ಐಟಿ ಅಧಿಕಾರಿಗಳ ಕಿರುಕುಳದಿಂದ ಸಿದ್ಧಾರ್ಥ ಆತ್ಮಹತ್ಯೆ: ವಿಧಾನಪರಿಷತ್ ಸದಸ್ಯ ಪ್ರಕಾಶ್ ರಾಥೋಡ್

Update: 2019-08-03 14:48 GMT

ಬೆಂಗಳೂರು, ಆ.3: ಆದಾಯ ತೆರಿಗೆ ಇಲಾಖೆ(ಐಟಿ)ಯವರ ದಾಳಿ ಹಾಗೂ ಅಧಿಕಾರಿಗಳ ಕಿರುಕುಳದಿಂದಾಗಿ ಕೆಫೆ ಕಾಫಿ ಡೇ ಸಂಸ್ಥಾಪಕ ಉದ್ಯಮಿ ಸಿದ್ಧಾರ್ಥ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಆರೋಪಿಸಿದ್ದಾರೆ.

ಶನಿವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ತೆರಿಗೆ ಭಯೋತ್ಪಾದನೆಯ ವಾತಾವರಣ ಸೃಷ್ಟಿಯಾಗಿದೆ. ಬಿಜೆಪಿ ಈ ನಿಟ್ಟಿನಲ್ಲಿ ವ್ಯವಸ್ಥಿತವಾದ ಷಡ್ಯಂತ್ರ ನಡೆಸುತ್ತಿದೆ ಎಂದು ದೂರಿದರು.

ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನಮ್ಮ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ, ಭಯ ಹಾಗೂ ಅಭದ್ರತೆಯ ವಾತಾವರಣ ಸೃಷ್ಟಿಸಿದರು. ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿಯು ಐಟಿ, ಈಡಿಯಂತಹ ಸಂಸ್ಥೆಗಳನ್ನು ತನ್ನ ರಾಜಕೀಯ ಉದ್ದೇಶಕ್ಕಾಗಿ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಪ್ರಕಾಶ್ ರಾಥೋಡ್ ಆರೋಪಿಸಿದರು.

ರಾಜಕೀಯ ಪ್ರೇರಿತ ಐಟಿ ದಾಳಿಗಳು ಶಿಕ್ಷಾರ್ಹ ಅಪರಾಧವಾಗುತ್ತವೆ. ಮುಖಂಡರಾದ ಆರ್.ವಿ.ದೇಶಪಾಂಡೆ, ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್, ಎಂಟಿಬಿ ನಾಗರಾಜ್, ಭೀಮಾ ನಾಯಕ್, ಸತೀಶ್ ಸೈಲ್, ಎಚ್.ಡಿ.ಕುಮಾರಸ್ವಾಮಿ ಲೆಕ್ಕ ಪರಿಶೋಧಕರ ಮನೆ, ಕಚೇರಿಗಳ ಮೇಲೂ ದಾಳಿಗಳು ನಡೆದಿವೆ ಎಂದು ಅವರು ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News