ನೆರೆ ಸಂತ್ರಸ್ತರ ಪರಿಹಾರವನ್ನು ನಿರ್ಲಕ್ಷಿಸಿದ ಸರಕಾರ: ಎಸ್‌ಡಿಪಿಐ

Update: 2019-08-10 16:26 GMT

ಬೆಂಗಳೂರು, ಆ.10: ರಾಜ್ಯದ 12 ಜಿಲ್ಲೆಗಳಲ್ಲಿ ಭಾರಿ ಪ್ರವಾಹದಿಂದ ಜನ ಕಂಗೆಟ್ಟಿರುವ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಸೂಕ್ತ ಸ್ಪಂದನೆ ಸಿಗದೇ ಇರುವುದು ಅತ್ಯಂತ ಖಂಡನೀಯ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಆರೋಪಿಸಿದ್ದಾರೆ.

ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ಬಿಜಾಪುರ ಮುಂತಾದ ಜಿಲ್ಲೆಗಳಲ್ಲಿ ನೂರಾರು ಗ್ರಾಮಗಳು ಜಲಾವೃತಗೊಂಡಿದ್ದು, ಅಲ್ಲಿನ ಜನರನ್ನು ಶಿಬಿರಗಳಿಗೆ ಸ್ಥಳಾಂತರಗೊಳಿಸಿರುವುದಾದರೂ ಅವರಿಗೆ ಸೌಲಭ್ಯಗಳನ್ನು ನೀಡದೆ ಅತ್ಯಂತ ದಯನೀಯ ಸ್ಥಿತಿಯಲ್ಲಿಟ್ಟಿರುವುದು ಅತ್ಯಂತ ಶೋಚನೀಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿರಾಶ್ರಿತರ ಶಿಬಿರಗಳಲ್ಲಿ ಮಕ್ಕಳು, ವೃದ್ಧರು, ಮಹಿಳೆಯರು, ಕುಡಿಯುವ ನೀರು, ಔಷಧಿಗಳಿಲ್ಲದೆ ಬವಣೆಗೊಳಗಾಗಿದ್ದಾರೆ. ಉಟ್ಟ ಬಟ್ಟೆಯಲ್ಲೆ ಮನೆ ಬಿಟ್ಟು ಬಂದ ಮಂದಿಗೆ ಬದಲಾಯಿಸಲು ಬಟ್ಟೆಗಳಿಲ್ಲದೆ ನಡುಗುವ ಚಳಿಯಿಂದಲೇ ದಿನ ದೂಡುತ್ತಿದ್ದಾರೆ. ಕಂಬಳಿಗಳನ್ನೂ ಒದಗಿಸಿಲ್ಲ. ಶಿಬಿರಗಳಲ್ಲಿರುವ ಶೌಚಾಲಯಗಳ ಸ್ವಚ್ಛತೆಯನ್ನು ನಿರ್ವಹಿಸುವ ವ್ಯವಸ್ಥೆ ಮಾಡಿಲ್ಲ ಎಂದು ಅವರು ದೂರಿದ್ದಾರೆ.

ಗಂಜಿ ನೀಡುವ ವ್ಯವಸ್ಥೆ ಸರಿಯಾದ ಸಮಯಕ್ಕೆ ಒದಗಿ ಬರುವುದಿಲ್ಲ. ಬಡ ಜನರನ್ನು ಈ ರೀತಿಯಲ್ಲಿ ಕಡೆಗಣಿಸುತ್ತಿರುವ ಸರಕಾರಗಳು ಇದ್ದು ಏನು ಪ್ರಯೋಜನ? ಜನತೆಯ ಗೋಳನ್ನು ಕೇಳಲು ಸರಕಾರಿ ಅಧಿಕಾರಿಗಳಾಗಲೀ, ಶಾಸಕ-ಸಚಿವರಾಗಲೀ ಇಲ್ಲದೆ ಕಾಣೆಯಾಗಿದ್ದಾರೆ. ಕೇವಲ ಫೋಟೋ ಹಾಕುವುದರಿಂದ ಅಥವಾ ಹೇಳಿಕೆ ನೀಡುವುದರಿಂದ ಜನತೆಗೆ ಯಾವ ಪ್ರಯೋಜನವೂ ಇಲ್ಲ ಎಂದು ಇಲ್ಯಾಸ್ ಮುಹಮ್ಮದ್ ತುಂಬೆ ಹೇಳಿದ್ದಾರೆ.

ಬಾಗಲಕೋಟೆ, ಬೆಳಗಾವಿ, ಉತ್ತರ ಕನ್ನಡ, ಶಿವಮೊಗ್ಗ, ಬಿಜಾಪುರ ಜಿಲ್ಲೆಗಳ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜನರ ರಕ್ಷಣೆ, ಸೇವೆ ಮಾಡುತ್ತಿರುವ ಎಸ್‌ಡಿಪಿಐ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರನ್ನು ಆಯಾಯ ಪ್ರದೇಶಗಳಲ್ಲಿ ಭೇಟಿಯಾದ ಇಲ್ಯಾಸ್ ಮುಹಮ್ಮದ್ ತುಂಬೆ, ರಾಜ್ಯ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ, ಯಾದಗಿರಿ ಜಿಲ್ಲಾಧ್ಯಕ್ಷ ಮುಹಮ್ಮದ್ ಖಾಲಿದ್ ಹಾಗೂ ಪಾಪ್ಯುಲರ್ ಫ್ರಂಟ್ ಇಂಡಿಯಾದ ರಾಜ್ಯ ಸಮಿತಿ ಸದಸ್ಯ ಶಾಹಿದ್ ನಾಸಿರ್ ಸೇರಿದಂತೆ ಇನ್ನಿತರರು ಅವರನ್ನು ಅಭಿನಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News