ಕೆಚ್ಚೆದೆಯಿಂದ ಹೋರಾಡಿ ಪಕ್ಷ ಸಂಘಟಿಸುತ್ತೇನೆ: ಎಚ್.ಡಿ.ದೇವೇಗೌಡ

Update: 2019-08-07 15:29 GMT

ಬೆಂಗಳೂರು, ಆ.7: ಲೋಕಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ ಮಾತ್ರಕ್ಕೆ ನಾನು ಸುಮ್ಮನೆ ಕೈ ಕಟ್ಟಿ ಕೂರುವುದಿಲ್ಲ. ನಾನು ಸೋತಿದ್ದು ಒಳ್ಳೆಯದೆ ಆಯಿತು. ಮತ್ತೆ ಕೆಚ್ಚೆದೆಯಿಂದ ಹೋರಾಡಿ ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.

ಬುಧವಾರ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಜೆಡಿಎಸ್ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ನಾನು ಸೋಲು ಅನುಭವಿಸಿದ್ದಕ್ಕೆ ಯಾರನ್ನು ಹೊಣೆ ಮಾಡುವುದಿಲ್ಲ. ನನ್ನನ್ನು ಸೋಲಿಸಿದ ಪುಣ್ಯಾತ್ಮರಿಗೆ ಒಳ್ಳೆಯದಾಗಲಿ ಎಂದರು.

ಜೆಡಿಎಸ್ ಪಕ್ಷ ಬಹಳ ಬಿಕ್ಕಟ್ಟಿನಲ್ಲಿದೆ. ಅಧಿಕಾರದಿಂದ ಹೊರಗೆ ಬಂದ ಮೇಲೆ ಪ್ರತಿಯೊಂದು ಸಂಗತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಪಕ್ಷವನ್ನು ಮತ್ತೆ ಹೇಗೆ ಕಟ್ಟಬೇಕು ಅಂತ ನನಗೆ ಗೊತ್ತು. ಕಾರ್ಯಕರ್ತರಾದ ನೀವು ನನಗೆ ಮತ್ತೆ ಶಕ್ತಿ ಕೊಡಬೇಕು ಎಂದು ಕೈ ಚಾಕಿ ಕೇಳಿಕೊಳ್ಳುತ್ತೇನೆ ಎಂದು ದೇವೇಗೌಡ ಹೇಳಿದರು.

ನಮ್ಮ ಜೊತೆ ಯಾರಿದ್ದಾರೆ, ಯಾರು ಬಿಟ್ಟು ಹೋಗಿದ್ದಾರೆ ಎಂದು ಪ್ರಶ್ನೆ ಮಾಡುವುದಿಲ್ಲ. ನಮ್ಮಲ್ಲೆ ತಪ್ಪು ಇರಬಹುದು. ಎಲ್ಲದಕ್ಕೂ ನಾನೇ ಕಾರಣ, ಯಾರನ್ನೂ ದೂಷಿಸುವುದಿಲ್ಲ. ನಮ್ಮನ್ನು ಬಿಟ್ಟು ಹೋಗಿರುವ ಮೂವರು ಶಾಸಕರ ಕ್ಷೇತ್ರಗಳ ಮಹಾಜನರೇ ಅಭ್ಯರ್ಥಿಗಳನ್ನು ಗುರುತಿಸುತ್ತಾರೆ ಎಂದು ಅವರು ತಿಳಿಸಿದರು.

ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಭೀಕರ ಮಳೆ ಇದೆ. ಎಲ್ಲ ಜಿಲ್ಲೆಗಳಿಂದ ನೀವು ಬಂದಿದ್ದೀರಿ. ಪಕ್ಷವನ್ನು ಉಳಿಸೋಕೆ ಛಲದಿಂದ ನೀವು ಬಂದಿದ್ದೀರಿ. ಈ ಪಕ್ಷವನ್ನು ನೀವು ಉಳಿಸುತ್ತೀರಾ ಅನ್ನೋ ಆತ್ಮ ವಿಶ್ವಾಸ ನನಗಿದೆ. ರಾಜ್ಯದಲ್ಲಿ ಮತ್ತೆ ಚುನಾವಣೆ ಯಾವಾಗ ಬರುತ್ತದೆ ಅನ್ನೋದು ಯಾರಿಗೂ ಗೊತ್ತಿಲ್ಲ ಎಂದು ದೇವೇಗೌಡ ಹೇಳಿದರು.

ಈಗಿರುವ ಮುಖ್ಯಮಂತ್ರಿ ಮೂರು ತಿಂಗಳು ಸರಕಾರ ಮಾಡುತ್ತಾರೋ, ಮೂರುವರೆ ವರ್ಷ ಮಾಡುತ್ತಾರೋ ನಮಗೆ ಚಿಂತೆ ಇಲ್ಲ, ಅದರ ಅವಶ್ಯಕತೆಯೂ ನಮಗಿಲ್ಲ. ಅದನ್ನೆಲ್ಲ ದಿಲ್ಲಿಯಲ್ಲಿ ನಿರ್ಧಾರ ಮಾಡುತ್ತಾರೆ. ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಯಾವಾಗ ಏನು ನಿರ್ಧಾರ ಮಾಡುತ್ತಾರೆ ಅನ್ನೋದು ಯಾರಿಗೂ ಗೊತ್ತಿಲ್ಲ. ಅವರಿಬ್ಬರೇ ಎಲ್ಲವನ್ನು ತೀರ್ಮಾನ ಮಾಡುತ್ತಾರೆ ಎಂದು ದೇವೇಗೌಡ ತಿಳಿಸಿದರು. ಮೈತ್ರಿ ಸರಕಾರದ ನೇತೃತ್ವವಹಿಸಿದ್ದ ಎಚ್.ಡಿ.ಕುಮಾರಸ್ವಾಮಿ, 14 ತಿಂಗಳು ಧೃತಿಗೆಡದೆ ರೈತರ ಸಾಲವನ್ನು ಮನ್ನಾ ಮಾಡಿದ್ದಾರೆ. ಈ ವಿಚಾರವನ್ನು ಜನತೆಗೆ ಮನದಷ್ಟು ಮಾಡುವ ಕೆಲಸವನ್ನು ನಮ್ಮ ಕಾರ್ಯಕರ್ತರು ಮಾಡಬೇಕು. ನಮ್ಮ ಸರಕಾರ ಮಾಡಿರುವ ಅಭಿವೃದ್ಧಿ ಕೆಲಸಗಳು, ಸಾಧನೆಗಳನ್ನು ಜನರಿಗೆ ತಲುಪಿಸಬೇಕು ಎಂದು ಅವರು ಹೇಳಿದರು.

ಆಗಸ್ಟ್ ತಿಂಗಳಲ್ಲೆ ಪಕ್ಷದ ಮಹಿಳಾ ಕಾರ್ಯಕರ್ತೆಯರ ಸಮಾವೇಶ ಮಾಡುವುದರ ಜೊತೆಗೆ, ಉತ್ತರ ಕರ್ನಾಟಕ ಭಾಗದಲ್ಲಿ ರೈತರ ಸಮಾವೇಶವನ್ನು ಆಯೋಜಿಸಲಾಗುವುದು. ತಳಮಟ್ಟದಿಂದ ಪಕ್ಷವನ್ನು ಕಟ್ಟಬೇಕಿದೆ. ಉಪ ಚುನಾವಣೆಗಳು ಎದುರಾದಲ್ಲಿ, ಆಯಾ ಕ್ಷೇತ್ರದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ದೇವೇಗೌಡ ತಿಳಿಸಿದರು.

ಸಮಾವೇಶದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ಪ್ರಚಾರ ಸಮಿತಿ ಅಧ್ಯಕ್ಷ ವೈಎಸ್‌ವಿ ದತ್ತಾ, ಮಾಜಿ ಸಚಿವರಾದ ಪುಟ್ಟರಾಜು, ಸಾ.ರಾ.ಮಹೇಶ್, ಮುಖಂಡರಾದ ಕೋನರೆಡ್ಡಿ, ಝಫ್ರುಲ್ಲಾಖಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News