ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೆ ವಿಧಿ ಎಂದರೇನು?: ಇಲ್ಲಿದೆ ಮಾಹಿತಿ

Update: 2019-08-05 07:07 GMT

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೆ ವಿಧಿಯನ್ನು ರದ್ದುಗೊಳಿಸಲಾಗಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಇಂದು ರಾಜ್ಯಸಭೆಯಲ್ಲಿ ಘೋಷಿಸಿದ್ದಾರೆ.

ತನ್ನ ಖಾಯಂ ನಿವಾಸಿಗಳು ಹಾಗೂ ಅವರ ಹಕ್ಕುಗಳನ್ನು ನಿರ್ಧರಿಸುವ ಅಧಿಕಾರವನ್ನು ಜಮ್ಮು ಕಾಶ್ಮೀರದ ವಿಧಾನಸಭೆಗೆ ಸಂವಿಧಾನದ 35ಎ ವಿಧಿ ನೀಡಿದರೆ, 370ನೇ ವಿಧಿ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ಒದಗಿಸುತ್ತದೆ.

35ಎ ವಿಧಿಯನ್ನು ಜಮ್ಮು ಕಾಶ್ಮೀರದ ಹಿಂದಿನ ಆಡಳಿತಗಾರ ಹರಿ ಸಿಂಗ್ ಅವರು ಮಂಡಿಸಿದ್ದರು. ಈ ಶಾಸನ ಹೊರಗಿನವರು ರಾಜ್ಯದಲ್ಲಿ ಆಸ್ತಿಯನ್ನು  ಹೊಂದುವುದು ಹಾಗೂ ಸರಕಾರಿ ಉದ್ಯೋಗಗಳನ್ನು ಪಡೆಯುವುದನ್ನು ತಡೆಯುತ್ತದೆ. ಸಂವಿಧಾನ, ಧ್ವಜ ಹಾಗೂ ರಾಷ್ಟ್ರೀಯ ಭದ್ರತೆ ಹೊರತುಪಡಿಸಿ ರಾಜ್ಯಕ್ಕೆ ಇತರ ವಿಚಾರಗಳಲ್ಲಿ ತನ್ನದೇ ಕಾನೂನುಗಳನ್ನು  ನಿರ್ವಹಿಸುವ ಅಧಿಕಾರನವ್ನು ನೀಡುವ ಸಂವಿಧಾನದ 370ನೇ ವಿಧಿಯ ಭಾಗ ಇದಾಗಿದೆ.

ರಾಜ್ಯದಲ್ಲಿ ದೀರ್ಘ ಕಾಲದಿಂದ ವಾಸಿಸುವ ನಿವಾಸಿಗಳಿಗೆ ಪ್ರಮಾಣಪತ್ರ ನೀಡುವ ಅದಿಕಾರವನ್ನೂ 35ಎ ವಿಧಿ ರಾಜ್ಯ ಸರಕಾರಕ್ಕೆ ನೀಡುತ್ತದೆ. ಜಮ್ಮು ಕಾಶ್ಮೀರದಲ್ಲಿ 1954ರಲ್ಲಿದ್ದವರು ಹಾಗೂ ಅಲ್ಲಿ ಕನಿಷ್ಠ 10 ವರ್ಷಗಳಿಂದ ವಾಸವಾಗಿದ್ದವರು ಖಾಯಂ ನಿವಾಸಿಗಳಾಗಲು ಅರ್ಹತೆ ಹೊಂದುತ್ತಾರೆ. ಆದರೆ  ವಿ ದಿ ಸಿಟಿಝನ್ಸ್ ಎಂಬ ಎನ್‍ಜಿಒ ಸುಪ್ರೀಂ ಕೋರ್ಟಿನಲ್ಲಿ ಈ 35ಎ ವಿಧಿಯನ್ನು ಪ್ರಶ್ನಿಸಿತ್ತಲ್ಲದೆ ವಿಧಿ 368 ಅನ್ವಯ  ತಿದ್ದುಪಡಿ ಮೂಲಕ ಅದನ್ನು ಸಂವಿಧಾನಕ್ಕೆ ಸೇರ್ಪಡಿಸಲಾಗಿಲ್ಲ ಎಂದು   ವಾದಿಸಿತ್ತು.

ಅಂದಿನ ಪ್ರಧಾನಿ ಜವಾರಲಾಲ್ ನೆಹರೂ ನೇತೃತ್ವದ ಸಚಿವ ಸಂಪುಟದ ಸಲಹೆಯಂತೆ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರ ಆದೇಶದನ್ವಯ 1954ರಲ್ಲಿ ವಿಧಿ 35ಎ ಅನ್ನು ಸಂವಿಧಾನದಲ್ಲಿ  ಸೇರಿಸಲಾಗಿತ್ತು.

35ಎ ವಿಧಿ ರದ್ದುಗೊಳಿಸಿದ್ದೇ ಆದಲ್ಲಿ ಅದು ರಾಜ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಜತೆಗೆ ಪ್ರತ್ಯೇಕತಾವಾದಿಗಳಿಗೆ ಭಾರತದ ವಿರುದ್ಧ  ಅಲ್ಲಿನ ಜನರನ್ನು ಎತ್ತಿ ಕಟ್ಟಲು ಆಸ್ಪದ ನೀಡಿದಂತಾಗುವುದು ಎಂದು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನದ ಬೆಂಬಲಿಗರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News