ಕ್ರಿಯಾ ಯೋಜನೆಗಳ ಅನುಷ್ಠಾನಕ್ಕೆ ತಡೆ: ಮುಖ್ಯಮಂತ್ರಿ ಯಡಿಯೂರಪ್ಪ ಸಮರ್ಥನೆ

Update: 2019-08-04 13:20 GMT

ಬೆಂಗಳೂರು, ಆ.4: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರದ ಅವಧಿಯ ಕಾಮಗಾರಿಗಳ ಕ್ರಿಯಾ ಯೋಜನೆಗಳು ಹಾಗೂ ಬಿಬಿಎಂಪಿ ಬಜೆಟ್ ಅನುಷ್ಠಾನಕ್ಕೆ ಕಡಿವಾಣ ಹಾಕಿರುವ ಕ್ರಮವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮರ್ಥಿಸಿಕೊಂಡಿದ್ದಾರೆ.

ಶನಿವಾರ ಎಲ್ಲ ಬಗೆಯ ಟೆಂಡರ್‌ಗಳನ್ನು ರದ್ದುಗೊಳಿಸುವಂತೆ ಆದೇಶ ನೀಡಿದ್ದರು. ಪ್ರಸಕ್ತ ಸಾಲಿನ ಸುಮಾರು 11648 .90 ಕೋಟಿ ರೂ. ಮೊತ್ತದ ಬಿಬಿಎಂಪಿ ಬಜೆಟ್ ಹಾಗೂ ಸುಮಾರು 815 ಕೋಟಿ ರೂ. ಮೊತ್ತದ ಮುಖ್ಯಮಂತ್ರಿ ನವಬೆಂಗಳೂರು ಯೋಜನೆ ಅನುಷ್ಠಾನಕ್ಕೆ ಕಡಿವಾಣ ಹಾಕಿದ್ದು, ಸಂಪುಟದ ಅನುಮೋದನೆ ಇಲ್ಲದೇ ಬಜೆಟ್ ಅನುಮೋದನೆಗೆ ಹಿಂದಿನ ಸರಕಾರ ಆದೇಶ ಮಾಡಿರುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಯಡಿಯೂರಪ್ಪ ಆದೇಶದಲ್ಲಿ ಸ್ಪಷ್ಟಪಡಿಸಿದ್ದರು. ಇದೀಗ ಇದೇ ವಾದವನ್ನು ಅವರು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಿಲ್ಲಿಸಬೇಕು ಎಂಬ ಕಾರಣಕ್ಕಾಗಿ ಬಿಬಿಎಂಪಿ ಬಜೆಟ್ ಅನ್ನು ತಡೆ ಹಿಡಿದಿಲ್ಲ. ಕಾಮಗಾರಿಗಳಲ್ಲಿ ನಡೆಯುತ್ತಿರುವ ಲೂಟಿಯನ್ನು ನಿಲ್ಲಿಸಲು ಬಜೆಟ್ ಅನ್ನು ತಡೆ ಹಿಡಿದಿದ್ದೇನೆ ಎಂದು ತಿಳಿಸಿದ್ದಾರೆ.

ಪಾಲಿಕೆ ವ್ಯಾಪ್ತಿಯಲ್ಲಿ ಅನಗತ್ಯವಾಗಿ ಪುಟ್‌ಪಾತ್‌ಗಳನ್ನು ಕಿತ್ತಾಕಿ ರಿಪೇರಿ ಮಾಡುತ್ತಿದ್ದಾರೆ. ಕೋಟ್ಯಾಂತರ ರೂ.ಗಳ ಕಾಮಗಾರಿಯಲ್ಲಿ ಹಣವನ್ನು ಅನಗತ್ಯವಾಗಿ ಖರ್ಚು ಮಾಡುತ್ತಿದ್ದು, ಅದಕ್ಕೆ ಕಡಿವಾಣ ಹಾಕಲಾಗುವುದ ಎಂದು ಅವರು ಹೇಳಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಯುವ ಪ್ರತಿಯೊಂದು ಕಾಮಗಾರಿಯನ್ನು ಪರಿಶೀಲನೆ ನಡೆಸಿ ಅಂದಾಜು ವೆಚ್ಚ ಮಾಡಬೇಕು. ಅದರಂತೆ ಖರ್ಚು ಮಾಡಬೇಕು. ಅನಗತ್ಯವಾಗಿ ಹಣ ಲೂಟಿ ಮಾಡಲು ಕಾಮಗಾರಿ ನಡೆಸಬಾರದು ಎಂದು ಅವರು ಎಚ್ಚರಿಕೆ ನೀಡಿದರು. ಸಿಲಿಕಾನ್ ಸಿಟಿಯು ಸ್ವಚ್ಛಂದ ನಗರವಾಗಬೇಕು ಎಂಬುದು ನನ್ನ ಕನಸಾಗಿದೆ. ಹೀಗಾಗಿ, ನಗರದಾದ್ಯಂತ ಎಲ್ಲೆಲ್ಲಿ ಕಸ ಹರಡಿದೆಯೋ ಅದನ್ನು ಕೂಡಲೇ ತೆರವು ಮಾಡಬೇಕು ಎಂದು ಸೂಚಿಸಲಾಗಿದೆ. ನಾನು ದಿಲ್ಲಿಗೆ ಹೋಗುತ್ತಿದ್ದು, ಮೂರು ದಿನಗಳ ಬಳಿಕ ವಾಪಸ್ಸಾಗುತ್ತೇನೆ. ಆ ಸಮಯಕ್ಕೆ ಎಲ್ಲಿಯೂ ಕಸದ ಸಮಸ್ಯೆ ಕಾಣಿಸಿಕೊಳ್ಳಬಾರದು ಎಂದು ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News