ಹತ್ತು ದಿನಗಳಲ್ಲಿ ನಾನು ಮತ್ತೆ ಶಾಸಕ: ಅನರ್ಹ ಶಾಸಕ ಸೋಮಶೇಖರ್

Update: 2019-08-04 13:54 GMT

ಬೆಂಗಳೂರು, ಆ. 4: ಇನ್ನೂ ಹತ್ತು ದಿನಗಳಲ್ಲಿ ನನಗೆ ಮತ್ತೆ ಶಾಸಕ ಸ್ಥಾನ ಸಿಗುವ ವಿಶ್ವಾಸವಿದೆ. ಒಂದು ವೇಳೆ ಶಾಸಕ ಸ್ಥಾನ ಹೋದರೂ ಕ್ಷೇತ್ರದಲ್ಲಿ ಜನಪರ ಕೆಲಸ ಮಾಡುತ್ತೇನೆ ಎಂದು ಯಶವಂತಪುರ ಕ್ಷೇತ್ರದ ಅನರ್ಹ ಶಾಸಕ ಎಸ್.ಟಿ. ಸೋಮಶೇಖರ್ ಇಂದಿಲ್ಲಿ ತಿಳಿಸಿದ್ದಾರೆ.

ರವಿವಾರ ಯಶವಂತಪುರ ಕ್ಷೇತ್ರದ ಕೆಂಗೇರಿಯಲ್ಲಿ ಏರ್ಪಡಿಸಿದ್ದ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, ನಮಗೆ ಸ್ಪೀಕರ್ ಅವಕಾಶವನ್ನೆ ನೀಡಲಿಲ್ಲ. ನಾನೂ ಎಂದೂ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿಲ್ಲ. ಲೋಕಸಭೆ ಚುನಾವಣೆಯಲ್ಲಿ ಯಾರಿಗೂ ನೋವು ನೀಡುವ ಕೆಲಸ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.

ನನ್ನ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚು 1.16 ಲಕ್ಷ ಸದಸ್ಯತ್ವ ನೋಂದಣಿ ಮಾಡಿದ್ದು, ಪಕ್ಷಕ್ಕಾಗಿ ಶ್ರಮಿಸಿದ್ದೇನೆ. ಈವರೆಗೂ ನಾನು ಯಾರ ಮನೆಗೂ ಹೋಗಿ ಪಕ್ಷಕ್ಕೆ ಸೇರುವೆ ಎಂದು ಹೇಳಿಲ್ಲ. ಯಾವ ಪಕ್ಷದ ನಾಯಕರೂ ನನ್ನನ್ನು ಆಹ್ವಾನಿಸಿಲ್ಲ ಎಂದು ಅವರು ತಿಳಿಸಿದರು.

ಎಲ್ಲ ಶಾಸಕರು ಈ ಸರಕಾರ ಹೋಗಲಿ ಎಂದು ಬಯಸಿದರೆ ವಿನಃ ನಮ್ಮನ್ನು ಯಾರು ಮನವೊಲಿಸಲಿಲ್ಲ. ಆದರೆ, ಶಿವಕುಮಾರ್ ಮುಂಬೈಗೆ ಬಂದು ಮಳೆಯಲ್ಲಿ ನೆನೆದಿದ್ದು ಏನಾದರೂ ಪ್ರಯತ್ನ ಪಟ್ಟೆ ಎನ್ನುವುದಕ್ಕಷ್ಟೆ. ನಾವು ನಿಮ್ಮ ಮನೆಗೆ ಬಂದಾಗ ನಮ್ಮ ಸಮಸ್ಯೆ ಪರಿಹರಿಸಿದ್ದರೆ ಇವೆಲ್ಲ ಆಗುತ್ತಿರಲಿಲ್ಲ ಎಂದು ಹೇಳಿದರು.

ನಾನು ಯಾರ ಬಳಿಯೂ ಹಣ ಪಡೆದಿಲ್ಲ. ನಾನೇನಾದರೂ ದುಡ್ಡು ಪಡೆದಿದ್ದು ನಿಜ ಎಂದಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಈ ಸರಕಾರ ತೆಗೆಯಬೇಕೆಂದು ಹೇಳಿದವರು ರಮೇಶ್ ಕುಮಾರ್ ಅವರೇ. ಮುನಿಯಪ್ಪನವರನ್ನು ಸೋಲಿಸಲು ಕೋಲಾರದ 8 ಶಾಸಕರು ಸಭೆ ಮಾಡಿದರು ಎಂದು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News