ಮೈಗ್ರೇನ್ ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರನ್ನೇ ಕಾಡುವುದು ಏಕೆ?

Update: 2019-08-03 15:17 GMT

ವಿಶ್ವದ ಜನಸಂಖ್ಯೆಯ ಸುಮಾರು ಶೇ.30ರಷ್ಟು ಜನರು ಮೈಗ್ರೇನ್ ಅಥವಾ ಅರೆ ತಲೆನೋವಿನಿಂದ ನರಳುತ್ತಿರುತ್ತಾರೆ. ವಿಶ್ವದಲ್ಲಿ ಮೂರನೇ ಅತ್ಯಂತ ಸಾಮಾನ್ಯ ರೋಗವಾಗಿರುವ ಮೈಗ್ರೇನ್ ಪುರುಷರಿಗಿಂತ ಮೂರು ಪಟ್ಟು ಹೆಚ್ಚಾಗಿ ಮಹಿಳೆಯರನ್ನು ಕಾಡುತ್ತದೆ.

ಪ್ರತಿ ನಾಲ್ವರು ಮಹಿಳೆಯರ ಪೈಕಿ ಓರ್ವ ಮಹಿಳೆಯನ್ನು ಮೈಗ್ರೇನ್ ನಿರಂತರವಾಗಿ ಪೀಡಿಸುತ್ತಿರುತ್ತದೆ. ಮಹಿಳೆಯರು ಒತ್ತಡವನ್ನು ತಾಳಿಕೊಳ್ಳಲು ಸಮರ್ಥರಲ್ಲ ಎನ್ನುವ ದಶಕಗಳಷ್ಟು ಹಳೆಯದಾದ ನಂಬಿಕೆ ಇದಕ್ಕೆ ಖಂಡಿತ ಕಾರಣವಲ್ಲ. ವೈದ್ಯಕೀಯ ತಜ್ಞರು ಇದಕ್ಕೆ ಆಧಾರಸಹಿತ ಕಾರಣಗಳನ್ನು ಕಂಡುಕೊಂಡಿದ್ದಾರೆ.

ಮಹಿಳೆಯರು ಅನುಭವಿಸುವ ಮೈಗ್ರೇನ್ ದೀರ್ಘಕಾಲಿಕವಾಗಿರುತ್ತದೆ ಮತ್ತು ಹೆಚ್ಚು ಯಾತನಾದಾಯಕವಾಗಿರುತ್ತದೆ ಎನ್ನುವುದನ್ನು ಅಧ್ಯಯನಗಳು ಬೆಟ್ಟು ಮಾಡಿವೆ. ಶೇ.85ರಷ್ಟು ದೀರ್ಘಕಾಲಿಕ ಮೈಗ್ರೇನ್ ಪ್ರಕರಣಗಳಲ್ಲಿ ರೋಗಿಗಳು ಮಹಿಳೆಯರೇ ಆಗಿರುತ್ತಾರೆ ಮತ್ತು ಮೈಗ್ರೇನ್‌ನಿಂದ ಬಳಲುತ್ತಿರುವ ಶೇ.92ರಷ್ಟು ಮಹಿಳೆಯರಿಗೆ ಯಾವುದೇ ಕೆಲಸವನ್ನು ಮಾಡುವುದೂ ಸಾಧ್ಯವಾಗುವುದಿಲ್ಲ.

ಹಾರ್ಮೋನ್‌ಗಳು ಮತ್ತು ಮೈಗ್ರೇನ್ ನಡುವಿನ ಸಂಬಂಧ

ಮೈಗ್ರೇನ್‌ನಿಂದ ನರಳುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವೈದ್ಯಕೀಯ ತಜ್ಞರು ಮತ್ತು ಸಂಶೋಧಕರು ಇದನ್ನು ಅಧ್ಯಯನಕ್ಕೆ ಮುಖ್ಯ ವಿಷಯವನ್ನಾಗಿಸಿಕೊಂಡಿದ್ದಾರೆ. ಮಹಿಳೆಯರಲ್ಲಿ ಮೈಗ್ರೇನ್ ಉಂಟು ಮಾಡುವಲ್ಲಿ ಹಾರ್ಮೋನ್‌ಗಳು ಪ್ರಮುಖ ಪಾತ್ರ ವಹಿಸುತ್ತವೆ ಎನ್ನುವುದನ್ನು ಅಧ್ಯಯನಗಳು ಬಹಿರಂಗಗೊಳಿಸಿವೆ.

ಹೆಚ್ಚಿನ ಮಹಿಳೆಯರಲ್ಲಿ ಮೈಗ್ರೇನ್ ಮುಟ್ಟು,ಗರ್ಭ ನಿರೋಧಕ ಮಾತ್ರೆಗಳ ಸೇವನೆ,ಗರ್ಭಾವಸ್ಥೆ ಮತ್ತು ಋತುಬಂಧದೊಂದಿಗೆ ಗುರುತಿಸಿಕೊಂಡಿದೆ. ಮಹಿಳೆಯಲ್ಲಿ ಮುಟ್ಟಿನ ದಿನಗಳ ಆರಂಭದೊಡನೆ ಹಾರ್ಮೋನ್‌ಗಳಲ್ಲಿ ಏರಿಳಿತಗಳಾಗುತ್ತವೆ ಮತ್ತು ಮೈಗ್ರೇನ್ ಪುನರಾವರ್ತನೆಯು ಹೆಚ್ಚುತ್ತಲೇ ಹೋಗುತ್ತದೆ.ಎಳೆಯ ವಯಸ್ಸಿನಲ್ಲಿ ಬಾಲಕಿಯರಿಗಿಂತ ಬಾಲಕರನ್ನು ಮೈಗ್ರೇನ್ ಹೆಚ್ಚಾಗಿ ಕಾಡುತ್ತದೆ. ಆದರೆ ಪ್ರೌಢಾವಸ್ಥೆಯನ್ನು ತಲುಪಿದ ನಂತರ ಬಾಲಕಿಯರು ಮತ್ತು ಮಹಿಳೆಯರಲ್ಲಿ ಮೈಗ್ರೇನ್ ಪ್ರಕರಣಗಳು ಹೆಚ್ಚುತ್ತವೆ. ಇದು ಈಸ್ಟ್ರೋಜೆನ್ ಹಾರ್ಮೋನ್‌ಗೂ ಮೈಗ್ರೇನ್‌ಗೂ ಸಂಬಂಧವಿದೆ ಎನ್ನುವುದನ್ನು ಸೂಚಿಸುತ್ತದೆ. ಸಹಜವಾಗಿ ಋತುಬಂಧಕ್ಕೊಳಗಾದ ಮಹಿಳೆಯರಿಗೆ ಹೋಲಿಸಿದರೆ ಶಸ್ತ್ರಚಿಕಿತ್ಸೆ ಮೂಲಕ ಋತುಬಂಧಕ್ಕೊಳಗಾದ ಮಹಿಳೆಯರಲ್ಲಿ ಮೈಗ್ರೇನ್ ದಾಳಿಗಳು ತೀವ್ರವಾಗಿರುತ್ತವೆ ಮತ್ತು ದೀರ್ಘಕಾಲಿಕವಾಗಿರುತ್ತವೆ.

ಮೈಗ್ರೇನ್ ಸಾಮಾನ್ಯವಾಗಿ ಕೆಲವು ಕಾರಣಗಳಿಂದಾಗಿ ಮಿದುಳಿನಲ್ಲಿಯ ರಕ್ತನಾಳಗಳು ಹಿಗ್ಗಿದಾಗ ಉಂಟಾಗುತ್ತದೆ. ರಕ್ತನಾಳಗಳು ಸುತ್ತಲಿನ ಜಾಗವನ್ನು ಒತ್ತಿದಾಗ ಈ ಹಿಗ್ಗುವಿಕೆಯು ನೋವನ್ನುಂಟು ಮಾಡುತ್ತದೆ ಮತ್ತು ಲಕ್ಷಣಗಳು ಗೋಚರವಾಗುತ್ತವೆ. ರಕ್ತನಾಳಗಳ ಹಿಗ್ಗುವಿಕೆ ಅಥವಾ ಕುಗ್ಗುವಿಕೆಯಲ್ಲಿ ಈಸ್ಟ್ರೋಜೆನ್ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದು ಪುರುಷರಿಗಿಂತ ಮಹಿಳೆಯರನ್ನು ಮೈಗ್ರೇನ್ ಹೆಚ್ಚಾಗಿ ಕಾಡಲು ಕಾರಣವಾಗಿದೆ.

ಮಹಿಳೆಯರಲ್ಲಿ ಮೈಗ್ರೇನ್ ತಲೆನೋವಿಗೂ ಈಸ್ಟ್ರೋಜೆನ್‌ಗೂ ಸಂಬಂಧವಿರುವುದನ್ನು ಈವರೆಗಿನ ಅಧ್ಯಯನಗಳು ಖಚಿತಪಡಿಸಿವೆಯಾದರೂ ಈ ಬಗ್ಗೆ ಸ್ಪಷ್ಟ ತಿಳುವಳಿಕೆಯನ್ನು ಪಡೆಯಲು ಅಧ್ಯಯನಗಳು ಈಗಲೂ ಮುಂದುವರಿದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News