ವಸತಿಗಾಗಿ ಆ.14ರ ರಾತ್ರಿ ಸ್ವಾತಂತ್ರೋತ್ಸವ ಆಚರಣೆ: ಎಚ್.ಎಸ್.ದೊರೆಸ್ವಾಮಿ

Update: 2019-08-06 17:54 GMT

ಬೆಂಗಳೂರು, ಆ.6: ಭೂಮಿ ಮತ್ತು ವಸತಿಯ ಹಕ್ಕನ್ನು ಪ್ರತಿಪಾದಿಸಲು ಆ.14ರ ರಾತ್ರಿ ಸ್ವಾತಂತ್ರ ಉದ್ಯಾನವನದಲ್ಲಿ ಸ್ವಾತಂತ್ರೋತ್ಸವ ಆಚರಿಸಲು ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ನಿರ್ಧರಿಸಿದೆ ಎಂದು ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ ಭೂ ರಹಿತರಿಗೆ ಇಲ್ಲಿಯವರೆಗೂ ಯಾವುದೇ ರೀತಿಯ ಭೂಮಿಯನ್ನು ಮಂಜೂರಾತಿ ಮಾಡದೆ ನಿರ್ಲಕ್ಷ ತಾಳಿದೆ. ಬಡ ಜನರು ಸರಕಾರಿ ಹಾಗೂ ಖಾಸಗಿ ಜಾಗದಲ್ಲಿ ಕಟ್ಟಿಕೊಂಡಿರುವ ಮನೆ, ಗುಡಿಸಲುಗಳನ್ನು 94 ಸಿ ಯೋಜನೆಯಡಿ ಸಕ್ರಮಗೊಳಿಸಿ ಹಕ್ಕುಪತ್ರಗಳನ್ನು ನೀಡದೆ ವಂಚಿಸುತ್ತಿದೆ ಎಂದು ಆರೋಪಿಸಿದರು.

ಜನರನ್ನು ಒಕ್ಕಲೆಬ್ಬಿಸುವ ಕಿರುಕುಳ ಮಾತ್ರ ಎಲ್ಲ ಕಡೆ ಆರಂಭವಾಗಿದೆ. ವಿಶೇಷವಾಗಿ ಅರಣ್ಯ ಇಲಾಖೆ ಸಾವಿರಾರು ಭೂಮಿ ಕಬಳಿಸಿರುವ ಬಲಾಢ್ಯರನ್ನು ಬಿಟ್ಟು, ಬದುಕಿಗೆ ಗೂಡು ಕಟ್ಟಿಕೊಂಡಿರುವ ಬಡಜನರ ಮೇಲೆ ಬುಲ್ಡೋಜರ್ ಮೂಲಕ ಯುದ್ಧ ಸಾರಿದೆ. ದೇಶವು 73ನೇ ಸ್ವಾತಂತ್ರ ದಿನಾಚರಣೆಯನ್ನು ಆಚರಿಸುತ್ತಿದೆ. ಆದರೆ ಬಡವರಿಗೆ ಇಂದಿಗೂ ಸ್ವಾತಂತ್ರ ಸಿಕ್ಕಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಭೂಮಿ ಮತ್ತು ನಿವೇಶನಗಳ ಮಂಜೂರಾತಿಗಾಗಿ ಬಡಜನರು ನಡೆಸಿದ ನಿರಂತರ ಹೋರಾಟಗಳ ಹಿನ್ನೆಲೆಯಲ್ಲಿ ಅಕ್ರಮ ಅಕ್ರಮದ ಹೆಸರಿನಲ್ಲಿ ಸರಕಾರದ ಫಾರಂ 50-53 ಹಾಗೂ 94ಸಿ, 94ಸಿಸಿ ಯೋಜನೆಗಳಡಿ ಅರ್ಜಿಗಳನ್ನು ಕರೆದು ಮೂರು ದಶಕಕ್ಕೂ ಹೆಚ್ಚು ಕಾಲವಾಯಿತು. ಲಕ್ಷಾಂತರ ಅರ್ಜಿಗಳು ಅಧಿಕಾರಿಗಳ ಟೇಬಲ್ ಮೇಲೆ ಇವೆ. ಉಳ್ಳವರ ಅಕ್ರಮ ಒತ್ತುವರಿಗಳು ಸಕ್ರಮವಾಗಿದ್ದು, ಬಡವರ ಸಕ್ರಮ ಉತ್ತುವರಿಗಳು ಅಕ್ರಮ ಎನಿಸಿಕೊಂಡು ತಿರಸ್ಕೃತವಾಗಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಫಾರಂ ನಂ 57ರ ಅರ್ಜಿ ಸಲ್ಲಿಸಲು ನೀಡಿದ್ದ 1 ವರ್ಷ ಅವಧಿಯಲ್ಲಿ ಹೆಚ್ಚು ಭಾಗ ವ್ಯರ್ಥವಾಗಿ, ಬಹಳಷ್ಟು ಬಗರ್‌ಹುಕುಂ ರೈತರಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ಅಲ್ಲದೆ, ತ್ವರಿತ ಗತಿಯಲ್ಲಿ ಬಡವರ ಭೂ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಸೂಚಿಸಲು ರಚಿಸಲಾಗಿರುವ ‘ಹೈ ಲೆವೆಲ್ ಸಮಿತಿ’ಯನ್ನು ‘ಹೈ ಪವರ್ ಸಮಿತಿ’ಯನ್ನಾಗಿ ಮಾರ್ಪಡಿಸಿ, ಅದು ನಿಯಮಿತವಾಗಿ ಕೆಲಸ ಮಾಡುವಂತೆ ಆದೇಶಿಸಬೇಕು ಎಂದು ಅವರು ಆಗ್ರಹಿಸಿದರು.

ಈ ನಿಟ್ಟಿನಲ್ಲಿ ಆಗಸ್ಟ್ 14ರಂದು ನಡುರಾತ್ರಿ ಸ್ವಾತಂತ್ರ ಉದ್ಯಾನವನದಲ್ಲಿ ಮಧ್ಯೆರಾತ್ರಿ ಸ್ವಾತಂತ್ರೋತ್ಸವ ಆಚರಿಸಲಾಗುತ್ತದೆ. ಆ.14ರ ಸೂರ್ಯಾಸ್ತದೊಂದಿಗೆ ಹಣತೆಯ ಮೆರವಣಿಗೆ, ರೈಲು ನಿಲ್ದಾಣದಿಂದ ಸ್ವಾತಂತ್ರ ಉದ್ಯಾನವನದ ವರೆಗೆ ತೆರಳಲಿದೆ. ಇಡೀ ರಾತ್ರಿ ಪ್ರತಿರೋಧ ಕಾರ್ಯಕ್ರಮಗಳು ನಡೆಯಲಿವೆ. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಚಂದ್ರಶೇಖರ ಆಝಾದ ಆಗಮಿಸಲಿದ್ದಾರೆ ಎಂದು ಹೇಳಿದರು.

ಸಮಿತಿ ಹಕ್ಕೊತ್ತಾಯಗಳು

* ಭೂ ಮಂಜೂರಾತಿ ಸಮಿತಿ ಪುನರ್ ರಚನೆ.

* ಹಕ್ಕುಪತ್ರ ನೀಡುವ ಪ್ರಕ್ರಿಯೆ ಪೂರ್ಣಗೊಳಿಸುವುದು.

* ಬಾಲಸುಬ್ರಮಣ್ಯಂ ವರದಿ ಜಾರಿ

* ಭೂ ಸ್ವಾಧೀನ ಕಾಯ್ದೆಯ ಇತ್ತೀಚಿನ ತಿದ್ದುಪಡಿ ರದ್ದು.

* ಕಸ್ತೂರಿ ರಂಗನ್ ವರದಿ ರದ್ದು.

* ಜಿಂದಾಲ್ ಕಂಪನಿಗೆ ಭೂಮಿ ನೀಡಬಾರದು.

* ಬಡವರ ಮೇಲೆ ಅರಣ್ಯ ಇಲಾಖೆಯ ದೌರ್ಜನ್ಯ ನಿಲ್ಲಲಿ.

* ಹೆಚ್ಚುವರಿ ಭೂಮಿಗಳ ಪಟ್ಟಿ ಮಾಡಿ, ಬಡವರ ವಾಸಕ್ಕೆ ಶರತ್ತುಬದ್ಧ ಉಳುಮೆಗೆ ಮಂಜೂರು.

ಬಡವರ ಕೆಲಸ ಎಂದರೆ ಸರಕಾರ ಹಾಗೂ ಅಧಿಕಾರಿಗಳಿಗೆ ತಾತ್ಸಾರ. ಸ್ವಾತಂತ್ರವು ದೇಶದ ಶ್ರೀಮಂತರಿಗೆ, ಬಂಡವಾಳಶಾಹಿಗಳಿಗೆ ಬಂದಿದೆ. ಇನ್ನೂ ಕಡು ಬಡವರಿಗೆ ಬಂದಿಲ್ಲ.

-ಎಚ್.ಎಸ್.ದೊರೆಸ್ವಾಮಿ, ಸ್ವಾತಂತ್ರ ಹೋರಾಟಗಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News