್ತಿರ ಹೋಗಲು ಬಿಡುತ್ತಿರಲಿಲ್ಲ. ಅಲ್ಲಿ ಗಿಡಮರಗಳು ಬೆಳೆದು ಪೊದೆ ಸೃಷ್ಟಿಯಾಗಿದ್ದವು. ಸುಮಾರು 25 ವರ್ಷಗಳ ತರುವಾಯ ನಾನು ಉಳ್ಳಾಲ ಶಾಸಕನಾಗಿ ಕೆಲ ತಿಂಗಳ ಬಳಿಕ ಫಾರೆಸ್ಟ್ ಆಫೀಸರ್ ರವಿರಾಜ್ ದಳವಾಯಿ ನನ್ನ ಬಳಿ ಬಂದು ನಿಮ್ಮ ಅಜ್ಜನ ಜಾಗ ನಮ್ಮ ಅಜ್ಜಂದಿರಿಗಿತ್ತು. ಅಲ್ಲೊಂದು ನಾಗಬನವಿದೆ. ಆ ಸ್ಥಳ ನಮಗೆ ಕೊಡಬೇಕು. ಎಷ್ಟು ಹಣ ಕೊಡಲಿಕ್ಕೂ ತಯಾರಿದ್ದೇವೆ ಎಂದರು. ಆವಾಗ ನನಗೆ ಸಣ್ಣದರಲ್ಲಿ ಚಿಕ್ಕಪ್ಪ ಆ ಜಾಗಕ್ಕೆ ಹೋಗದ ಹಾಗೆ ಎಚ್ಚರಿಸಿದ್ದು ನೆನಪಾಯಿತು. ನಾಗಬನದ ಹತ್ತು ಸೆಂಟ್ಸ್ ಅದಕ್ಕೆ ಮತ್ತೂ ಹತ್ತು ಸೆಂಟ್ಸ್ ಸೇರಿಸಿ ಯಾವುದೇ ಫಲಾಪೇಕ್ಷೆ ಇಲ್ಲದೇ ಉಚಿತವಾಗಿ ನೀಡಿದ್ದೇನೆ. ಪ್ರತ್ಯೇಕ ದಾರಿ ಮತ್ತು ನೀರಿನ ಬಾವಿಯನ್ನೂ ದಾನ ಮಾಡಿದ್ದೇವೆ. ನಮ್ಮ ಹೆತ್ತವರು ಸಣ್ಣದರಲ್ಲೇ ಒಂದು ಸಂಸ್ಕೃತಿ, ಆಚಾರ ವಿಚಾರವನ್ನು ಕಲಿಸಿಕೊಟ್ಟಿದ್ದಾರೆ. ನಮ್ಮ ಧರ್ಮವನ್ನು ಪಾಲಿಸುವ ಜೊತೆಗೆ ಇತರ ಧರ್ಮಗಳನ್ನು ಗೌರವಿಸುವ ನಿಟ್ಟಿನಲ್ಲಿ ನಾವು ಆ ಸ್ಥಳವನ್ನು ಬಿಟ್ಟುಕೊಟ್ಟಿದ್ದೇವೆ''.

-ಯು.ಟಿ.ಖಾದರ್ ಶಾಸಕರು, ಮಂಗಳೂರು

ನಮ್ಮ ಧರ್ಮ ಯಾವುದು ? ಯು.ಟಿ. ಖಾದರ್ ಧರ್ಮ ಯಾವುದು ? ಖಾದರ್ ಸ್ಥಾನದಲ್ಲಿ ಬೇರೆ ಯಾರಿದ್ದರೂ ಇಂತಹದ್ದನ್ನು ನಿರೀಕ್ಷಿಸುವಂತಿರಲಿಲ್ಲ. ಅವರ ಉದಾರತೆಗೆ ಮೆಚ್ಚಿದ್ದೇವೆ. ನಾವು ನಾಗಬನದ ಸ್ಥಳ ಬಿಟ್ಟುಕೊಡುವಂತೆ ಕೇಳಿಕೊಂಡಾಗ ಒಂದು ನಯಾಪೈಸೆ ತೆಗೆದುಕೊಳ್ಳದೆ ಕೇಳಿದ್ದಕ್ಕಿಂತ ಹೆಚ್ಚಿನ ಜಾಗ ನೀಡಿದರು. ಒಬ್ಬ ಮುಸಲ್ಮಾನನಾಗಿ ಈ ರೀತಿ ಸ್ಪಂದಿಸಿರುವುದು ಅದ್ಭುತ. ನಮ್ಮ ಕುಟುಂಬವು 1620ನೇ ಇಸವಿಯಿಂದ ಪುಣಚದಲ್ಲಿ ನೆಲೆಸುತ್ತಿರುವುದಕ್ಕೆ ಇತಿಹಾಸವಿದೆ.

-ರವಿರಾಜ್ ದಳವಾಯಿ, ಅಧ್ಯಕ್ಷರು, ದೊಡ್ಡಮನೆ ಕುಟುಂಬಸ್ಥರು.
ಹಾಗೂ
ನಿವೃತ್ತ ಡೆಪ್ಯಟಿ ಫಾರೆಸ್ಟ್ ಆಫೀಸರ್.

1974ರಿಂದ ನಾವಿಲ್ಲಿ ವಾಸಿಸುತ್ತಿದ್ದೇವೆ. ಇಲ್ಲಿ ನಾಗಬನವಿದ್ದು, ಅಂದಿನ ಕಾಲದಲ್ಲೇ ಪೂಜೆಗಾಗಿ ದೊಡ್ಡಮನೆ ಕುಟುಂಬಸ್ಥರ ಹಿರಿಯರು ಬರುತ್ತಿದ್ದರು. ವಾಸು, ಗೋಪಾಲ, ರವಿರಾಜ್, ಪುರಂದರ ಮೊದಲಾದ ದೊಡ್ಡಮನೆ ಕುಟುಂಬದ ಸದಸ್ಯರು ಬಂದು ಹೋಗುತ್ತಿದ್ದರು. ಈ ಸ್ಥಳ ಯು.ಟಿ.ಖಾದರ್ ಅವರ ತಂದೆ ಯು.ಟಿ.ಫರೀದ್ ಕುಟುಂಬಕ್ಕೆ ಸೇರಿದ್ದು. ಅವರು ದೊಡ್ಡಮನೆ ಕುಟುಂಬಕ್ಕೆ ಬಿಟ್ಟುಕೊಟ್ಟು ಸೌಹಾರ್ದತೆ ಮೆರೆದಿದ್ದಾರೆ. ಇದೀಗ ಪ್ರತಿವರ್ಷ ಇಲ್ಲಿ ನಾಗರಪಂಚಮಿ ಅದ್ದೂರಿಯಿಂದ ನಡೆಯುತ್ತಿದೆ. ನಮ್ಮಿಂದಾದ ಸಹಕಾರ ನೀಡುತ್ತೇವೆ.

-ರಾಧಾ ರಾಘವ ಪೂಜಾರಿ, ನಾಗಬನದ ಹತ್ತಿರದ ನಿವಾಸಿ.

Writer - ರಶೀದ್ ವಿಟ್ಲ

contributor

Editor - ರಶೀದ್ ವಿಟ್ಲ

contributor

Similar News