ದೇವರ ಜನ್ಮಸ್ಥಾನವನ್ನು ಕಕ್ಷಿಗಾರ ಎಂದು ಪರಿಗಣಿಸಲು ಸಾಧ್ಯವೇ: ಸುಪ್ರೀಂ ಪ್ರಶ್ನೆ

Update: 2019-08-08 15:58 GMT

ಹೊಸದಿಲ್ಲಿ, ಆ.8: ದೇವರ ಜನ್ಮಸ್ಥಳವನ್ನು ನ್ಯಾಯಾಲಯದಲ್ಲಿರುವ ಪ್ರಕರಣದ ಕಕ್ಷಿಗಾರ ಎಂದು ಪರಿಗಣಿಸಲು ಹೇಗೆ ಸಾಧ್ಯ ಎಂದು ಸುಪ್ರೀಂಕೋರ್ಟ್ ಗುರುವಾರ ಪ್ರಶ್ನಿಸಿದೆ.

ಅಯೋಧ್ಯೆಯ ವಿವಾದಾತ್ಮಕ ಜಮೀನಿನ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್, ಈ ಪ್ರಕರಣದ ಒಂದು ಕಕ್ಷಿಗಾರನಾಗಿರುವ ‘ರಾಮಲಲ್ಲ ವಿರಾಜಮಾನ್’ ಟ್ರಸ್ಟ್‌ಗೆ ಈ ಪ್ರಶ್ನೆ ಕೇಳಿತು. ಹಿಂದು ಧರ್ಮದಲ್ಲಿ ದೇವರ ಪ್ರಾರ್ಥನಾ ಸ್ಥಳದಲ್ಲಿ ವಿಗ್ರಹಗಳು ಇರಲೇಬೇಕೆಂಬ ಅಗತ್ಯವಿಲ್ಲ. ಹಿಂದೂ ಧರ್ಮದಲ್ಲಿ ನದಿ, ಸೂರ್ಯನನ್ನೂ ಪೂಜಿಸಲಾಗುತ್ತದೆ. ಆದ್ದರಿಂದ ಜನ್ಮಸ್ಥಳವನ್ನು ನ್ಯಾಯಶಾಸ್ತ್ರದ ವ್ಯಕ್ತಿ ಎಂದು ಪರಿಗಣಿಸಬಹುದು ಎಂದು ರಾಮಲಲ್ಲ ಟ್ರಸ್ಟ್‌ನ ವಕೀಲ ಕೆ ಪರಾಶರನ್ ನ್ಯಾಯಾಲಯಕ್ಕೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ನ್ಯಾಯಾಲಯದಲ್ಲಿ ಹಿಂದು ದೇವರನ್ನು ನ್ಯಾಯಶಾಸ್ತ್ರದ ವ್ಯಕ್ತಿ ಎಂದು ಪರಿಗಣಿಸಲಾಗಿದೆ. ದೇವರ ಹೆಸರಲ್ಲಿ ಆಸ್ತಿ, ಸಂಸ್ಥೆಗಳು ಇರಬಹುದು ಮತ್ತು ದೇವರ ಹೆಸರಲ್ಲಿ ದಾವೆ ಹೂಡಬಹುದು. ಇದನ್ನು ಉತ್ತರಾಖಂಡದ ಹೈಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ. ಗಂಗಾ ನದಿಯನ್ನೂ ಕಕ್ಷಿಗಾರ ಎಂದು ಪರಿಗಣಿಸಿದೆ ಎಂದು ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯಿ, ನ್ಯಾಯಾಧೀಶರಾದ ಎಸ್‌ಎ ಬೊಬ್ಡೆ, ಡಿವೈ ಚಂದ್ರಚೂಡ್, ಅಶೋಕ್ ಭೂಷಣ್ ಮತ್ತು ಎಸ್‌ಎ ನಝೀರ್ ಅವರಿದ್ದ ನ್ಯಾಯಪೀಠ ತಿಳಿಸಿತು. ಓರ್ವ ವ್ಯಕ್ತಿಗೆ ಪ್ರಾರ್ಥನೆ ಸಲ್ಲಿಸುವ ಹಕ್ಕನ್ನು ನಿರಾಕರಿಸುವುದು ಸರಿಯಲ್ಲ ಮತ್ತು ಹೀಗೆ ಮಾಡುವುದರಿಂದ ಪದೇ ಪದೇ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ ಎಂದು ಪರಾಶರನ್ ಹೇಳಿದರು.

1949ರ ಡಿಸೆಂಬರ್ 16ರಂದು ಕಡೆಯ ನಮಾಝ್ ಸಲ್ಲಿಸಲಾಗಿದೆ. ಅಲ್ಲಿ ವಿಗ್ರಹವನ್ನು ಇರಿಸಿದ್ದ ಕಾರಣ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಲು ಅಡ್ಡಿಯಾಯಿತೇ ಎಂದು ನ್ಯಾಯಪೀಠ ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಮತ್ತೊಬ್ಬ ವಕೀಲ ಸಿಎಸ್ ವೈದ್ಯನಾಥನ್, “ಇಲ್ಲ, ಮುಸ್ಲಿಮರಿಗೆ ಅಲ್ಲಿ ಪ್ರವೇಶವೇ ಇರಲಿಲ್ಲ” ಎಂದುತ್ತರಿಸಿದರು. ಬಳಿಕ ನ್ಯಾಯಾಲಯದ ಹೊರಗೆ ಸುದ್ದಿಗಾರರ ಜೊತೆ ಮಾತನಾಡಿದ ಮುಸ್ಲಿಮ್ ಕಕ್ಷಿಗಾರರ ವಕೀಲ ರಾಜೀವ್ ಧವನ್, ರಾಮಲಲ್ಲ ವಿರಾಜಮಾನ್ ಮತ್ತು ನಿರ್ಮೋಹಿ ಅಖಾಡ ದಾಖಲಿಸಿರುವ ಎರಡು ಪ್ರತ್ಯೇಕ ದಾವೆಗಳು ಮೂರ್ಖತನದ ಕಾರ್ಯವಾಗಿದೆ. ಏಕೆಂದರೆ ಒಂದು ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡರೆ ಮತ್ತೊಂದು ಸ್ವಯಂ ಅಸ್ತಿತ್ವ ಕಳೆದುಕೊಳ್ಳುತ್ತದೆ. ಆದ್ದರಿಂದ ಯಾವುದಾದರು ಒಂದು ಅರ್ಜಿಯನ್ನು ಮಾತ್ರ ವಿಚಾರಣೆಗೆ ಪರಿಗಣಿಸುವಂತೆ ಮುಸ್ಲಿಮ್ ಪಕ್ಷಗಳು ನ್ಯಾಯಾಲಯವನ್ನು ಕೋರಬೇಕು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News