ವೀರಶೈವ ಲಿಂಗಾಯತ ಧರ್ಮದಲ್ಲಿ ವೈಜ್ಞಾನಿಕ ಆಚರಣೆಯಿದೆ: ಮಹಾಂತಲಿಂಗ ಶಿವಚಾರ್ಯ ಸ್ವಾಮೀಜಿ

Update: 2019-08-04 14:59 GMT

ಬೆಂಗಳೂರು, ಆ.4: ವೀರಶೈವ ಲಿಂಗಾಯತ ಧರ್ಮದಲ್ಲಿ ವೈಜ್ಞಾನಿಕ ಆಚರಣೆ ಯಿದೆ ಎಂದು ವಿಭೂತಿ ಮಠದ ಮಹಾಂತಲಿಂಗ ಶಿವಚಾರ್ಯ ಸ್ವಾಮೀಜಿ ಅಭಿಪ್ರಾ ಯಪಟ್ಟರು.

ರವಿವಾರ ವಿಜಯನಗರದ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಎಸೆಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಶೇ.95ಕ್ಕೂ ಹೆಚ್ಚು ಅಂಕ ಗಳಿಸಿದ್ದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದ ಅವರು, ಬಡವ, ಬಲ್ಲಿದ, ಜಾತಿ, ಮತ, ಬೇಧವೆನ್ನದೆ ಎಲ್ಲವನ್ನು ಒಪ್ಪಿಕೊಂಡಿರುವ ನಮ್ಮ ಸಮಾಜ ಈ ದೇಶಕ್ಕೆ ಒಳ್ಳೆಯ ಕೊಡುಗೆ ನೀಡಿದೆ ಎಂದು ಹೇಳಿದರು.

ಪೋಷಕರು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ಧಾರ್ಮಿಕ ಸಂಸ್ಕಾರ, ಸಂಸ್ಕೃತಿ ಕಲಿಸುವುದು ಅತ್ಯವಶ್ಯಕ. ಇದರಿಂದ ಧರ್ಮ ಉಳಿಯಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡುತ್ತ ನಮ್ಮ ಧರ್ಮ, ಸಂಸ್ಕೃತಿ ಮರೆಯುತ್ತಿರುವುದು ವಿಷಾದನೀಯ. ನಾವು ಧರ್ಮವನ್ನು ರಕ್ಷಿಸಿದರೆ, ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂಬ ಹಿರಿಯ ನಾಣ್ಣುಡಿ ಸವರ್ಣೀಯವಾದುದು ಎಂದು ಹೇಳಿದರು.

ಮಕ್ಕಳು ಎಷ್ಟು ಅಂಕಗಳಿಸಿದ್ದಾರೆ ಎಂಬುದು ಮುಖ್ಯವಲ್ಲ. ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದು ಬಹಳ ಮುಖ್ಯ. ಜೀವನದಲ್ಲಿ ಬರುವ ಎಲ್ಲಾ ಸಮಸ್ಯೆಗಳನ್ನು ಆತ್ಮವಿಶ್ವಾಸದಿಂದ ಎದುರಿಸುವ ಶಕ್ತಿಯನ್ನು ರೂಢಿಸಿಕೊಳ್ಳಿ. ಇದರಿಂದ ಜೀವನದಲ್ಲಿ ಸಾಧನೆ ಮಾಡಲು ಸಹಕಾರಿಯಾಗಲಿದೆ. ಅಲ್ಲದೆ, ವಿದ್ಯಾರ್ಥಿಗಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆ ಅನಾವರಣಗೊಳ್ಳಲು ಸೂಕ್ತ ವೇದಿಕೆ ರೂಪಿಸುವುದು ಅವಶ್ಯಕ ಎಂದು ಹೇಳಿದರು.

ಸಕಲ ಜೀವರಾಶಿಗಳಿಗೆ ಲೇಸು ಬಯಸುವಂತಹ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ಜೀವನದಲ್ಲಿ ಯಶಸ್ಸು ಕಾಣುವುದರ ಜೊತೆಗೆ ಬಸವಾದಿ ಚರಣಗಳ ವಚನಗಳನ್ನು ಅಧ್ಯಯನ ಮಾಡಿ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಸಮಾರಂಭದಲ್ಲಿ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಂ.ತಿಪ್ಪಣ್ಣ, ವೀರಶೈವ ವಿದ್ಯಾಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಪರಮಶಿವಯ್ಯ, ಅಖಿಲ ಭಾರತ ವೀರಶೈವ ಮಹಾಸಭಾ ನಗರ ಜಿಲ್ಲಾ ಘಟಕದ ಅಧ್ಯಕ್ಷ ಗುರುಸ್ವಾಮಿ, ನಟರಾಜ್ ಸಾಗರನಹಳ್ಳಿ ಹಾಗೂ ಜಯಲಿಂಗಪ್ಪ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News