ಸೆಪ್ಟೆಂಬರ್ 1ರಿಂದ ಪ್ಲಾಸಿಕ್ ಬಳಸಿದರೆ ಭಾರೀ ದಂಡ: ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ವಿಜಯೇಂದ್ರ
ಬೆಂಗಳೂರು, ಆ.7: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಪ್ಟೆಂಬರ್ 1ರ ನಂತರ ಪ್ಲಾಸ್ಟಿಕ್ ಉತ್ಪಾದಿಸುವ ಹಾಗೂ ಉತ್ಪನ್ನ ಮಾರಾಟ ಮಾಡುವ ಮಳಿಗೆಗಳಿಗೆ ಭಾರೀ ಪ್ರಮಾಣದ ದಂಡ ವಿಧಿಸಲು ಪಾಲಿಕೆ ಚಿಂತನೆ ನಡೆಸಿದೆ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ವಿಜಯೇಂದ್ರ ತಿಳಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೆ.1ರಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ತೀರ್ಮಾನಿಸಿದ್ದೇವೆ. ಹಾಗಾಗಿ ಸೆ.1ರ ನಂತರ ಪ್ಲಾಸಿಕ್ ಉತ್ಪನ್ನ ಬಳಕೆ ಮಾಡಿದರೆ ಮೊದಲ ಬಾರಿಗೆ ಒಂದು ಲಕ್ಷ ದಂಡ, 2 ಹಾಗೂ 3ನೇ ಬಾರಿಯೂ ವ್ಯಾಪಾರ ಮಾಡಿದರೆ ಅತಿ ಹೆಚ್ಚು ದಂಡ ಹಾಕಲಾಗುವುದು. ಅಲ್ಲದೆ, ಕೆಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಪ್ಲಾಸ್ಟಿಕ್ ಉತ್ಪನ್ನ ಮಾರಾಟ ಮಾಡುವವರ ವ್ಯಾಪಾರ ಪರವಾನಗಿ ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಗರದಾದ್ಯಂತ ಇರುವ ಪ್ಲಾಸ್ಟಿಕ್ ಉತ್ಪನ್ನ ಘಟಕಗಳ ಮೇಲಿನ ದಾಳಿಯನ್ನು ತೀವ್ರಗೊಳಿಸಿದ್ದೇವೆ. ಇದರ ಜೊತೆಗೆ ಆ.26ರಿಂದ 28ರೊಳಗೆ ಪ್ಲಾಸ್ಟಿಕ್ ಪರ್ಯಾಯ ಉತ್ಪನ್ನಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಮೇಳ ನಡೆಸಲು ತೀರ್ಮಾನಿಸಿದ್ದೇವೆ. ಮೇಳದಲ್ಲಿ ಗೋಣಿಚೀಲದ ಬ್ಯಾಗ್, ಬಟ್ಟೆ ಬ್ಯಾಗ್ ಬಳಕೆ ಬಗ್ಗೆ ಅರಿವು ಮೂಡಿಸಲಾಗುವುದು. ಜನರು ಪಾಲಿಕೆಯೊಂದಿಗೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ಆಗಸ್ಟ್ 3ರ ವರೆಗೆ ವಿವಿಧ ಪ್ಲಾಸ್ಟಿಕ್ ಉತ್ಪನ್ನ ಘಟಕಗಳ ಮೇಲೆ ನಾವು ದಾಳಿ ಮಾಡಿ ಸುಮಾರು 24 ಸಾವಿರ ಕೆಜಿ ಪ್ಲಾಸ್ಟಿಕ್ ಉತ್ಪನ್ನವನ್ನು ವಶಪಡಿಸಿಕೊಂಡು 33 ಲಕ್ಷ ರೂ.ಗೂ ಹೆಚ್ಚು ದಂಡ ವಿಧಿಸಿದ್ದೇವೆ. ಈ ದಾಳಿಯನ್ನು ಸೆ.1ರ ವರೆಗೂ ತೀವ್ರಗೊಳಿಸಲು ನಿರ್ಧರಿಸಲಾಗಿದೆ ಎಂದರು.
ದಂಡ ವಿಧಿಸಿದ ನಂತರವೂ ಪ್ಲಾಸ್ಟಿಕ್ ಬಳಕೆ ಮುಂದುವರೆಸಿದರೆ ಅಂತಹ ಮಳಿಗೆಗಳ ಪರವಾನಗಿ ರದ್ದುಗೊಳಿಸಲಾಗುವುದು.
-ವಿಜಯೇಂದ್ರ, ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ
ಇತ್ತೀಚೆಗೆ ನಗರದಲ್ಲಿ ಡೆಂಗ್ಯು ಪ್ರಕರಣಗಳು ಹೆಚ್ಚಾಗಿದ್ದು, ಅತ್ತ ಕಡೆ ಗಮನ ಕೊಟ್ಟಿದ್ದರ ಕಾರಣ ಪ್ಲಾಸ್ಟಿಕ್ ಉತ್ಪನ್ನ ಘಟಕಗಳ ಮೇಲಿನ ದಾಳಿ ಕಡಿಮೆಯಾಗಿತ್ತು. ಇನ್ನು ಮುಂದೆ ದಾಳಿ ತೀವ್ರಗೊಳ್ಳಲಿದೆ.
-ಮನೋರಂಜನ್ ಹೆಗ್ಡೆ, ಬಿಬಿಎಂಪಿ ಆರೋಗ್ಯಾಧಿಕಾರಿ