ನಕಲಿ ಗುರುತಿನ ಚೀಟಿ ಪತ್ತೆ ವಿಚಾರ: ಮುನಿರತ್ನ ವಿರುದ್ಧ ಪ್ರಕರಣ ದಾಖಲಿಸದ ಪೊಲೀಸರ ವಿರುದ್ಧ ಕೋರ್ಟ್ ಕಿಡಿ

Update: 2019-08-04 14:50 GMT

ಬೆಂಗಳೂರು, ಆ.4: ಮತದಾರರ ನಕಲಿ ಗುರುತಿನ ಚೀಟಿ ಪತ್ತೆ ಸಂಬಂಧ ಅನರ್ಹಗೊಂಡಿರುವ ಶಾಸಕ ಮುನಿರತ್ನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳದ ಹಿನ್ನೆಲೆಯಲ್ಲಿ ಪೊಲೀಸರ ವಿರುದ್ಧ ಜನಪ್ರತಿನಿಧಿಗಳ ಕೋರ್ಟ್ ಕಿಡಿಕಾರಿದೆ. 

ಮುನಿರತ್ನ ವಿರುದ್ಧ ಎಫ್‌ಐಆರ್ ದಾಖಲಿಸಲು ಕೋರಿದ್ದ ಖಾಸಗಿ ದೂರಿನ ಪ್ರಕರಣವನ್ನು ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರಾಮಚಂದ್ರ ಡಿ. ಹುದ್ದಾರ ವಿಚಾರಣೆ ನಡೆಸಿದರು. ಪೊಲೀಸರೆಂದರೆ ಜನರ ರಕ್ಷಣೆಗಾಗಿ ಇರುವವರು ಎಂಬ ಮಾತಿದೆ. ಆದರೆ, ನೀವುಗಳು ಮುನಿರತ್ನ ಹಣ ನೀಡುತ್ತಾನೆ ಎಂಬ ಕಾರಣಕ್ಕಾಗಿ ಅವರ ವಿರುದ್ಧ ಇಲ್ಲಿಯವರೆಗೆ ಪ್ರಕರಣ ದಾಖಲಿಸಿಕೊಂಡಿಲ್ಲ. ಇದರ ಪರಿಣಾಮ ಮುಂದಿನ ವರ್ಷಗಳಲ್ಲಿ ನಿಮ್ಮ ಹೆಂಡತಿ, ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದು ಕೋರ್ಟ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿತು.

ಈಗಾಗಲೇ ಮುನಿರತ್ನ ವಿರುದ್ಧ ದೂರು ದಾಖಲಿಸಬೇಕಾಗಿತ್ತು. ಆದರೆ, ಇನ್ನೂ ದಾಖಲಿಸಿಲ್ಲ. ಹಾಗಾದರೆ ದೂರುದಾರರು ಏನು ಮಾಡಬೇಕು. ಈ ಪ್ರಕರಣದ ತನಿಖಾಧಿಕಾರಿಗಳ ಕಾರ್ಯ ವೈಖರಿ ಬಗ್ಗೆ ನಾನು ಸೂಕ್ತ ಆದೇಶ ಮಾಡುತ್ತೇನೆ. ಹೈಕೋರ್ಟ್‌ನಲ್ಲೇ ನಿಮ್ಮ ಹಣೆಬರಹ ತೀರ್ಮಾನವಾಗಲಿ ಎಂದು ವಿಚಾರಣೆ ಮುಂದೂಡಿದರು.

ಜಾಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2018ರ ವಿಧಾನಸಭಾ ಚುನಾವಣೆ ವೇಳೆ ನಕಲಿ ಗುರುತಿನ ಚೀಟಿ ಸಿಕ್ಕಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News