ಕಾಂಗ್ರೆಸ್ ಕಡೆ ತಿರುಗಿಯೂ ನೋಡಲ್ಲ: ಅನರ್ಹ ಶಾಸಕ ಬಿ.ಸಿ.ಪಾಟೀಲ್

Update: 2019-08-04 15:07 GMT

ಬೆಂಗಳೂರು, ಆ.4: ಕಾಂಗ್ರೆಸ್ ಬಿಟ್ಟು ಹೊರಬಂದಿದ್ದೇನೆ. ಮುಂದೆ ಆ ಪಕ್ಷದ ಕಡೆ ತಿರುಗಿಯೂ ನೋಡುವುದಿಲ್ಲ ಎಂದು ಅನರ್ಹ ಶಾಸಕ ಬಿ.ಸಿ.ಪಾಟೀಲ್ ವಾಗ್ದಾಳಿ ನಡೆಸಿದರು.

ರವಿವಾರ ನಗರದ ಡಾಲರ್ಸ್‌ ಕಾಲೋನಿಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಧವಳಗಿರಿ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಕ್ಷೇತ್ರದ ಜನರ ಆಶೋತ್ತರಗಳಿಗೆ ಸ್ಪಂದಿಸಬೇಕೆಂಬ ನಿಟ್ಟಿನಲ್ಲಿ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿ ಹೊರಬಂದಿದ್ದೇವೆ. ಅಲ್ಲದೆ, ಕಳೆದ 40 ವರ್ಷದಿಂದ ಕಾಂಗ್ರೆಸ್ ಗೆಲುವು ಕಾಣದ ಕ್ಷೇತ್ರದಿಂದ ನಾನು ಗೆದ್ದು ಬಂದಿದ್ದೇನೆ. ಚುನಾವಣೆ ಹೇಗೆ ನಡೆಯುತ್ತದೆ ಎನ್ನುವುದು ನಮಗೂ ಗೊತ್ತಿದೆ. ಹಾಗಾಗಿ, ಮತ್ತೆ ಕಾಂಗ್ರೆಸ್ ಕಡೆ ಹೋಗುವ ಮಾತಿಲ್ಲ ಎಂದರು.

ಶೀಘ್ರದಲ್ಲಿಯೇ ಕ್ಷೇತ್ರಕ್ಕೆ ಭೇಟಿ ನೀಡಲಿದ್ದು, ಜನರ ಅಭಿಪ್ರಾಯದಂತೆ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ. ಮುಂದಿನ ದಿನಗಳಲ್ಲಿ ನಾವೇನು ಎಂಬುವುದನ್ನು ಜನತೆ ತೀರ್ಮಾನ ಮಾಡುತ್ತಾರೆ. ಮತ್ತೆ ವಿಧಾನಸಭೆಗೆ ಜನತೆ ಕಳುಹಿಸುತ್ತಾರೆ ಎನ್ನುವ ವಿಶ್ವಾಸವೂ ನನಗೆ ಇದೆ ಎಂದು ನುಡಿದರು.

ಶಾಸಕ ಸ್ಥಾನದ ಅನರ್ಹತೆ ವಿಚಾರವಾಗಿ ವಕೀಲರ ಬಳಿ ಚರ್ಚಿಸಿದ್ದು, ಕಾನೂನಿನ ಮೇಲೆ ನಂಬಿಕೆ ಇದೆ ಎಂದ ಅವರು, ಶಾಸಕ ಸ್ಥಾನದ ಅನರ್ಹತೆ ವಿಚಾರದಲ್ಲಿ ಮಾಜಿ ಸಭಾಧ್ಯಕ್ಷ ರಮೇಶ್ ಕುಮಾರ್ ಅವರು ತೆಗೆದುಕೊಂಡ ನಿರ್ಧಾರ ಸರಿಯಿಲ್ಲ. ಅವರು ಕಾನೂನು ಗಾಳಿಗೆ ತೂರಿ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದಾರೆಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News