ಕೇಂದ್ರ ಸರಕಾರದಿಂದ ಎಲ್ಲ ರೀತಿಯ ನೆರವು: ಕೇಂದ್ರ ಸಚಿವ ಸದಾನಂದಗೌಡ

Update: 2019-08-09 15:13 GMT

ಬೆಂಗಳೂರು, ಆ.9: ರಾಜ್ಯ ಯಾವತ್ತೂ ಕಾಣದ ಅತಿವೃಷ್ಟಿಗೆ ಒಳಗಾಗಿ ಪ್ರವಾಹ ಪರಿಸ್ಥಿತಿ ಬಂದಿದೆ. ರಾಜ್ಯದ ಮುಖ್ಯಮಂತ್ರಿ, ಚುನಾಯಿತ ಪ್ರತಿನಿಧಿಗಳು ಹಗಲಿರುಳೆನ್ನದೆ ತಂಡೋಪತಂಡವಾಗಿ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇಂತಹ ಸಮಯದಲ್ಲಿ ಸಣ್ಣ ಪುಟ್ಟ ವ್ಯತ್ಯಾಸಗಳು ಆಗುವುದು ಸಹಜ. ಪ್ರಕೃತಿಯ ಮುನಿಸಿನ ಎದುರು ಮನುಷ್ಯ ತೃಣ ಸಮಾನ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್‌ಗಳನ್ನು ಮಾಡಿರುವ ಅವರು, ಕೇಂದ್ರ ಸರಕಾರದಿಂದ ಎಲ್ಲ ರೀತಿಯ ನೆರವು ಬರುತ್ತಿದೆ. ಎಲ್ಲ ಇಲಾಖೆಯ ಅಧಿಕಾರಿಗಳು ಶಕ್ತಿ ಮೀರಿ ಶ್ರಮಿಸುತ್ತಿದ್ದಾರೆ. ಈ ಸಮಯದಲ್ಲಿ ಪೊಲೀಸ್ ಇಲಾಖೆ ಸೇರಿದಂತೆ ಎಲ್ಲರೂ ಅತ್ಯಂತ ಹೆಚ್ಚಿನ ತಾಳ್ಮೆಯಿಂದ ತಮ್ಮ ಜವಾಬ್ದಾರಿ ನಿರ್ವಹಿಸಬೇಕು ಎಂದು ಮನವಿ ಮಾಡಿದ್ದಾರೆ.

ಇಂತಹ ಸಂಕಷ್ಟದ ಸಮಯದಲ್ಲಿ ನೊಂದಿರುವವರ ಜೊತೆ ಸಹನೆಯಿಂದ ವರ್ತಿಸಬೇಕೆಂದು ಕೋರಿಕೆ. ಅದೇ ರೀತಿ ರಾಜ್ಯದ ಮಾಧ್ಯಮಗಳು ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದು ನಿಸ್ವಾರ್ಥವಾಗಿ ಜನರಿಂದ ಅಗತ್ಯ ವಸ್ತು ಸಂಗ್ರಹಿಸಿ ಜನರಿಗೆ ತಲುಪಿಸುವ ಮಹತ್ತರ ಕೆಲಸ ಮಾಡುತ್ತಿವೆ ಅವರಿಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು ಎಂದು ಸದಾನಂದಗೌಡ ಹೇಳಿದ್ದಾರೆ. ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಿಂದ ಮಾತ್ರ ಈ ಪ್ರಾಕೃತಿಕ ವಿಕೋಪ ಎದುರಿಸಲು ಸಾಧ್ಯ. ಪ್ರತಿಪಕ್ಷಗಳು ಕೂಡ ಸಧ್ಯಕ್ಕೆ ರಾಜಕೀಯ ಬದಿಗಿಟ್ಟು ಮುಖ್ಯಮಂತ್ರಿಗಳ ಜೊತೆ ಕೈ ಜೋಡಿಸಬೇಕೆಂದು ಸದಾನಂದಗೌಡ ವಿನಂತಿಸಿದ್ದಾರೆ.

ಗದಗ ಜಿಲ್ಲೆಯಲ್ಲಿ ಮುಖ್ಯಮಂತ್ರಿಯ ಕಾರಿಗೆ ಪೊಲೀಸರು ದಾರಿ ಮಾಡಿಕೊಟ್ಟಾಗ ನಡೆದ ಸಣ್ಣ ನೂಕಾಟವನ್ನು ಜನರ ಮೇಲೆ ಲಾಠಿ ಚಾರ್ಜ್ ಆಗಿದೆ ಎನ್ನುವಂತೆ ಕೆಲ ಮಾಧ್ಯಮಗಳು ತೋರಿಸುತ್ತಿದ್ದು, ಜನರಿಗೆ ತಪ್ಪುಸಂದೇಶ ರವಾನೆಯಾಗುವುದು ಬೇಡವೆಂದು ಕೋರಿಕೆ.

-ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News