ಬಾಲಕಿಯರ ಮೇಲಿನ ದೌರ್ಜನ್ಯ ಪ್ರಕರಣ: ತನಿಖೆಯ ಪ್ರಗತಿ ವರದಿ ಕೇಳಿದ ಹೈಕೋರ್ಟ್

Update: 2019-08-06 17:09 GMT

ಬೆಂಗಳೂರು, ಆ.6: ಕೆಂಗೇರಿಯ ಅನಾಥಾಶ್ರಮದಲ್ಲಿ ಬಾಲಕಿಯರ ಮೇಲೆ ನಡೆದ ಲೈಂಗಿಕ ಕಿರುಕುಳ ಹಾಗೂ ದೈಹಿಕ ದೌರ್ಜನ್ಯದ ಪ್ರಕರಣ ಸಂಬಂಧ ಸೂಕ್ತ ತನಿಖೆ ನಡೆಸದ ಪೊಲೀಸರ ವಿರುದ್ಧ ಹೈಕೋರ್ಟ್ ಮಂಗಳವಾರ ಕಿಡಿಕಾರಿದೆ. ಅಲ್ಲದೆ, ತನಿಖೆಯ ಬಗ್ಗೆ ಪ್ರಗತಿ ವರದಿ ಸಲ್ಲಿಸಲು ಸರಕಾರಕ್ಕೆ ನಿರ್ದೇಶಿಸಿದೆ.

ಈ ಕುರಿತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ(ಕೆಎಸ್‌ಎಲ್‌ಎಸ್‌ಎ) ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಅರ್ಜಿದಾರರ ಪರ ವಾದಿಸಿದ ವಕೀಲ ಕ್ಲಿಫ್ಟನ್ ಡಿ. ರೊಜಾರಿಯೊ ವಾದಿಸಿ, ಬಾಲಕಿಯರ ಮೇಲೆ ನಡೆದ ಲೈಂಗಿಕ ಕಿರುಕುಳ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರೂ ಬಾಲಕಿಯರ ಆರೋಗ್ಯ ತಪಾಸಣೆ ಸೇರಿದಂತೆ ಇನ್ನಿತರ ತನಿಖೆಯನ್ನು ಸೂಕ್ತ ರೀತಿಯಲ್ಲಿ ಕೈಗೊಂಡಿಲ್ಲ ಎಂದು ಪೀಠಕ್ಕೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಬಾಲಕಿಯರ ಮೇಲೆ ಲೈಂಗಿಕ ಕಿರುಕುಳ ನಡೆದು ಐದು ದಿನಗಳು ಕಳೆದರೂ ಆರೋಗ್ಯ ತಪಾಸಣೆ ಯಾಕೆ ನಡೆಸಿಲ್ಲ. ಸರಕಾರಿ ಬಾಲಕಿಯರ ಆಶ್ರಯ ಮನೆ ಅಧೀಕ್ಷಕರು ಬರೆದ ಪತ್ರದ ಆಧಾರದ ಮೇಲೆ ನೀವು ಯಾವ ಕ್ರಮಗಳನ್ನೂ ಕೈಗೊಂಡಿಲ್ಲ ಎಂದು ಪೊಲೀಸರ ವಿರುದ್ಧ ಕಿಡಿಕಾರಿತು.

ಕೆಂಗೇರಿ ಪೊಲೀಸರು ನಡೆಸಿದ ತನಿಖೆಯ ಸ್ಥಿತಿ ವರದಿಯನ್ನು ಸಲ್ಲಿಸಲು ನಿರ್ದೇಶನ ನೀಡಿದ್ದರೂ ನೀವು ಇನ್ನೂ ತನಿಖೆಯು ಪ್ರಗತಿಯಲ್ಲಿದೆ ಎಂದು ಹೇಳುತ್ತೀರಿ. ಅಲ್ಲದೆ, ಸಿಸಿ ಕ್ಯಾಮರಾಗಳ ಬಗ್ಗೆ ನೀವು ಯಾಕೆ ಪರಿಶೀಲನೆ ಮಾಡಿಲ್ಲ ಎಂದು ಪ್ರಶ್ನಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಸರಕಾರ ಪರ ವಕೀಲರು, ಈಗಾಗಲೇ ಸಿಸಿ ಕ್ಯಾಮರಾಗಳನ್ನು ವಶಕ್ಕೆ ಪಡೆದುಕೊಂಡು ಪರಿಶೀಲನೆ ನಡೆಸಲಾಗಿದೆ ಎಂದು ಪೀಠಕ್ಕೆ ತಿಳಿಸಿದರು. ನ್ಯಾಯಪೀಠವು ಆ.13ರಂದು ತನಿಖೆಯ ಬಗ್ಗೆ ಪ್ರಗತಿ ಸಲ್ಲಿಸಲು ಸೂಚಿಸಿ, ವಿಚಾರಣೆಯನ್ನು ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News