ಪರ್ಯಾಯ ವ್ಯವಸ್ಥೆಗೆ ಪ್ಲಾಸ್ಟಿಕ್ ಮೇಳ ಆಯೋಜನೆ: ಮೇಯರ್ ಗಂಗಾಂಬಿಕೆ

Update: 2019-08-03 16:44 GMT

ಬೆಂಗಳೂರು, ಆ.3: ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಪ್ಲಾಸ್ಟಿಕ್ ಮೇಳವನ್ನು ಆಯೋಜಿಸಲಾಗುವುದು ಎಂದು ಮೇಯರ್ ಗಂಗಾಂಬಿಕೆ ತಿಳಿಸಿದರು.

ಶನಿವಾರ ನಗರದ ಪೂರ್ವ ವಲಯದಲ್ಲಿ ಪರಿಸರ ಸಂರಕ್ಷಣೆ, ಪ್ಲಾಸ್ಟಿಕ್ ನಿಷೇಧ, ಕಸ ವಿಂಗಡಣೆ ಕುರಿತಂತೆ ಆಯೋಜಿಸಿದ್ದ ಜಾಗೃತಿ ಜಾಥಾವನ್ನು ಉದ್ಘಾಟಿಸಿದ ಅವರು, ಹೊಟೇಲ್‌ಗಳಲ್ಲಿ ಬಳಸುವ ಪ್ಲಾಸ್ಟಿಕ್ ಉತ್ಪನ್ನಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಕ್ರಮಕೈಗೊಳ್ಳಲಾಗುವುದು. ಪ್ಲಾಸ್ಟಿಕ್ ಬಳಕೆ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಿ, ಪ್ಲಾಸ್ಟಿಕ್ ಉತ್ಪನ್ನಗಳು ಜಪ್ತಿ ಮಾಡಿ ದಂಡ ವಿಧಿಸುತ್ತಿವೆ. ಪ್ಲಾಸ್ಟಿಕ್ ಬಳಕೆಯನ್ನು ಹಂತ ಹಂತವಾಗಿ ನಿರ್ಮೂಲನೆ ಮಾಡಬೇಕಾಗಿದೆ ಎಂದರು.

ನಗರದಲ್ಲಿ ಕಸದ ಸಮಸ್ಯೆ ನಿವಾರಣೆಗೆ ಸೆ.1ರಿಂದ ಹೊಸ ಟೆಂಡರ್ ಪದ್ಧತಿಯನ್ನು ಅನುಷ್ಠಾನಗೊಳಿಸಲು ನಾಗರಿಕರು ಒಣ, ಹಸಿ ಸ್ಯಾನಿಟರಿ, ಇ- ತ್ಯಾಜ್ಯವನ್ನು ಕಡ್ಡಾಯವಾಗಿ ವಿಂಗಡಣೆ ಮಾಡಬೇಕು. ಮುಂಬರುವ ಗಣೇಶ ಹಬ್ಬದ ಸಂದರ್ಭದಲ್ಲಿ ಪಿಓಪಿ ಗಣೇಶ ಬದಲು ಮಣ್ಣಿನ ಗಣೇಶಮೂರ್ತಿಯನ್ನಿಟ್ಟು ಪೂಜಿಸುವ ಮೂಲಕ ಪರಿಸರ ಕಾಪಾಡಬೇಕೆಂದು ಮೇಯರ್ ಅವರು ಮನವಿ ಮಾಡಿದರು.

ಜಾಥಾದಲ್ಲಿ 9 ಶಾಲಾ- ಕಾಲೇಜುಗಳಿಂದ 1 ಸಾವಿರಕ್ಕೂ ಹೆಚ್ಚು ಮಕ್ಕಳು ಭಾಗಿಯಾಗಿದ್ದರು. ಕ್ಲೀವ್‌ಲ್ಯಾಂಡ್ ಟೌನ್‌ನ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜೀದ್, ಜೆಡಿಎಸ್ ಗುಂಪಿನ ನಾಯಕಿ ನೇತ್ರಾನಾರಾಯಣ್, ಪೂರ್ವ ವಲಯದ ಜಂಟಿ ಆಯುಕ್ತ ರವೀಂದ್ರ ಮತ್ತಿತರರು ಉಪಸ್ಥಿತರಿದ್ದರು.

ಮೇಯರ್‌ಗೂ 500 ರೂ. ದಂಡ: ಉದ್ಯಾನನಗರಿಯಲ್ಲಿ ಸಂಪೂರ್ಣವಾಗಿ ಪ್ಲಾಸ್ಟಿಕ್ ನಿಷೇಧ ಮಾಡಬೇಕೆಂದು ಬಿಬಿಎಂಪಿ ಮೇಯರ್ ಗಂಗಾಂಬಿಕೆ ಕಳೆದ ತಿಂಗಳಿಂದ ನಗರದಾದ್ಯಂತ ಜಾಗೃತಿ ಜಾಥಾಕ್ಕೆ ಚಾಲನೆ ನೀಡುತ್ತಿದ್ದಾರೆ. ಆದರೆ ಮೇಯರ್‌ರವರೇ ಪ್ಲಾಸ್ಟಿಕ್ ಬಳಸಿದ್ದು, ಈಗ ದಂಡ ಕಟ್ಟಲು ಒಪ್ಪಿದ್ದಾರೆ.

ಜುಲೈ 30ರಂದು ಸಿಎಂ ಬಿ.ಎಸ್.ಯಡಿಯೂರಪ್ಪರನ್ನು ಶುಭ ಕೋರಲು ಡ್ರೈಫ್ರೂಟ್ಸ್ ಬುಟ್ಟಿಯನ್ನು ತೆಗೆದುಕೊಂಡು ಹೋಗಿದ್ದರು. ಆದರೆ ಬುಟ್ಟಿಯ ಮೇಲ್ಪದರವನ್ನು ಪ್ಲಾಸ್ಟಿಕ್ ಕವರ್‌ನಿಂದ ಮುಚ್ಚಲಾಗಿತ್ತು. ಇದನ್ನೇ ಮೇಯರ್ ಸಿಎಂಗೆ ನೀಡಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನು ಗಮನಿಸಿದ ಗಂಗಾಂಬಿಕೆ ತಕ್ಷಣ ಪ್ಲಾಸ್ಟಿಕ್ ಬಳಸಿದ್ದಕ್ಕೆ ಕ್ಷಮೆಯಾಚಿಸಿ ತಾವೇ ಖುದ್ದಾಗಿ ಬಿಬಿಎಂಪಿ ಆರೋಗ್ಯ ಇಲಾಖೆಗೆ ತೆರಳಿ 500ರೂ. ದಂಡ ಕಟ್ಟುವುದಾಗಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News