ಸೂಕ್ಷ್ಮ ಮನಸ್ಸಿನ ಚಿತ್ರ ಕಲಾವಿದ 'ರಮೇಶ್ ಚಂಡೆಪ್ಪನವರ್'

Update: 2019-08-04 07:53 GMT

          ಕಳಕೇಶ್ ಗೊರವರ, ರಾಜೂರ

ಕಲೆ ಮಾನವೀಯ ಸಂಬಂಧಗಳನ್ನು ಮತ್ತಷ್ಟು ಗಾಢಗೊಳಿಸುವ ಸೇತುವೆ. ವ್ಯಂಗ್ಯಚಿತ್ರವೆನ್ನುವುದೊಂದು ಕಟುವಾದ ವಿಮಶೆರ್. ಕಲಾ ಪ್ರಕಾರಗಳಲ್ಲಿ ಒಂದಾಗಿರುವ ಚಿತ್ರಕಲೆಯ ವಿಸ್ತಾರ ಊಹೆಗೂ ನಿಲುಕದ್ದು. ಬಳಪ ಹಿಡಿದು ಹಲಗೆಯ ಮೇಲೆ ಬರೆಯುವ ವಯಸ್ಸಿನಿಂದಲೇ ಇಂತಹದೊಂದು ಕಲೆಯ ಬಗ್ಗೆ ಪ್ರೀತಿ ಬೆಳೆಸಿಕೊಂಡು, ಕರಗತ ಮಾಡಿಕೊಂಡವರು ಸೂಕ್ಷ್ಮ ಮನಸ್ಸಿನ ಹುಬ್ಬಳ್ಳಿಯ ಚಿತ್ರ ಕಲಾವಿದ ರಮೇಶ್ ಚಂಡೆಪ್ಪನವರ್. ಇವರ ಕಲಾಕೃತಿ ಗಳಲ್ಲಿ ಚಲನಶೀಲತೆ ಇದೆ. ಅವುಗಳಲ್ಲಿ ಒಂದು ಬಗೆಯ ಚುಂಬಕ ಸೆಳೆಯುವ ಸೆಳೆತವಿದೆ. ನೋಡಿದ ಎಂತಹವರೂ ವಾವ್ಹ್.. ಎಂದು ಉದ್ಗರಿಸದೇ ಇರುವುದು ಅಸಾಧ್ಯವೆನಿಸುತ್ತದೆ.

ಇವರ ಕಲಾಕೃತಿಗೆ 2012ರಲ್ಲಿ ಧಾರವಾಡದ ಲಯನ್ಸ್ ಕ್ಲಬ್ ನೀಡುವ ‘ಸೇವ್ ವಾಟರ್’ ಪೇಂಟಿಂಗ್ ಪ್ರಶಸ್ತಿ ಲಭಿಸಿದೆ. ಸೊಕ್ಕಿನಿಂದ ಉಕ್ಕುವ ಅಲೆಗಳಿಗೆ ಮುಖವೊಡ್ಡಿ ನಿಂತ ಪ್ರವಾಸಿಗರು, ಮೆಲು ಅಲೆಗಳೊಂದಿಗೆ ಆಟದಲ್ಲಿ ನಿರತವಾಗಿರುವ ಮಕ್ಕಳು ಹೀಗೆ ಹತ್ತು ಹಲವು ಸಂಗತಿಗಳಲ್ಲದೇ ಮತ್ತೆ ಇನ್ನೇನೋ ಹೇಳುತ್ತಿರುವ ರಮೇಶ್ ಕುಂಚದಲ್ಲಿ ಅರಳಿದ ಕಲಾಕೃತಿಯೊಂದು ‘ಭಾರತೀಯ ಮೊದಲ ಒಲಿಂಪಿ ಆರ್ಟ್ 2019’ರ ಅಂತರ್ ರಾಷ್ಟ್ರೀಯ ಮಟ್ಟದ ಕಲಾಕೃತಿ ಪ್ರದರ್ಶನಕ್ಕೆ ಆಯ್ಕೆಯಾಗಿದೆ. ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಎಂಎಫ್‌ಎ ಓದಿರುವ ರಮೇಶ್, ಸಾಂಪ್ರದಾಯಿಕ, ಜಲವರ್ಣ, ತೈಲವರ್ಣ, ಆಕ್ರಲಿಕ್, ಪೆನ್ಸಿಲ್ ವರ್ಕ, ಜನಪದ ಶೈಲಿಯ ವರ್ಲಿ ಚಿತ್ರಕಲೆ ಹೀಗೆ ವಿವಿಧ ವಿಭಾಗಗಳಲ್ಲಿ ತಮ್ಮ ಕೈಚಳಕ ತೋರಿಸಿ ಸೈ ಎನಿಸಿಕೊಂಡಿದ್ದಾರೆ. ಸದ್ಯ ‘ಜಲವರ್ಣ’ ಮಾಧ್ಯಮದಲ್ಲಿ ಚಿತ್ರರಚಿಸಿ ರಾಜ್ಯ, ಹೊರರಾಜ್ಯ ಹಾಗೂ ಅಂತರ್‌ರಾಷ್ಟ್ರೀಯಮಟ್ಟದಲ್ಲಿ ಕಲಾಕೃತಿ ಪ್ರದರ್ಶನ ನೀಡುವ ಮೂಲಕ ವಾರಿಗೆಯ ಚಿತ್ರ ಕಲಾವಿದರ ಮತ್ತು ಪ್ರೇಕ್ಷಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಚಂದಮಾಮದಲ್ಲಿ ಬರುತ್ತಿದ್ದ ಚಿತ್ರಗಳನ್ನು ಯಾವಾಗಲೂ ಗಮನಿಸುತ್ತಿದ್ದ ಇವರು ‘ಡಿಂಗ’ ಪಾತ್ರಧಾರಿಯನ್ನು ತುಂಬಾ ಮೆಚ್ಚಿ ಕೊಂಡಿದ್ದರು. ಕಾಮಿಕ್ಸ್, ಬಾಲಮಿತ್ರ, ಚಂದಮಾಮದಲ್ಲಿರುವಂತೆ ಮುದ್ದು ಮುದ್ದು ಚಿತ್ರಗಳಲ್ಲದೆ, ಬೇರೊಂದು ಬಗೆಯ ಚಿತ್ರಗಳೂ ಇರುತ್ತವೆ. ಅವು ಎಲ್ಲವನ್ನೂ ಅಂದವಾಗಿ ತೋರಿಸದೆ ಬೇರೆ ಇನ್ನೇನೋ ಹೇಳುತ್ತವೆ ಎನ್ನುವ ಸ್ಥೂಲ ಪರಿಕಲ್ಪನೆ ಮೂಡಿದ ಬಗೆ, ಮನುಷ್ಯ ಮುಖದ ಓರೆಕೋರೆಗಳನ್ನು ಅತ್ಯಂತ ಸರಳವಾದ ಕೆಲವೇ ಕೆಲವು ರೇಖೆಗಳಲ್ಲಿ ಹಿಡಿದಿಡುವ ಕಲೆ, ಬಣ್ಣಗಳ ಬಗೆಗೆ ಅಮೂರ್ತ ಕಲ್ಪನೆ, ಬೆಳವಣಿಗೆ ಹಾಗೂ ತಮ್ಮ ವೃತ್ತಿ ಬದುಕಿನ ಹಲವು ಅನುಭವಗಳನ್ನು ರಮೇಶ್ ಅವರು ಇಲ್ಲಿ ಹಂಚಿಕೊಂಡಿದ್ದಾರೆ.

ನಮ್ಮ ತಂದೆ ಒಬ್ಬ ಹಮಾಲಿಯಾಗಿದ್ದರು. ಅವರದೊಂದು ಎಕ್ಕಾಗಾಡಿ ಇತ್ತು (ಒಂಟಿ ಎತ್ತಿನ ಬಂಡಿ). ತಾಯಿ ದಿನಗೂಲಿ ಕೆಲಸಕ್ಕೆ ಹೋಗುತ್ತಿದ್ದರು. ಮನೆಯಲ್ಲಿ ಬಡತನವೆನ್ನುವುದು ಉಸಿರಿನಷ್ಟೇ ಸಹಜವಾಗಿತ್ತು. 70ರ ದಶಕದಲ್ಲಿ ನಮ್ಮಂತಹ ಕುಟುಂಬ ಹಿನ್ನೆಲೆವುಳ್ಳವರು ಸಾಕ್ಷರರಾಗುವುದೆಂದರೆ ಸೋಜಿಗ ಮತ್ತು ಸವಾಲಾಗಿತ್ತು. ನಮ್ಮ ತಂದೆಗೆ ಆರು ಜನ ಮಕ್ಕಳು. ನಾನೇ ಹಿರಿಮಗ ಮತ್ತು ಮೊದಲ ಸಾಕ್ಷರ. ಬಾಲ್ಯದಲ್ಲಿ ಹಲವುಸಲ ತಂದೆಯೊಂದಿಗೆ ನಾನೂ ಮಾರುಕಟ್ಟೆಗೆ ಹೋಗುತ್ತಿದ್ದೆ. ಅಲ್ಲಿನ ಜನಜೀವನದ ಚಿತ್ರಣ ಮತ್ತು ಮನೆಯಲ್ಲಿ ಸಾಕಿದ್ದ ಆಡು, ಕುರಿಗಳು ನನ್ನ ಚಿತ್ರಕಲೆಗೆ ಮೊದಲ ಸ್ಫೂರ್ತಿ ಎನ್ನಬಹುದು. ಬಾಲ್ಯದಲ್ಲಿಯೇ ಇತರ ಕಲಾವಿದರ ಚಿತ್ರ ನೋಡಿ ಆಕರ್ಷಿತನಾಗಿದ್ದೆ. ಅದೇ ತರ ಚಿತ್ರ ಬಿಡಿಸಿ ಸೇಹಿತರಿಗೆ ತೋರಿಸಿ ಬೇಶ್ ಅನಿಸಿಕೊಂಡಿದ್ದೆ. ಮೂರನೇ ತರಗತಿಯಲ್ಲಿ ಓದುತ್ತಿದ್ದಾಗ ಮನಸ್ಸಿಗೆ ತೋಚಿದ ಚಿತ್ರಗಳನ್ನು ಬಿಳಿ ಹಾಳೆಯಲಿ ಬಿಡಿಸಿ ಸ್ನೇಹಿತರಿಗೆ ಕೊಡುತ್ತಿದ್ದೆ. ಆಗೆಲ್ಲ ಸಹಪಾಠಿಗಳು ಆಡುತ್ತಿದ್ದ ಮೆಚ್ಚುಗೆಯ ಮಾತುಗಳು ನನ್ನನ್ನು ಅತೀವ ಖುಷಿಯಲ್ಲಿ ತೇಲಾಡುವಂತೆ ಮಾಡಿದ್ದವು. ನಮ್ಮ ಶಾಲೆಯ ವರ್ಗ ಶಿಕ್ಷಕರಾಗಿದ್ದ ಪ.ಹ.ನಂದಿಕೇಶ್ವರ ಗುರುಗಳು ನನ್ನೊಳಗಿನ ಚಿತ್ರ ಕಲೆಯ ಬಗ್ಗೆ ಇರುವ ಆಸಕ್ತಿ ಮತ್ತು ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದರು. ನಂದಿಕೇಶ್ವರ ಗುರುಗಳು ‘ಲಂಕೇಶ್’ ಪತ್ರಿಕೆಯನ್ನು ತರಿಸುತ್ತಿದ್ದರು. ಹುಬ್ಬಳ್ಳಿಯ ದುರ್ಗದಬೈಲ್‌ನಿಂದ ವೀರಾಪೂರ ಓಣಿಯ 4ನೇ ನಂಬರ್ ಶಾಲೆಗೆ ಪತ್ರಿಕೆಯನ್ನು ತಂದುಕೊಡುವ ಜವಾಬ್ದಾರಿ ನನ್ನ ಮೇಲೆ ಇದ್ದಿದ್ದರಿಂದ ‘ಲಂಕೇಶ್’ ಪತ್ರಿಕೆ ಓದುವ ಸುವರ್ಣಾ ವಕಾಶವೂ ಒದಗಿತ್ತು. ಹೀಗಾಗಿ ಚಿತ್ರಕಲೆ ಜೊತೆ ಜೊತೆಗೆ ಸಾಹಿತ್ಯದಲ್ಲೂ ಆಸಕ್ತಿ ಬೆಳೆಯಿತು. ಶಾಲಾ ದಿನಗಳಲೆಲ್ಲ ಕುರಿಚಿತ್ರ, ದೇವತೆ ಹಾಗೂ ಸಿನೆಮಾತಾರೆಯರ ಚಿತ್ರ ಬಿಡಿಸುವುದೆಂದರೆ ಅದೇನೋ ಎಲ್ಲಿಲ್ಲದ ಉತ್ಸಾಹ ನನಗೆ. ಎಸೆಸೆಲ್ಸಿ ಬಳಿಕ ಸಿಗುವ 2 ತಿಂಗಳು ರಜೆಯಲ್ಲಿ ಹುಬ್ಬಳ್ಳಿಯ ‘ಶಕ್ತಿ’ ಟಾಕೀಸ್‌ನಲ್ಲಿ ಬ್ಯಾನರ್ ರಚಿಸುತ್ತಿದ್ದ ಬಿ.ಪಿ.ಲಿಂಗಂ ಅವರಲ್ಲಿ ಸಹಾಯಕನಾಗಿ ಕೆಲಸಕ್ಕೆ ಸೇರಿ ಕೊಂಡೆ. ಅಲ್ಲಿ ತಯಾರಾಗುತ್ತಿದ್ದ ಬೃಹತ್ ಗಾತ್ರದ ಬ್ಯಾನರ್‌ನಲ್ಲಿ ತೈಲವರ್ಣದ ಕಲಾಕೃತಿ ರಚಿಸುವುದು ತುಂಬಾ ಖುಷಿ ಕೊಡುತ್ತಿದ್ದವು. ಹೀಗೆ ಬದುಕಿನ ಹಲವಾರು ಸಂದರ್ಭಗಳು ವಿಭಿನ್ನ ಕಲಾಕೃತಿಗಳ ರಚನೆಗೆ ಪ್ರೇರಣೆ ಯಾಗಿವೆ.

ಚಿತ್ರಕಲಾ ಗೆಳೆಯರೊಂದಿಗಿನ ಒಡನಾಟ ಸದಾ ಕಲಾಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಒತ್ತಾಸೆಯಾಗಿದೆ. ಪರ್ಯಾಯ ಕೃಷಿ ಮಾಧ್ಯಮ ಕೇಂದ್ರ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಶಿಬಿರಾರ್ಥಿಯಾಗಿ ಭಾಗವಹಿಸಿದ್ದ ವೇಳೆ ನಾನು ಬಿಡಿಸಿದ್ದ ಕೃಷಿ ಸಂಬಂಧಿಸಿದ ಚಿತ್ರ ಆಮಂತ್ರಣ ಪತ್ರದಲ್ಲಿ ಮೊದಲ ಬಾರಿಗೆ ಪ್ರಕಟಗೊಂಡಿತ್ತು. ಬಳಿಕ 2011ರಲ್ಲಿ ‘ಧಾರವಾಡ ಜಿಲ್ಲಾ ಉತ್ಸವ’ ಶಿಲ್ಪಕಲಾ ಕ್ಯಾಂಪ್ ಧಾರವಾಡ, ವಚನ ಸಾಹಿತ್ಯ ಪೇಂಟಿಂಗ್ ಕ್ಯಾಂಪ್ ಜೆಎಸ್ಸೆಸ್ ಹಾಳಬಾವಿ ಸ್ಕೂಲ್ ಆಫ್ ಆರ್ಟ್ ಧಾರವಾಡ, ಲಲಿತ ಕಲಾ ಅಕಾಡಮಿ ಬೆಂಗಳೂರು ಗ್ರಾಫಿಕ್ ಕ್ಯಾಂಪ್ ಧಾರವಾಡ, 2012ರಲ್ಲಿ ಧಾರವಾಡ ಜಿಲ್ಲಾ ಉತ್ಸವ’, 2017ರಲ್ಲಿ ಅಂತ್ಯೋದಯ ಕಲಾ ಶಿಬಿರದಲ್ಲಿ ಕಲಾಕೃತಿ ಪ್ರದರ್ಶನ ಹಾಗೂ ಬೆಂಗಳೂರು, ಹುಬ್ಬಳ್ಳಿ, ಗೋವಾ ಮತ್ತಿತರ ಕಡೆಗಳಲ್ಲಿ ಸೋಲೋ ಪ್ರದರ್ಶನ. ಪ್ರಸ್ತುತ ಜಲವರ್ಣ ಮಾಧ್ಯಮದಲ್ಲಿ ಚಿತ್ರರಚಿಸಿ ರಾಜ್ಯ, ಹೊರರಾಜ್ಯ ಮಾತ್ರವಲ್ಲದೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಚಿತ್ರಕಲಾ ಪ್ರದರ್ಶನ ಮಾಡುವ ಮೂಲಕ ಚಿತ್ರಕಲಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಚಿತ್ರ ರಚನೆ ಮಾತ್ರವಲ್ಲದೆ, ಆಗಾಗ ಚಿತ್ರ ಕಲೆಯ ಕುರಿತು ಲೇಖನಗಳನ್ನೂ ಬರೆಯುತ್ತೇನೆ. ಅಲ್ಲದೆ, ಚಿತ್ರಕಲೆ ಯಲ್ಲಿ ಆಸಕ್ತಿಯುಳ್ಳ ಹಲವು ಮಕ್ಕಳಿಗೆ ಮನೆಪಾಠ ಹೇಳಿ ಕೊಡುತ್ತಿದ್ದೇನೆ. ತಂದೆ, ತಾಯಿ, ತಮ್ಮ, ತಂಗಿ, ಹೆಂಡತಿ ಮಕ್ಕಳ ಸಹಕಾರ ಇದ್ದೇ ಇದೆ.

ಚಿತ್ರಕಲೆಯಲ್ಲಿ ಸಾಧನೆ ಮಾಡುವುದೆಂದರೆ ಅಚಾನಕ್ಕಾಗಿ ಆಗುವಂತಹದ್ದಲ್ಲ, ಇದೊಂದು ಸೃಜಶೀಲ ಸಾಧನೆ. ಅತೀವ ಆಸಕ್ತಿ, ಸಾಕಷ್ಟು ಬದ್ಧತೆ ಮತ್ತು ಸುದೀರ್ಘ ಶ್ರಮ ಪಡಬೇಕಾಗುತ್ತದೆ. ನನಗೆ ‘ಜಲವರ್ಣ’ ಹೆಚ್ಚು ಖುಷಿಕೊಟ್ಟ ಮಾಧ್ಯಮ. ಎಲ್ಲಕ್ಕಿಂತ ಇದು ಚೂರು ಸಂಯಮ, ಶ್ರದ್ಧೆಯನ್ನು ಬಯಸುವಂತದ್ದು ಕೂಡಾ. ಇದೇ ಕ್ಷೇತ್ರದಲ್ಲೇ ಮುಂದುವರಿಯುವ ಮೂಲಕ ಹೆಚ್ಚು ಪರಿಣಿತಿ ಪಡೆಯಬೇಕೆಂಬುವ ಹೆಬ್ಬಯಕೆ ನನ್ನದು. ಬದುಕಿನ ಎಲ್ಲ ಖರ್ಚು ವೆಚ್ಚಗಳಿಗೂ ಸದ್ಯ ಚಿತ್ರಕಲೆಯನ್ನೇ ನೆಚ್ಚಿಕೊಂಡಿದ್ದೇನೆ.

 ರಮೇಶ್ ಚಂಡೆಪ್ಪನವರ್, ಚಿತ್ರಕಲಾವಿದ

ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಕಲಾಕೃತಿ ಪ್ರದರ್ಶನ

2018ರಲ್ಲಿ ಉಕ್ರೇನ್ ದೇಶದಲ್ಲಿ ಎವಿಇಸಿ ಗ್ಯಾಲರಿಯಲ್ಲಿ ‘ಟಂ ಟಂ’ ಕಲಾಕೃತಿ ಪ್ರದರ್ಶನಕ್ಕೆ ಆಯ್ಕೆ ಮತ್ತು ಪ್ರದರ್ಶನ, 2019ರಲ್ಲಿ ಮ್ಯಾನ್ಮಾರ್ ದೇಶದಲ್ಲಿ ನಡೆದ ಜಲವರ್ಣ ಕೃತಿ ಪ್ರದರ್ಶನಕ್ಕೆ ಆಯ್ಕೆ ಮತ್ತು ಪ್ರದರ್ಶನ ಹಾಗೂ ಅಂತರ್‌ರಾಷ್ಟ್ರೀಯ ಭಾರತೀಯ ಮೊದಲ ಒಲಿಂಪಿ ಆರ್ಟ್ 2019ರಲ್ಲಿ ಕಲಾಕೃತಿ ಪ್ರದರ್ಶನಕ್ಕೆ ಆಯ್ಕೆಯಾಗಿದ್ದು, ಡಿಸೆಂಬರ್ 8ರಿಂದ 11ರ ವರೆಗೆ ಇಂದಿರಾಗಾಂಧಿ ನ್ಯಾಷನಲ್ ಸೆಂಟರ್ ಆಫ್ ಆರ್ಟ್ ಹೊಸದಿಲ್ಲಿಯಲ್ಲಿ ಕಲಾಕೃತಿಗಳ ಪ್ರದರ್ಶನ ನಡೆಯಲಿದೆ. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಇದು ಮೂರನೇ ಆಯ್ಕೆಯಾಗಿದ್ದು, ಉಕ್ರೇನ್ ಮತ್ತು ಭಾರತದಲ್ಲಿ ನಡೆಯುವ ಪ್ರದರ್ಶನದಲ್ಲಿ ‘ಕಂಬಳ’ ಶೀರ್ಷಿಕೆಯ ಜಲವರ್ಣದ ಕಲಾಕೃತಿ ಇರಲಿದೆ.

Writer - ಕಳಕೇಶ್ ಗೊರವರ, ರಾಜೂರ

contributor

Editor - ಕಳಕೇಶ್ ಗೊರವರ, ರಾಜೂರ

contributor

Similar News