ಪ್ರತಿ ದಿನ ದಾಳಿಂಬೆ ರಸ ಸೇವಿಸಿ, ಈ ಆರೋಗ್ಯ ಲಾಭಗಳನ್ನು ನಿಮ್ಮದಾಗಿಸಿ

Update: 2019-08-03 15:06 GMT

ನೀವು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದೀರಾ? ಹಾಗಿದ್ದರೆ ನೀವು ಪ್ರತಿ ದಿನ ದಾಳಿಂಬೆ ರಸವನ್ನು ಸೇವಿಸಿದರೆ ಸಾಕು,ನಿಮ್ಮ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಇದು ನೈಸರ್ಗಿಕ ಹಣ್ಣಿನ ರಸವಾಗಿರುವುದರಿಂದ ಯಾವುದೇ ಅಡ್ಡಪರಿಣಾಮಗಳ ಭೀತಿ ಬೇಡ.

ನಮ್ಮ ಶರೀರದಲ್ಲಿ ರಕ್ತದ ಹರಿವಿನ ರಭಸ ಮಾಮೂಲಿಗಿಂತ ಹೆಚ್ಚಿದ್ದರೆ, ಆ ಸ್ಥಿತಿಯನ್ನು ಹೈಪರ್ ಟೆನ್ಷನ್ ಅಥವಾ ಅಧಿಕ ರಕ್ತದೊತ್ತಡ ಎಂದು ಕರೆಯಲಾಗುತ್ತದೆ. ಅಧಿಕ ರಕ್ತದೊತ್ತಡವು ಹೃದ್ರೋಗಗಳಿಗೆ ಕಾರಣವಾಗುತ್ತದೆ. ವಿಶ್ವದಲ್ಲಿಂದು ಗರಿಷ್ಠ ಸಂಖ್ಯೆಯ ಸಾವುಗಳು ಹೃದ್ರೋಗಗಳಿಂದಲೇ ಸಂಭವಿಸುತ್ತಿವೆ.

ಹೃದಯವು ನಮ್ಮ ಶರೀರದ ಅತ್ಯಂತ ಮುಖ್ಯ ಮತ್ತು ಸಂಕೀರ್ಣ ಅಂಗಗಳಲ್ಲೊಂದಾಗಿದೆ,ಆದರೆ ನಾವು ಅದರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದಿಲ್ಲ. ನಾವು ನಮ್ಮ ಬಾಹ್ಯ ಆರೋಗ್ಯದ ಕಡೆಗೆ ಗಮನ ಹರಿಸುತ್ತೇವೆ ಮತ್ತು ಆಂತರಿಕ ಆರೋಗ್ಯವನ್ನು ಮರೆತುಬಿಡುತ್ತೇವೆ. ಇದು ದೀರ್ಘಾವಧಿಯಲ್ಲಿ ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತದೆ. ನಮಗೆ ವಯಸ್ಸಾಗುತ್ತಿದ್ದಂತೆ ಹೃದಯ ಸಮಸ್ಯೆಗಳು ಹೆಚ್ಚುತ್ತವೆ. ಇದೇ ಕಾರಣದಿಂದ ವಯಸ್ಸಾದವರು ಹೃದಯನಾಳೀಯ ಕಾಯಿಲೆಗಳ ಹೆಚ್ಚಿನ ಅಪಾಯವನ್ನೆದುರಿಸುತ್ತಿರುತ್ತಾರೆ. ಇವುಗಳ ಪೈಕಿ ಅಧಿಕ ರಕ್ತದೊತ್ತಡ ಮತ್ತು ಅನಿಯಮಿತ ರಕ್ತದೊತ್ತಡ ಅತ್ಯಂತ ಸಾಮಾನ್ಯವಾಗಿವೆ. ಅಧಿಕ ರಕ್ತದೊತ್ತಡ ರೋಗಿಗಳು ಸಣ್ಣ ಸಮಸ್ಯೆಯನ್ನು ಕಡೆಗಣಿಸಿದರೂ ಅದು ಹೃದಯಾಘಾತ,ಪಾರ್ಶ್ವವಾಯು ಅಥವಾ ಸಾವಿಗೂ ಕಾರಣವಾಗಬಹುದು, ಹೀಗಾಗಿ ಇಂತಹ ರೋಗಿಗಳು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ.

►ಅಧಿಕ ರಕ್ತದೊತ್ತಡ ಮತ್ತು ದಾಳಿಂಬೆ ರಸ 

 ದಾಳಿಂಬೆ ರಸವು ರಕ್ತದೊತ್ತಡವನ್ನು ತಗ್ಗಿಸಲು ಮತ್ತು ಅಧಿಕ ರಕ್ತದೊತ್ತಡದ ವಿರುದ್ಧ ಹೋರಾಡಲು ನೆರವಾಗುತ್ತದೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ. ದಾಳಿಂಬೆಯ ಬೀಜಗಳು ಪುಟಾಣಿ ಗಾತ್ರದ್ದಾಗಿದ್ದರೂ ಅವು ವಿಟಾಮಿನ್‌ಗಳು,ಖನಿಜಗಳು ಮತ್ತು ನಾರನ್ನು ಹೇರಳವಾಗಿ ಒಳಗೊಂಡಿವೆ. ಅವುಗಳ ರಸವು ಹಲವಾರು ಆರೋಗ್ಯ ಲಾಭಗಳನ್ನು ನೀಡುತ್ತದೆ. ತಾಜಾ ದಾಳಿಂಬೆ ರಸವು ಕೆಫೀನ್‌ಯುಕ್ತ ಮತ್ತು ಇಂಗಾಲೀಕೃತ ಪಾನೀಯಗಳಿಗಿಂತ ಹೆಚ್ಚು ಆರೋಗ್ಯಕರವಾಗಿದೆ. ಅಂಗಡಿಗಳಲ್ಲಿ ದೊರೆಯುವ ಪ್ಯಾಕ್ ಮಾಡಲಾದ ರಸವು ಹೆಚ್ಚುವರಿ ಸಕ್ಕರೆ ಮತ್ತು ಸಂರಕ್ಷಕಗಳನ್ನು ಒಳಗೊಂಡಿರುತ್ತದೆ ಮತ್ತು ಇವು ಆರೋಗ್ಯಕ್ಕೆ ಒಳ್ಳೆಯದಲ್ಲ. ದಾಳಿಂಬೆ ರಸದ ಆರೋಗ್ಯಲಾಭಗಳನ್ನು ಗರಿಷ್ಠ ಪ್ರಮಾಣದಲ್ಲಿ ಪಡೆಯಬೇಕಿದ್ದರೆ ತಾಜಾ ರಸವನ್ನೇ ಸೇವಿಸಿ.

ಪೊಟ್ಯಾಷಿಯಂ ಶರೀರದಲ್ಲಿ ಸೋಡಿಯಮ್‌ನ ಋಣಾತ್ಮಕ ಪರಿಣಾಮಗಳನ್ನು ತಟಸ್ಥಗೊಳಿಸುತ್ತದೆ,ಹೀಗಾಗಿ ಅಧಿಕ ರಕ್ತದೊತ್ತಡ ರೋಗಿಗಳು ಪೊಟ್ಯಾಷಿಯಂ ಮತ್ತು ನಾರು ಅಧಿಕ ಪ್ರಮಾಣದಲ್ಲಿರುವ ಆಹಾರವನ್ನು ಸೇವಿಸುವುದು ಅಗತ್ಯವಾಗುತ್ತದೆ. 100 ಗ್ರಾಂ ದಾಳಿಂಬೆಯಲ್ಲಿ ಸುಮಾರು 236 ಎಂಜಿ ಪೊಟ್ಯಾಷಿಯಂ ಇರುತ್ತದೆ ಮತ್ತು ಇದು ಹೃದಯದ ಆರೋಗ್ಯವನ್ನು ಕಾಯ್ದುಕೊಳ್ಳಲು ಅಗತ್ಯವಾಗಿದೆ.

ದಾಳಿಂಬೆ ರಸವು ರಕ್ತನಾಳದ ಕಾರ್ಯನಿರ್ವಹಣೆಗೆ ಪೂರಕವಾಗಿದ್ದು,ಅವುಗಳನ್ನು ಮೃದುವಾಗಿರಿಸುತ್ತದೆ. ಅಲ್ಲದೆ ದಾಳಿಂಬೆಯಲ್ಲಿರುವ ಪಾಲಿಫೆನಾಲ್ ಅಪಧಮನಿಗಳ ಸ್ಥಿತಿಸ್ಥಾಪಕತ್ವ ಗುಣವನ್ನು ಕಾಯ್ದುಕೊಳ್ಳುತ್ತದೆ,ತನ್ಮೂಲಕ ರಕ್ತದೊತ್ತಡವನ್ನು ಕ್ರಮಬದ್ಧಗೊಳಿಸುತ್ತದೆ ಹಾಗೂ ಹೃದಯಾಘಾತ ಮತ್ತು ಇತರ ಹೃದಯನಾಳೀಯ ರೋಗಗಳ ಅಪಾಯವನ್ನು ತಡೆಯುತ್ತದೆ. ದಾಳಿಂಬೆ ರಸದ ಸೇವನೆಯು ಶರೀರದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಸಂಗ್ರಹವಾಗುವುದನ್ನು ತಡೆಯಲೂ ನೆರವಾಗುತ್ತದೆ. ಅದು ಮೂತ್ರವಿಸರ್ಜನೆಯನ್ನು ಸರಾಗಗೊಳಿಸುತ್ತದೆ ಮತ್ತು ಶರೀರದಲ್ಲಿಯ ಅನಗತ್ಯ ಸೋಡಿಯಂ ಅನ್ನು ಹೊರಹಾಕಲು ನೆರವಾಗುತ್ತದೆ.

ಅಧಿಕ ರಕ್ತದೊತ್ತಡ ರೋಗಿಗಳು ದಾಳಿಂಬೆ ರಸದ ಸೇವನೆಯೊಂದಿಗೆ ಸೂಕ್ತ ಆಹಾರಕ್ರಮವನ್ನು ಅನುಸರಿಸಬೇಕು. ಉಪ್ಪು ಹೆಚ್ಚಿರುವ ಮತ್ತು ಕರಿದ ಆಹಾರಗಳಿಂದ ದೂರವುಳಿಯುವುದು ಒಳ್ಳೆಯದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News