ನೆರೆ ಪರಿಹಾರ ಕಾರ್ಯಕ್ಕೆ ರಾಜ್ಯ ಸರಕಾರದಿಂದ 100 ಕೋಟಿ ರೂ.ಬಿಡುಗಡೆ

Update: 2019-08-09 14:19 GMT

ಬೆಂಗಳೂರು, ಆ.9: ರಾಜ್ಯದ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅತಿವೃಷ್ಟಿ, ಪ್ರವಾಹ ಹಾಗೂ ಮಹಾರಾಷ್ಟ್ರ ರಾಜ್ಯದಿಂದ ಬಿಡುಗಡೆ ಮಾಡಲಾಗಿರುವ ನೀರಿನ ಹರಿವಿನ ಹೆಚ್ಚಳದಿಂದ ಉಂಟಾಗಿರುವ ನೆರೆ ಪರಿಸ್ಥಿತಿಯನ್ನು ಸಮಗ್ರವಾಗಿ ನಿರ್ವಹಿಸಲು ಹಾಗೂ ಪರಿಹಾರ ಕಾರ್ಯಗಳಿಗಾಗಿ ರಾಜ್ಯ ಸರಕಾರವು ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ 100 ಕೋಟಿ ರೂ.ಬಿಡುಗಡೆ ಮಾಡಿದೆ.

ಬೆಳಗಾವಿ ಜಿಲ್ಲೆಗೆ 25 ಕೋಟಿ ರೂ., ಬಾಗಲಕೋಟೆ-10 ಕೋಟಿ ರೂ., ವಿಜಯಪುರ-5 ಕೋಟಿ ರೂ., ಯಾದಗಿರಿ-5 ಕೋಟಿ ರೂ., ಉತ್ತರ ಕನ್ನಡ-10 ಕೋಟಿ ರೂ., ದಕ್ಷಿಣ ಕನ್ನಡ-5 ಕೋಟಿ ರೂ., ಶಿವಮೊಗ್ಗ-5 ಕೋಟಿ ರೂ., ಉಡುಪಿ-5 ಕೋಟಿ ರೂ., ಕೊಡಗು-5 ಕೋಟಿ ರೂ., ಚಿಕ್ಕಮಗಳೂರು-5 ಕೋಟಿ ರೂ., ಹಾಸನ-5 ಕೋಟಿ ರೂ., ಧಾರವಾಡ-5 ಕೋಟಿ ರೂ., ಗದಗ-5 ಕೋಟಿ ರೂ. ಹಾಗೂ ಕಲಬುರಗಿ ಜಿಲ್ಲೆಗೆ 5 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.

ಈ ಅನುದಾನವನ್ನು ಅತಿವೃಷ್ಟಿಯ ವಿಪತ್ತು ಪರಿಹಾರ ಕಾರ್ಯಗಳಿಗಾಗಿ ಕೇಂದ್ರ ಸರಕಾರವು ಹೊರಡಿಸಿರುವ ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ಮಾರ್ಗಸೂಚಿಯ ಪ್ರಕಾರ ವೆಚ್ಚ ಮಾಡಬೇಕು.

ಬಿಡುಗಡೆ ಮಾಡಿರುವ ಅನುದಾನವನ್ನು ಯಾವ ಉದ್ದೇಶಕ್ಕೆ ಬಿಡುಗಡೆ ಮಾಡಲಾಗಿದೆಯೇ ಅದೇ ಉದ್ದೇಶಕ್ಕಾಗಿ ಮಾತ್ರ ಬಳಸುವುದು ಹಾಗೂ ಅನುದಾನ ವೆಚ್ಚ ಮಾಡಿದ್ದಕ್ಕೆ ಸಂಬಂಧಿಸಿದಂತೆ ಹಣ ಬಳಕೆ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಹಣ ಬಳಕೆಯಲ್ಲಿ ಯಾವುದೇ ಲೋಪವಾದಲ್ಲಿ, ಆಯಾ ಜಿಲ್ಲಾಧಿಕಾರಿಯನ್ನೆ ನೇರವಾಗಿ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಕಂದಾಯ ಇಲಾಖೆ(ವಿಪತ್ತು ನಿರ್ವಹಣೆ, ನೋಂದಣಿ ಮತ್ತು ಮುಂದ್ರಾಂಕ)ಯ ಸರಕಾರದ ಉಪ ಕಾರ್ಯದರ್ಶಿ ಲಲಿತಾ ಎಚ್.ಹಂದಿಗೋಳ್ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News