ಬ್ರಿಟಿಷರ ಜೊತೆಗಿದ್ದ ಆರೆಸ್ಸೆಸ್, ಹಿಂದೂ ಮಹಾಸಭಾ ಮುಖಂಡರು ಇಂದು ದೇಶಭಕ್ತರಂತೆ: ಎಂ.ವೀರಪ್ಪ ಮೊಯ್ಲಿ

Update: 2019-08-09 18:23 GMT

ಬೆಂಗಳೂರು, ಆ.9: ಅಂದು ಬ್ರಿಟಿಷರ ಜೊತೆ ಪರೋಕ್ಷವಾಗಿ ಕೈಜೋಡಿಸಿದ್ದ ಆರೆಸ್ಸೆಸ್, ಹಿಂದೂ ಮಹಾಸಭಾ , ಇಂದು ದೇಶ ಭಕ್ತರಂತೆ ಬಿಂಬಿಸಿ ಕೊಳ್ಳುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಆರೋಪಿಸಿದರು.

ಶುಕ್ರವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕ್ವಿಟ್ ಇಂಡಿಯಾ ಚಳವಳಿ 77ನೆ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಂಘ ಪರಿವಾರ, ಮುಸ್ಲಿಂ ಲೀಗ್ ಹಾಗೂ ಹಿಂದೂ ಮಹಾಸಭಾ ನಾಯಕರು ಪಾಲ್ಗೊಳ್ಳದೆ ಬ್ರಿಟಿಷರಿಗೆ ಪರೋಕ್ಷವಾಗಿ ಬೆಂಬಲ ವ್ಯಕ್ತಪಡಿಸಿದರು. ಆದರೆ, ಸಂಘ ಪರಿವಾರದ ನಾಯಕರು ನಾವೇ ಈ ದೇಶಕ್ಕೆ ಸ್ವಾತಂತ್ರ್ಯ ಬರಲು ಕಾರಣವೆಂಬುದಾಗಿ ಬಿಂಬಿಸಿಕೊಳ್ಳುತ್ತಿರುವುದು ಶೋಚನೀಯ ಎಂದರು.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಂಘ ಪರಿವಾರದ ನಾಯಕರು ಪಾಲ್ಗೊಂಡಿರುವ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಇವರ ಕೊಡುಗೆ ಶೂನ್ಯ ಎಂದು ಆರೋಪಿಸಿದ ಅವರು, ಕಾಶ್ಮೀರದಲ್ಲಿ 370ರ ಕಾಯ್ದೆ ರದ್ದುಗೊಳಿಸಿರುವುದು ರಾಜಕೀಯ ತಂತ್ರವಾಗಿದೆ. ಅಷ್ಟೇ ಅಲ್ಲದೆ, ಸಾಮಾಜಿಕ ನ್ಯಾಯ, ಆರ್ಥಿಕ ಸ್ಥಿತಿಗತಿಗನುಗುಣವಾಗಿ ಯಾವುದೇ ಯೋಜನೆಗಳನ್ನು ರೂಪಿಸದೆ ದಿಢೀರ್ 370ನೇ ಕಾಯ್ದೆ ರದ್ದುಗೊಳಿಸಿರುವುದು ಸರಿಯಲ್ಲ ಎಂದರು.

1942ರಲ್ಲಿ ಮಹಾತ್ಮಗಾಂಧೀಜಿ, ನೆಹರು, ಲಾಲ್‌ಬಹದ್ದೂರ್ ಶಾಸ್ತ್ರಿ ನೇತೃತ್ವದಲ್ಲಿ ಸಹಸ್ರಾರು ಕಾಂಗ್ರೆಸ್ ನಾಯಕರು ‘ಬ್ರಿಟಿಷರೇ ಭಾರತದಿಂದ ತೊಲಗಿ’ ಎಂಬ ಘೋಷಣೆಯೊಂದಿಗೆ ಉಗ್ರ ಹೋರಾಟಕ್ಕೆ ಕರೆ ನೀಡಿದರು. ಭಾರತ ಬ್ರಿಟಿಷರ ಕಪಿಮುುಷ್ಠಿಯಿಂದ ಹೊರ ಬಂದು ಸ್ವಾತಂತ್ರ್ಯ ಪಡೆಯಬೇಕೆಂಬ ಪರಿಕಲ್ಪನೆಯಿಂದ ಹೋರಾಟ ತೀವ್ರಗೊಂಡು ಲಕ್ಷಾಂತರ ಮಂದಿ ಕಾಂಗ್ರೆಸ್ ಕಾರ್ಯಕರ್ತರು ಪ್ರಾಣ ತೆತ್ತರು. ಇದರ ಸ್ಮರಣಾರ್ಥ ನಾವು ಕ್ವಿಟ್‌ಇಂಡಿಯಾ ಚಳವಳಿಯಲ್ಲಿ ಪಾಲ್ಗೊಂಡ ನಾಯಕರ ತ್ಯಾಗ, ಬಲಿದಾನ ಸ್ಮರಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಸ್ವಾತಂತ್ರ್ಯ ಹೋರಾಟ ಸಂಗ್ರಾಮದಲ್ಲಿ ಕಾಂಗ್ರೆಸ್ ನಾಯಕರು ತನ್ನದೇ ಆದ ಕೊಡುಗೆ ನೀಡಿದ್ದಾರೆ. ದೇಶ ಇಬ್ಭಾಗವಾಗಲು ಹಿಂದೂಮಹಾಸಭಾ ಹಾಗೂ ಮುಸ್ಲಿಂ ಲೀಗ್ ನಾಯಕರೇ ಕಾರಣ, ಅವರಿಗೆ ಅಖಂಡ ಭಾರತದ ಪರಿಕಲ್ಪನೆ ಬಗ್ಗೆ ಯಾವುದೇ ಅರಿವು ಇರಲಿಲ್ಲ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವೆ ರಾಣಿ ಸತೀಶ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News