ಈ ಹಣ್ಣುಗಳ ಸಿಪ್ಪೆಗಳಲ್ಲಿವೆ ಹಲವು ಆರೋಗ್ಯಲಾಭಗಳು

Update: 2019-08-06 15:36 GMT

ಹಣ್ಣುಗಳು ಮತ್ತು ತರಕಾರಿಗಳು ಒಳ್ಳೆಯದು ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಇವುಗಳ ಸಿಪ್ಪೆಗಳೂ ಆರೋಗ್ಯಲಾಭಗಳನ್ನು ನೀಡುತ್ತವೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ. ಕೆಲವು ಹಣ್ಣುಗಳು ಮತ್ತು ತರಕಾರಿಗಳ ಸಿಪ್ಪೆಗಳು ಹಲವಾರು ಬಗೆಯಲ್ಲಿ ನಮ್ಮ ಆರೋಗ್ಯಕ್ಕೆ ರಕ್ಷಣೆಯನ್ನು ನೀಡುತ್ತವೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ನಾವು ಸಾಮಾನ್ಯವಾಗಿ ಹಣ್ಣುಗಳನ್ನು ತಿಂದ ಬಳಿಕ ಸಿಪ್ಪೆಯನ್ನು ಎಸೆದುಬಿಡುತ್ತೇವೆ,ಆದರೆ ಅವು ಹಣ್ಣುಗಳಷ್ಟೇ ಅಥವಾ ಅದಕ್ಕೂ ಹೆಚ್ಚಿನ ಆರೋಗ್ಯಲಾಭಗಳನ್ನು ಹೊಂದಿವೆ. ಆರೋಗ್ಯಕ್ಕೆ ಅತ್ಯುತ್ತಮವಾಗಿರುವ ಕೆಲವು ಹಣ್ಣುಗಳು ಮತ್ತು ತರಕಾರಿಗಳ ಸಿಪ್ಪೆಗಳ ಕುರಿತು ಮಾಹಿತಿಗಳಿಲ್ಲಿವೆ.

► ಕಿತ್ತಳೆ ಹಣ್ಣಿನ ಸಿಪ್ಪೆ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ

ಕಿತ್ತಳೆ ಹಣ್ಣಿನ ಸಿಪ್ಪೆಯ ಹುಡಿಯನ್ನು ಚರ್ಮದ ಸಮಸ್ಯೆಗಳ ನಿವಾರಣೆಗಾಗಿ ಮನೆಮದ್ದುಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ,ಆದರೆ ಅದು ಕೊಲೆಸ್ಟ್ರಾಲ್ ಸಮಸ್ಯೆಯಿರುವವರಿಗೂ ಒಳ್ಳೆಯದು ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಕಿತ್ತಳೆ ಸಿಪ್ಪೆಯಲ್ಲಿರುವ ಫ್ಲಾವನಾಯ್ಡ್ ಗಳು ಶರೀರದಲ್ಲಿ ಕೆಟ್ಟ ಕೊಲೆಸ್ಟ್ರಾಲ್ (ಎಲ್‌ಡಿಎಲ್)ನ ಮಟ್ಟವನ್ನು ಪರಿಣಾಮಕಾರಿಯಾಗಿ ತಗ್ಗಿಸುತ್ತವೆ.

ವಿಧಾನ: ಕಿತ್ತಳೆ ಹಣ್ಣಿನ ಸಿಪ್ಪೆಗಳ ಸೂಪ್ ಅಥವಾ ರಸವನ್ನು ಸೇವಿಸಬಹುದು ಅಥವಾ ಅಡುಗೆಯ ವೇಳೆ ಅವುಗಳನ್ನು ತರಕಾರಿಗಳೊಂದಿಗೆ ಸೇರಿಸಬಹುದು.

► ಬಾಳೆಹಣ್ಣಿನ ಸಿಪ್ಪೆ ಖಿನ್ನತೆಯ ವಿರುದ್ಧ ಹೋರಾಡುತ್ತದೆ

ಬಾಳೆಹಣ್ಣಿನ ಸಿಪ್ಪೆಯು ಖಿನ್ನತೆಯ ಸ್ಥಿತಿಯನ್ನು ಸಮರ್ಥವಾಗಿ ತಡೆಯುತ್ತದೆ ಎಂದರೆ ನಿಮಗೆ ಅಚ್ಚರಿಯಾಗಬಹುದು. ಈ ಸಿಪ್ಪೆಯಲ್ಲಿರುವ ಸೆರೊಟೋನಿನ್ ಖುಷಿಯ ಹಾರ್ಮೋನ್ ಆಗಿದ್ದು,ಒತ್ತಡವನ್ನು ತಗ್ಗಿಸಿ ನಮ್ಮ ಮನಸ್ಸನ್ನು ಮುದಗೊಳಿಸುತ್ತದೆ. ಮಾನಸಿಕ ಒತ್ತಡ ದಿಢೀರ್‌ನೆ ಹೆಚ್ಚಿದಾಗ ನಮ್ಮ ಮಿದುಳು ಸೆರೊಟೋನಿನ್ ಅನ್ನು ಉತ್ಪಾದಿಸುತ್ತದೆ ಮತ್ತು ಇದು ನಮ್ಮ ಮನಸ್ಸಿಗೆ ಚೇತರಿಕೆಯನ್ನು ನೀಡುತ್ತದೆ ಮತ್ತು ಹಗುರವಾಗಿಸುತ್ತದೆ. ಅಲ್ಲದೆ ಬಾಳೆಹಣ್ಣಿನ ಸಿಪ್ಪೆಯು ಲುಟಿನ್ ಉತ್ಕರ್ಷಣ ನಿರೋಧಕವನ್ನೂ ಒಳಗೊಂಡಿದ್ದು,ಇದು ಕಣ್ಣುಗಳನ್ನು ಅಪಾಯಕಾರಿ ಅಲ್ಟ್ರಾವಯಲೆಟ್ ಕಿರಣಗಳಿಂದ ರಕ್ಷಿಸುತ್ತದೆ ಮತ್ತು ಕ್ಯಾಟರಾಕ್ಟ್ ಅಥವಾ ಕಣ್ಣಿನ ಪೊರೆಯುಂಟಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ.

ವಿಧಾನ: ಒಂದು ಗ್ಲಾಸ್ ನೀರಿಗೆ ಬಾಳೆಹಣ್ಣಿನ ಸಿಪ್ಪೆಯೊಂದನ್ನು ಸೇರಿಸಿ ಅದನ್ನು ಸುಮಾರು 10 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ ತೆಗೆದಿಡಿ. ನೀರು ತಣ್ಣಗಾದ ಬಳಿಕ ಅದನ್ನು ಸೋಸಿ ಸೇವಿಸಿ.

► ಪೋಷಕಾಂಶಗಳನ್ನು ನೀಡುವ ಬಟಾಟೆ ಸಿಪ್ಪೆ

ಕಣ್ಣಿನ ಸುತ್ತಲಿನ ಕಪ್ಪು ವರ್ತುಲಗಳನ್ನು ಮತ್ತು ಬಿಸಿಲಿನಿಂದಾದ ಕಂದು ಕಲೆಗಳನ್ನು ನಿವಾರಿಸಲು ಬಟಾಟೆ ಸಿಪ್ಪೆಯನ್ನು ಬಳಸುವುದು ಹೆಚ್ಚಿನವರಿಗೆ ಗೊತ್ತಿರಬಹುದು. ಆದರೆ ಅದು ಹಲವಾರು ಆರೋಗ್ಯ ಸಮಸ್ಯೆಗಳನ್ನೂ ತಡೆಯುತ್ತದೆ. ಅದರಲ್ಲಿ ಸಮೃದ್ಧವಾಗಿರುವ ಕಬ್ಬಿಣ,ಸತುವು,ಪೊಟ್ಯಾಷಿಯಂ ಮತ್ತು ವಿಟಾಮಿನ್ ಸಿ ನಮ್ಮ ಶರೀರಕ್ಕೆ ಅಗತ್ಯವಾಗಿರುವ ಪೋಷಕಾಂಶಗಳಾಗಿವೆ. ವಿಧಾನ: ಬಟಾಟೆಯ ಗರಿಷ್ಠ ಆರೋಗ್ಯಲಾಭಗಳನ್ನು ಪಡೆಯಲು ಅದನ್ನು ಸಿಪ್ಪೆ ಸಹಿತ ಸೇವಿಸಬೇಕು. ಅಡಿಗೆಯಲ್ಲಿ ಸಿಪ್ಪೆಯನ್ನು ನೀವು ಇಷ್ಟ ಪಡುವುದಿಲ್ಲವಾದರೆ ಸಿಪ್ಪೆ ಸಹಿತ ಬಟಾಟೆಯ ಚಿಪ್ಸ್ ಮಾಡಿಕೊಂಡು ತಿನ್ನಬಹುದು.

► ಬೆಳ್ಳುಳ್ಳಿ ಸಿಪ್ಪೆ ಹೃದಯಕ್ಕೆ ಒಳ್ಳೆಯದು

ಬೆಳ್ಳುಳ್ಳಿ ಎಸಳುಗಳ ಮೇಲಿನ ಸಿಪ್ಪೆಯು ಫಿನೈಲ್‌ಪ್ರೊಪನಾಯ್ಡೊ ಎಂಬ ಉತ್ಕರ್ಷಣ ನಿರೋಧಕವನ್ನು ಒಳಗೊಂಡಿರುತ್ತದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಮತ್ತು ಕೆಟ್ಟ ಕೊಲೆಸ್ಟ್ರಾಲ್‌ನ್ನು ತಗ್ಗಿಸುತ್ತದೆ. ತನ್ಮೂಲಕ ಹೃದಯದ ಆರೋಗ್ಯಕ್ಕೆ ರಕ್ಷಣೆಯನ್ನು ನೀಡುತ್ತದೆ,ಜೊತೆಗೆ ಕ್ಯಾನ್ಸರ್‌ನ್ನೂ ತಡೆಯುತ್ತದೆ.

ವಿಧಾನ: ಗರಿಷ್ಠ ಲಾಭಗಳನ್ನು ಪಡೆಯಲು ಪ್ರತಿದಿನ ಎರಡು ಬೆಳ್ಳುಳ್ಳಿ ಎಸಳುಗಳನ್ನು ಸಿಪ್ಪೆ ಸಹಿತ ತಿನ್ನಬೇಕು.

► ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕುಂಬಳಕಾಯಿ ಸಿಪ್ಪೆ

ಕುಂಬಳ ಕಾಯಿ ಸಿಪ್ಪೆಯಲ್ಲಿರುವ ಬೀಟಾ-ಕ್ಯಾರೊಟಿನ್ ಶರೀರದಲ್ಲಿಯ ಫ್ರೀ ರ್ಯಾಡಿಕಲ್‌ಗಳ ವಿರುದ್ಧ ಹೋರಾಡುತ್ತದೆ ಮತ್ತು ಕ್ಯಾನ್ಸರ್ ಅಪಾಯವನ್ನು ತಗ್ಗಿಸುತ್ತದೆ. ಅದು ಚರ್ಮಕ್ಕೆ ಅಲ್ಟ್ರಾವಯಲೆಟ್ ಕಿರಣಗಳ ವಿರುದ್ಧ ರಕ್ಷಣೆಯನ್ನೂ ನೀಡುತ್ತದೆ.

ವಿಧಾನ: ಸಾರು ಅಥವಾ ಪಲ್ಯಕ್ಕೆ ಸಿಪ್ಪೆ ತೆಗೆಯದೆಯೇ ಕುಂಬಳ ಕಾಯಿಯನ್ನು ಬಳಸುವ ಮೂಲಕ ಈ ಲಾಭವನ್ನು ಪಡೆದುಕೊಳ್ಳಬಹುದು. ಸಿಪ್ಪೆಯನ್ನು ಬಿಸಿಲಿನಲ್ಲಿ ಗರಿಗರಿಯಾಗಿ ಒಣಗಿಸಿ ಅದನ್ನು ತಿಂಡಿಯ ರೂಪದಲ್ಲಿ ಸೇವಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News