ಎಫ್‌ಐಆರ್ ಕೇಂದ್ರಗಳನ್ನು ಮತ್ತೆ ಆರಂಭಿಸಲು ಕೋರಿ ಅರ್ಜಿ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್
ಬೆಂಗಳೂರು, ಆ.7: ಈ ಮೊದಲು ಬೆಂಗಳೂರಿನಲ್ಲಿ ಆರಂಭಿಸಲಾಗಿದ್ದ ಎಫ್‌ಐಆರ್ ಕೇಂದ್ರಗಳನ್ನು ಪುನಹ ಆರಂಭಿಸಲು ಹಾಗೂ ಸಾರ್ವಜನಿಕರು ನೀಡುವ ದೂರುಗಳನ್ನು ಆಧರಿಸಿ ಎಫ್‌ಐಆರ್ ದಾಖಲಿಸುವಾಗ ಪೊಲೀಸ್ ಠಾಣಾ ವ್ಯಾಪ್ತಿ ಕೇಳದಂತೆ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಿಗೆ ನಿರ್ದೇಶಿಸಲು ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಈ ಕುರಿತು ವಕೀಲರೂ ಆಗಿರುವ ಎಸ್.ಉಮಾಪತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಮುಹಮ್ಮದ್ ನವಾಝ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ಅರ್ಜಿಗೆ ಸಂಬಂಧಿಸಿದಂತೆ ಮೂರು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆ ಮುಂದೂಡಿತು.
ಎಫ್‌ಐಆರ್ ದಾಖಲಿಸಿಕೊಳ್ಳುವ ಸಂಬಂಧ ಸುಪ್ರೀಂಕೋರ್ಟ್ ಹಾಗೂ ದೇಶದ ಇತರ ಹೈಕೋರ್ಟ್‌ಗಳ ತೀರ್ಪುಗಳು ಹಾಗೂ ಕೇಂದ್ರ ಸರಕಾರದ ಸುತ್ತೋಲೆಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವಲ್ಲಿ ರಾಜ್ಯ ಗೃಹ ಇಲಾಖೆ ನಿರ್ಲಕ್ಷ ವಹಿಸುತ್ತಿದೆ. ಎಫ್‌ಐಆರ್‌ಗಳನ್ನು ದಾಖಲಿಸಿಕೊಳ್ಳುವ ವೇಳೆ ಪೊಲೀಸ್ ಠಾಣಾ ವ್ಯಾಪ್ತಿ ಕೇಳದಂತೆ ಸುಪ್ರೀಂಕೋರ್ಟ್‌ನ ನಿರ್ದೇಶನವಿದ್ದು, ಕೇಂದ್ರ ಸರಕಾರ ಸಹ ಈ ಬಗ್ಗೆ ಹಲವು ಬಾರಿ ಸುತ್ತೋಲೆ ಹೊರಡಿಸಿದೆ. ಆದರೂ ರಾಜ್ಯದಲ್ಲಿ ಅದನ್ನು ಜಾರಿಗೆ ತರಲಾಗಿಲ್ಲ ಎಂದು ಅರ್ಜಿಯಲ್ಲಿ ದೂರಲಾಗಿದೆ.