ಕಲರ್ಸ್ ಕನ್ನಡ : ಆ. 10ರಂದು 'ಸೀರಿಯಸ್ ಕಾಮಿಡಿ ಶೋ' ಆರಂಭ
ಬೆಂಗಳೂರು: ವಾರಾಂತ್ಯದಲ್ಲಿ ನಿಮ್ಮನ್ನು ನಕ್ಕು ನಗಿಸಿ ರಿಲಾಕ್ಸ್ ಮಾಡಲೆಂದು ಕಲರ್ಸ್ ಕನ್ನಡದಲ್ಲಿ "ಕಾಮಿಡಿ ಕಂಪನಿ" ಎಂಬ ಹೊಸ ಶೋ ಆರಂಭವಾಗುತ್ತಿದೆ. ಆ. 10ರಿಂದ ಶನಿವಾರ ಮತ್ತು ರವಿವಾರ ರಾತ್ರಿ 9.30ಕ್ಕೆ ಪ್ರಸಾರ ಆಗಲಿರುವ ಕಾಮಿಡಿ ಕಂಪನಿಯ ನಿರೂಪಕ ಅಕುಲ್ ಬಾಲಾಜಿ. "ನಾವು ಸೀರಿಯಸ್ ಕಾಮಿಡಿ ಮಾಡುತ್ತೇವೆ" ಎಂಬುದೇ ಈ ಶೋನ ಧ್ಯೇಯವಾಕ್ಯವಾಗಿದೆ.
ಸೀರಿಯಸ್ ಕಾಮಿಡಿ ಅಂದರೇನು ? ಅದನ್ನು ಮಾಡುವುದು ಹೇಗೆ ಎಂಬುದೇ ಈ ಕಾರ್ಯಕ್ರಮದ ವಿಶೇಷ. ಇಲ್ಲಿ ಸ್ಕಿಟ್‍ಗಳು ಮಾತ್ರವಲ್ಲದೆ ಸ್ಟಾಂಡಪ್ ಕಾಮಿಡಿ, ಮಿಮಿಕ್ರಿ ಮುಂತಾದ ಕಾಮಿಡಿಯ ವಿವಿಧ ರೂಪಗಳು ಕಾಣಸಿಗುತ್ತವೆ. ಕಾರ್ಯಕ್ರಮದ ಸೀರಿಯಸ್‍ನೆಸ್ ಕಾಪಾಡಲೆಂದೇ ಬಿಗ್‍ಬಾಸ್ ಖ್ಯಾತಿಯ ನಿವೇದಿತಾ ಗೌಡ ಅಲ್ಲಿರುತ್ತಾರೆ. ಕುಟುಂಬವೆಲ್ಲ ಜೊತೆಯಾಗಿ ನೋಡುವ ಕಾಮಿಡಿ ಶೋ ಇದಾಗುವ ಹಾಗೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಅವರಿಗೆ ನೀಡಲಾಗಿದೆ.
ಇನ್ನು ಇಲ್ಲಿನ ನಗುಮುಖಗಳಾಗಿ ಸೂಪರ್ ಸ್ಟಾರ್ ಜೆಕೆ ಹಾಗೂ ನಿಂತ್ರೆ ಕುಂತ್ರೆ ಗೊಳ್ಳೆಂದು ನಗುವ ಸುಂದರಿ ಕೃಷಿ ತಾಪಂಡ ಇರುತ್ತಾರೆ. ಅಕುಲ್, ಜೆಕೆ, ಕೃಷಿ ಮತ್ತು ನಿವೇದಿತಾ ಒಟ್ಟಾಗಿ ಇದ್ದ ಮೇಲೆ ಅಲ್ಲಿ ನಗುವಿಗೆ ಬರ ಬರಬಹುದೇ?
ಇಷ್ಟೆಲ್ಲ ಅಂಶಗಳ ಜೊತೆಗೆ ಮೂವತ್ತೈದು ಹೊಸ ಪ್ರತಿಭೆಗಳನ್ನು ಜನರಿಗೆ ಈ ಕಾರ್ಯಕ್ರಮದ ಮೂಲಕ ಪರಿಚಯಿಸಲಾಗುವುದು. "ಕುಟುಂಬವೆಲ್ಲ ಕುಳಿತು ನೋಡುವಂಥ ಕಾಮಿಡಿ ಶೋ ಮಾಡಲು ಬಹಳ ಪ್ರಯತ್ನ ಪಟ್ಟಿದ್ದೇವೆ. ಶುದ್ಧ ತಿಳಿಹಾಸ್ಯದ ಮೂಲಕ ವೀಕ್ಷಕರನ್ನು ರಂಜಿಸುವುದು ಇದರ ಉದ್ದೇಶ. ವಾರಾಂತ್ಯದಲ್ಲಿ ಜನರು ತುಂಬಾ ರಿಲಾಕ್ಸ್ ಆಗಿರುವಂತೆ ಮಾಡಲಿದೆ ಕಾಮಿಡಿ ಕಂಪನಿ," ಎನ್ನುತ್ತಾರೆ ವಯಾಕಾಂ 18ನ ಕನ್ನಡ ಕ್ಲಸ್ಟರ್ ಬ್ಯುಸಿನೆಸ್ ಹೆಡ್ ಪರಮೇಶ್ವರ ಗುಂಡ್ಕಲ್.