×
Ad

ಮಕ್ಕಳ ಸುರಕ್ಷತೆ ಕುರಿತ ವರದಿ ಬಿಡುಗಡೆ: ಶೇ.64 ರಷ್ಟು ಮಕ್ಕಳು ಅಪಘಾತಗಳಿಗೆ ಬಲಿ

Update: 2019-08-07 23:30 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಆ.7: ಮಕ್ಕಳ ಸುರಕ್ಷತೆ ಕುರಿತು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳ ಸಂಸ್ಥೆ (ನಿಮ್ಹಾನ್ಸ್) ಮತ್ತು ಸುರಕ್ಷತಾ ಸಂಪರ್ಕ ಸಂಸ್ಥೆ ಅಂಡರ್‌ರೈಟರ್ಸ್ ಲ್ಯಾಬೋರೇಟರೀಸ್ (ಯುಎಲ್) ನಡೆಸಿದ ಸಮೀಕ್ಷೆ ವರದಿ ಬಿಡುಗಡೆಗೊಂಡಿದ್ದು, ದೇಶ ವ್ಯಾಪ್ತಿ ಪ್ರತಿ ವಾರ್ಷಿಕ ಸಾಲಿನಲ್ಲೂ ಶೇ.64 ರಷ್ಟು ಶಾಲಾ ಮಕ್ಕಳು ರಸ್ತೆ ಅಪಘಾತಕ್ಕೆ ಬಲಿಯಾಗುತ್ತಿರುವ ಆತಂಕಕಾರಿ ಅಂಕಿ-ಅಂಶ ಬೆಳಕಿಗೆ ಬಂದಿದೆ.

ಬುಧವಾರ ಹೊಸೂರು ರಸ್ತೆಯ ನಿಮ್ಹಾನ್ಸ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುಎಲ್ ಉಪಾಧ್ಯಕ್ಷ ಸುರೇಶ್ ಸುಗವನಮ್ ಅವರು ಈ ವರದಿ ಬಿಡುಗಡೆ ಮಾಡಿದರು. 64 ರಷ್ಟು ಬಲಿಯಾದ ಮಕ್ಕಳ ಪೈಕಿ, 14 ವರ್ಷದೊಳಗಿನ ಮಕ್ಕಳ ಪ್ರಮಾಣ ಶೇ.38ರಷ್ಟಿದೆ ಎನ್ನುವ ಅಂಶ ಉಲ್ಲೇಖ ಮಾಡಲಾಗಿದ್ದು, ಇದು ಹೆಚ್ಚುತ್ತಿರುವ ರಸ್ತೆ ಅಪಘಾತಗಳಿಗೆ ಎಚ್ಚರಿಕೆ ಗಂಟೆಯಾಗಿದೆ.

ಬೆಂಗಳೂರು, ಕೋಲಾರ ಸೇರಿದಂತೆ ವಿವಿಧ ಜಿಲ್ಲೆಗಳ 131 ಶಾಲೆಗಳಲ್ಲಿ ನಡೆಸಲಾದ ಸುರಕ್ಷತಾ ಮೌಲ್ಯಮಾಪನ ಆಧಾರದ ಮೇಲೆ ಈ ವರದಿ ತಯಾರು ಮಾಡಲಾಗಿದ್ದು, ಹಲವು ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿದೆ.

ಕೇವಲ ರಸ್ತೆ ಅಪಘಾತ ಮಾತ್ರವಲ್ಲದೆ, ಸುಟ್ಟಗಾಯಗಳು ಮತ್ತು ನೀರಿನಲ್ಲಿ ಮುಳುಗುವ ಪ್ರಕರಣಗಳು ಕ್ರಮವಾಗಿ ಶೇ.13 ರಿಂದ 19ರಷ್ಟು ಏರಿಕೆಯಾದರೆ, ವಿಷ ಸೇವಿಸಿ, ಶೇಕಡ 6 ರಷ್ಟು ಮಕ್ಕಳು ಪ್ರತಿ ವರ್ಷ ಸಾವನ್ನಪ್ಪುತ್ತಿದ್ದಾರೆ. ಅಪಘಾತಗಳಲ್ಲಿ ಗಂಭೀರವಾಗಿ ಗಾಯಗೊಂಡು ಶೇ.12ರಷ್ಟು ಮಕ್ಕಳು ದೀರ್ಘಕಾಲದ ಅಂಗಾಂಗ ವೈಫಲ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದು ವರದಿ ಹೇಳಿದೆ.

ರಾಜ್ಯ ವ್ಯಾಪಿಯ ಕೆಲ ಶಾಲೆಗಳಲ್ಲಿ ನಡೆಸಿದ ಸುರಕ್ಷತಾ ಸಮೀಕ್ಷೆ ವರದಿಯನ್ವಯ ಶೇಕಡ 50 ರಷ್ಟು ಮಾತ್ರ ಶಾಲೆಗಳು ಮಾತ್ರ ಸುರಕ್ಷತೆ ಕ್ರಮಗಳನ್ನು ಪಾಲಿಸುತ್ತಿವೆ. ಆದರೆ, ಬಹುತೇಕ ಶಾಲೆಗಳಲ್ಲಿ ಕಟ್ಟಡಗಳು ಸರಿಯಿಲ್ಲ. ಅಪಘಾತ ಸಂಭವಿಸಲು ಪೂರಕವಾದ ವಾತಾವರಣ ನಿರ್ಮಾಣವಾಗಿದೆ. ಶಾಲಾ ವ್ಯಾಪ್ತಿಯೊಳಗೆ ರಸ್ತೆ ಗುಂಡಿಗಳು, ಬಾವಿಗಳು ಇರುವ ಮಾಹಿತಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವರದಿ ಬಿಡುಗಡೆಗೊಳಿಸಿ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ಕೆ.ಜಿ.ಜಗದೀಶ್, ಶಾಲಾ ವ್ಯಾಪ್ತಿಯಲ್ಲಿ ಮಕ್ಕಳ ಸುರಕ್ಷತಾ ಕ್ರಮಗಳಿಗೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಿಮ್ಹಾನ್ಸ್ ನಿರ್ದೇಶಕ ಪ್ರೊ.ಬಿ.ಎನ್. ಗಂಗಾಧರ್, ನಿಮ್ಹಾನ್ಸ್ ಸಾರ್ವಜನಿಕ ಸ್ವಾಸ್ಥ್ಯ ಕೇಂದ್ರದ ಮುಖ್ಯಸ್ಥ ಡಾ.ಜಿ.ಗುರುರಾಜ್, ರಿಜಿಸ್ಟ್ರಾರ್ ಪ್ರೊ. ಶೇಖರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಶಾಶ್ವತ ಪರಿಹಾರ ಬೇಕು

ಸುರಕ್ಷಾ ಕ್ರಮ ಇಲ್ಲದ ಕಾರಣ, ಕಳೆದ ದಶಕದಲ್ಲಿ ಸುಮಾರು 5 ಲಕ್ಷ ಮಕ್ಕಳು ಮೃತಪಟ್ಟಿದ್ದಾರೆ. ಇದು ಗಂಭೀರ ಸಮಸ್ಯೆಯಾಗಿದ್ದು, ಈ ಬಗ್ಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು.

-ಸುರೇಶ್ ಸುಗವನಮ್, ಉಪಾಧ್ಯಕ್ಷ, ಯುಎಲ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News