ವಿಶೇಷಚೇತನರ ಅಭಿವೃದ್ಧಿಗೆ ಪ್ರತ್ಯೇಕ ವಿವಿ ಅಗತ್ಯವಿದೆ: ಸುರಿಂದರ್ ಸಿಂಗ್ ಒಬೆರಾಯ್

Update: 2019-08-04 15:17 GMT

ಬೆಂಗಳೂರು, ಆ.4: ವಿಶೇಷಚೇತನರ ಅಭಿವೃದ್ಧಿಗಾಗಿ ಪ್ರತ್ಯೇಕ ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡಬೇಕಾದ ಅಗತ್ಯವಿದೆ ಎಂದು ಎಂದು ಅಂತರ್‌ರಾಷ್ಟ್ರೀಯ ರೆಡ್‌ಕ್ರಾಸ್ ಸಮಿತಿಯ (ಐಸಿಆರ್‌ಸಿ) ರಾಜಕೀಯ ಮತ್ತು ಸಂವಹನ ಸಲಹೆಗಾರ ಸುರಿಂದರ್ ಸಿಂಗ್ ಒಬೆರಾಯ್ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ನಗರದ ನಿಮ್ಹಾನ್ಸ್ ಕನ್ವೆಷನ್ ಸೆಂಟರ್‌ನಲ್ಲಿ ಮೊಬಿಲಿಟಿ ಇಂಡಿಯಾ ಸಂಘಟನೆ ವತಿಯಿಂದ ಆಯೋಜಿಸಿದ್ದ ವಿಶೇಷಚೇತನರಿಗೆ ತಂತ್ರಜ್ಞಾನ ಆಧಾರಿತ ಕೌಶಲ ಕಲಿಕೆ, ಪರಿಕರಗಳನ್ನು ಹೊಂದಿಸುವ ನಿಟ್ಟಿನಲ್ಲಿ ‘2030ಕ್ಕೆ ಅಸಿಸ್ಟೀವ್ ಟೆಕ್ನಾಲಜಿ ಫಾರ್ ಹಾಲ್’ ಎಂಬ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಅಧಿಕವಾಗುತ್ತಿರುವ ವಿಶೇಷಚೇತನರ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಪ್ರತ್ಯೇಕ ವಿಶ್ವವಿದ್ಯಾಲಯ ಇರಬೇಕು. ಅದರ ಮೂಲಕ ಹೆಚ್ಚಿನ ಜನರಿಗೆ ಉತ್ತಮ ಶಿಕ್ಷಣ ಸಿಗುವಂತಾಗಬೇಕು. ಅದರ ಜತೆಗೆ, ಸ್ವಾವಲಂಭಿ ಜೀವನ ನಡೆಸಲು ಅಗತ್ಯವಾದ ಕೌಶಲ್ಯಯುತವಾದ ಶಿಕ್ಷಣ ನೀಡಬೇಕು. ಆ ಮೂಲಕ ವಿಶೇಷಚೇತರು ಸಮಾಜದ ಮುಖ್ಯ ವಾಹಿನಿಯಲ್ಲಿ ಎಲ್ಲರಂತೆ ಬದುಕಲು ಅವಕಾಶ ನೀಡಬೇಕು ಎಂದು ಹೇಳಿದರು.

ಎಲ್ಲ ವಿಶ್ವವಿದ್ಯಾಲಯಗಳು, ಸರಕಾರಗಳು ಹಾಗೂ ಸಂಘ-ಸಂಸ್ಥೆಗಳ ನೆರವಿನೊಂದಿಗೆ ವಿಶೇಷಚೇತನರನ್ನು ಸ್ವಾವಲಂಬಿಗಳನ್ನಾಗಿ ಮಾಡಲು, ಅವರಿಗಾಗಿಯೇ ವಿಶೇಷ ಕೋರ್ಸ್ ಪ್ರಾರಂಭಿಸಿ ಉದ್ಯೋಗಾವಕಾಶ ಸೃಷ್ಟಿಸಬೇಕು’ ಎಂದು ಸಲಹೆ ನೀಡಿದರು.

ಶಾಸಕಿ ಸೌಮ್ಯರೆಡ್ಡಿ ಮಾತನಾಡಿ, ಮೊಬಿಲಿಟಿ ಇಂಡಿಯಾದ ಸೇವೆ ಶ್ಲಾಘನೀಯ. ಸಂಸ್ಥೆಯು ವಿಶೇಷಚೇತನರನ್ನು ಮುಖ್ಯವಾನಿಗೆ ತರುವಲ್ಲಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿಯೊಬ್ಬರು ಇಂತಹ ಕಾರ್ಯಕ್ರಮಗಳಿಗೆ ಭಾಗವಹಿಸುವ ಮೂಲಕ ಅವರಿಗೆ ಬೆಂಬಲ ನೀಡುವುದು ನಮ್ಮ ಕರ್ತವ್ಯವಾಗಿದೆ ಎಂದರು.

ಮೊಬಿಲಿಟಿ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕಿ ಅಲ್ಬಿನಾ ಶಂಕರ್ ಮಾತನಾಡಿ, ವಿಶೇಷಚೇತನರಿಗೆ ಸರಕಾರದ ಯೋಜನೆ ಮತ್ತು ಸೌಲಭ್ಯವನ್ನು ಸಮರ್ಪಕವಾಗಿ ತಲುಪಿಸಲು ಮೊಬಿಲಿಟಿ ಇಂಡಿಯಾ ಸಂಸ್ಥೆ ಕೆಲಸ ಮಾಡುತ್ತಿದೆ. ಇದು ರಾಜ್ಯದ ವಿವಿದ ಕಡೆಗಳಲ್ಲಿಯೂ ಶ್ರಮಿಸುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸುವ ಗುರಿಯನ್ನಿಟ್ಟುಕೊಳ್ಳಲಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News