ನನ್ನ ಅಂಕಣ ಬರಹಗಳೇ ನನ್ನ ಮಹಾಕಾವ್ಯ: ಬರಗೂರು ರಾಮಚಂದ್ರಪ್ಪ

Update: 2019-08-04 18:03 GMT

ಬೆಂಗಳೂರು, ಆ.4: ಮಹತ್ತರವಾದದ್ದನ್ನು ಏನಾದರು ಬರೆಯಿರಿ ಎಂದು ನನ್ನೊಂದಿಗೆ ಹಲವು ಮಂದಿ ಕೇಳುತ್ತಿರುತ್ತಾರೆ. ಅಂತವರಿಗೆ ನನ್ನ ಅಂಕಣ ಬರಹಗಳೆ ನನ್ನ ಮಹಾಕಾವ್ಯವೆಂದು ಉತ್ತರಿಸುತ್ತೇನೆಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ತಿಳಿಸಿದರು.

ರವಿವಾರ ಅಂಕಿತ ಪುಸ್ತಕ ಹಾಗೂ ಕನ್ನಡ ಜನಶಕ್ತಿ ಕೇಂದ್ರ ನಗರದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಆಯೋಜಿಸಿದ್ದ ಅವರದೇ ‘ಕರುಳು ಕಟ್ಟಿದ ಬರ’ ಕೃತಿಯ ಬಿಡುಗಡೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನನ್ನ ಬರಹಗಳು ಜನರಿಗೆ ಹೆಚ್ಚು ತಲುಪಬೇಕೆಂದು ಬರೆಯುತ್ತೇನೆಯೆ ಹೊರತು ಆತ್ಮತೃಪ್ತಿಗಾಗಿ ಅಲ್ಲ. ಜನತೆ ನನ್ನ ಬರಹದ ವಸ್ತು ವಿಷಯಗಳು ಕುರಿತು ಚರ್ಚೆ ಹಾಗೂ ಸಂವಾದ ನಡೆಸಬೇಕೆಂದು ಬಯಸುತ್ತೇನೆ. ಹೀಗಾಗಿ ಅಂಕಬರಹಗಳಿಗೆ ಹೆಚ್ಚಿನ ಆದ್ಯತೆ ಕೊಡುತ್ತೇನೆಂದು ಅವರು ಹೇಳಿದರು.

ಲೇಖಕನಿಗೆ ಆತಃಕರಣ ಇರಬೇಕು. ಅಂತಹ ಮನಃಸ್ಥಿತಿ ಇದ್ದಾಗ ಮಾತ್ರ ಪ್ರಜಾಸತಾತ್ಮಕವಾಗಿ ಚಿಂತಿಸಲು ಸಾಧ್ಯ. ನಾನು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕನಾಗಿದ್ದಾಗ ವಿದ್ಯಾರ್ಥಿಗಳಿಗೆ ಕಲಿಸುತ್ತಲೆ, ಅವರಿಂದ ಸಾಕಷ್ಟು ಕಲಿತ್ತಿದ್ದೇನೆಂದು ಅವರು ಸ್ಮರಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕನಾಗಿದ್ದ ಆರಂಭದ ವರ್ಷಗಳಲ್ಲಿ ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡುವುದಕ್ಕೂ ಅವಕಾಶ ಇರಲಿಲ್ಲ. ಆದರೆ, ನಂತರ ದಿನಗಳಲ್ಲಿ ಸಹದ್ಯೋಗಿ ಪ್ರಾಧ್ಯಾಪಕರಿಂದ, ವಿದ್ಯಾರ್ಥಿ ಸ್ನೇಹಿತರಿಂದ ಸಾಕಷ್ಟು ಕಲಿತಿದ್ದೇನೆ. ನನಗೆ ನೋವು-ನಲಿವುಗಳನ್ನು ಎರಡನ್ನು ನೀಡಿದೆ ಎಂದು ಅವರು ಬರಗೂರು ರಾಮಚಂದ್ರಪ್ಪ ಅಭಿಪ್ರಾಯಿಸಿದರು.

ಸುಪ್ರೀಂ ಕೋರ್ಟ್‌ನ ವಿಶ್ರಾಂತ ನ್ಯಾ.ಗೋಪಾಲಗೌಡ ಮಾತನಾಡಿ, ನಾಡಿನ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅಂಕಣ ಬರಹಗಳು ಸಮಾಜ ಬದಲಾವಣೆಯಲ್ಲಿ ಮಹತ್ವದ ಪಾತ್ರ ವಹಿಸಲಿವೆ ಎಂಬುದರಲ್ಲಿ ಯಾವುದೆ ಅನುಮಾನವಿಲ್ಲ. ಅದರಲ್ಲೂ ರಾಜಕೀಯ ದೃಷ್ಟಿಕೋನವನ್ನು ಚರ್ಚೆ ಹಾಗೂ ಸಂವಾದಕ್ಕೆ ಈಡುಮಾಡುವಲ್ಲಿ ಯಶಸ್ವಿಯಾಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ, ಹಿರಿಯ ವಿಮರ್ಶಕ ಎಸ್.ಆರ್.ವಿಜಯಶಂಕರ, ಅಂಕಿತ ಪುಸ್ತಕದ ಪ್ರಕಾಶಕ ಪ್ರಕಾಶ್ ಕಂಬತ್ತಳ್ಳಿ, ಕನ್ನಡ ಜನಶಕ್ತಿ ಕೇಂದ್ರದ ಸಿ.ಕೆ.ರಾಮೇಗೌಡ ಮತ್ತಿತರರಿದ್ದರು.

ಕಮ್ಯೂನಿಷ್ಟ್ ಸಿದ್ಧಾಂತ ಸೇರಿದಂತೆ ಎಲ್ಲ ಜನಪರ ಸಿದ್ದಾಂತವಾದಿಗಳು ತಾವೇ ಶ್ರೇಷ್ಟರೆಂದು ಭಾವಿಸದೆ ಪರಸ್ಪರ ಮುಖಾಮುಖಿ ಚರ್ಚೆ, ಸಂವಾದಕ್ಕೆ ಮುಕ್ತವಾಗಬೇಕು. ಇಲ್ಲದೆ ಹೋದರೆ, ಜನಪರ ಚಳವಳಿಗೂ ಮನುವಾದಿ ಸಿದ್ಧಾಂತಕ್ಕೂ ವ್ಯಾತ್ಯಾಸ ಇರುವುದಿಲ್ಲ

-ಬರಗೂರು ರಾಮಚಂದ್ರಪ್ಪ, ಹಿರಿಯ ಸಾಹಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News