ಕೇಂದ್ರದಲ್ಲಿ ತಮ್ಮದೆ ಸರಕಾರವಿದ್ದರೂ 10 ಹೆಲಿಕಾಪ್ಟರ್ ತರಿಸಿಕೊಳ್ಳಲು ಆಗಲಿಲ್ಲ: ಕುಮಾರಸ್ವಾಮಿ ಟೀಕೆ

Update: 2019-08-10 16:47 GMT

ಬೆಂಗಳೂರು, ಆ. 10: ನಮ್ಮ ಸರಕಾರದ ಅವಧಿಯಲ್ಲಿ ಕೊಡಗು ಜಿಲ್ಲೆ ಪ್ರವಾಹ ಸಂದರ್ಭದಲ್ಲಿ 24 ಗಂಟೆಗಳಲ್ಲಿ ಹೆಲಿಕಾಪ್ಟರ್ ತರಿಸಿಕೊಂಡಿದ್ದೆವು. ಇದೀಗ 17 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದ್ದು ಕೇಂದ್ರದ ತಮ್ಮ ಗೃಹ ಸಚಿವರ ಜತೆ ಮಾತನಾಡಿ ಯಡಿಯೂರಪ್ಪನವರಿಗೆ 10 ಹೆಲಿಕಾಪ್ಟರ್ ತರಿಸಿಕೊಳ್ಳಲಾಗಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಟೀಕಿಸಿದ್ದಾರೆ.

ಶನಿವಾರ ಬೆಳಗಾವಿ ಜಿಲ್ಲೆಯ ಪ್ರವಾಹ ಪೀಡಿತ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಯಡಿಯೂರಪ್ಪ ಅವರು ಕೇಂದ್ರ ಸರಕಾರದ ಜೊತೆ ಸಮಾಲೋಚನೆ ನಡೆಸಿ ನಾಲ್ಕೈದು ಹೆಲಿಕಾಪ್ಟರ್ ತರಿಸಿಕೊಂಡಿದ್ದರೆ ಅನುಕೂಲ ಆಗುತ್ತಿತ್ತು ಎಂದು ಹೇಳಿದರು.

ಹೆಲಿಕಾಪ್ಟರ್‌ಗಳನ್ನು ಯಾರೂ ಉಚಿತವಾಗಿ ನೀಡುವುದಿಲ್ಲ. ಅದಕ್ಕೆ ಹಣವನ್ನು ನೀಡುತ್ತೇವೆ. ರಾಜ್ಯ ಸರಕಾರ ಅದರ ವೆಚ್ಚವನ್ನು ಭರಿಸಲಿದೆ ಎಂದ ಅವರು, ನಾನು ಸಿಎಂ ಯಡಿಯೂರಪ್ಪನವರನ್ನು ಟೀಕೆ ಮಾಡುವುದಿಲ್ಲ. ಆದರೆ, ಸಂಕಷ್ಟದಲ್ಲಿರುವ ಜನರ ನೆರವಿಗೆ ಸರಕಾರ ಕೂಡಲೇ ಧಾವಿಸಬೇಕು ಎಂದು ಆಗ್ರಹಿಸಿದರು.

ಹೊಸ ಬದುಕು ಕಟ್ಟಿಕೊಡಬೇಕು: ಪ್ರವಾಹ ಸಂತ್ರಸ್ತರಿಗೆ ಹೊಸ ಬದುಕನ್ನು ಕಟ್ಟಿಕೊಡುವ ಅಗತ್ಯವಿದೆ. ಆ ನಿಟ್ಟಿನಲ್ಲಿ ರಾಜ್ಯ ಸರಕಾರ ಕಾರ್ಯಪ್ರವೃತ್ತ ಆಗಬೇಕು ಎಂದ ಅವರು, ಕೊಡಗು ಜಿಲ್ಲೆಯಲ್ಲಿನ ಪ್ರವಾಸ ಸಂದರ್ಭದಲ್ಲಿ ನಮ್ಮ ಸರಕಾರ ಕೈಗೊಂಡ ಕ್ರಮಗಳ ಬಗ್ಗೆ ಸರಕಾರದ ಗಮನ ಸೆಳೆಯುತ್ತೇನೆ ಎಂದರು.

ಮುಖ್ಯಮಂತ್ರಿ ಯಡಿಯೂರಪ್ಪನವರು ವಿಪಕ್ಷಗಳನ್ನು ಕರೆದು ಅಭಿಪ್ರಾಯ ಕೇಳುವ ನಿರೀಕ್ಷೆ ಇತ್ತು. ಆದರೆ, ಅದು ಆಗಲಿಲ್ಲ. ರಾಜ್ಯದಲ್ಲಿ ಪೂರ್ಣ ಪ್ರಮಾಣದ ಸರಕಾರ ಇಲ್ಲದೆ ಇದ್ದರೂ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಅವರು ಇದೇ ವೇಳೆ ಶ್ಲಾಘಿಸಿದರು.

ಯಡಿಯೂರಪ್ಪ ಶ್ರಮಪಟ್ಟು ಸರಕಾರವನ್ನ ರಚನೆ ಮಾಡಿದ್ದಾರೆ. ಕೇಂದ್ರದಲ್ಲೂ ಬಿಜೆಪಿ ಸರಕಾರವಿದೆ. ರಾಜ್ಯದಲ್ಲೂ ಅವರದೆ ಸರಕಾರವಿದೆ. ಪ್ರಾಮಾಣಿಕವಾಗಿ ನೆರವು ನೀಡಬೇಕು. ಈ ಕುರಿತು ಕೇಂದ್ರಕ್ಕೆ ಪತ್ರ ಬರೆಯುತ್ತೇನೆ. ಸಾಧ್ಯವಾದರೆ ಪ್ರಧಾನಿ ಮೋದಿಯವರನ್ನು ಭೇಟಿ ಮಾಡುತ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದರು.

ಸರಕಾರ ಎಡವಿದೆ: ಆರಂಭದಲ್ಲಿ ಪ್ರವಾಹ ಸಂತ್ರಸ್ತರಿಗೆ ನೆರವಿಗೆ ಧಾವಿಸುವಲ್ಲಿ ರಾಜ್ಯ ಸರಕಾರ ಕೊಂಚ ಎಡವಿದೆ. ಈಗಲಾದರೂ ಎಚ್ಚೆತ್ತುಕೊಂಡು ಜನರ ನೆರವಿಗೆ ನಿಲ್ಲಬೇಕು. ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚಿನ ನೆರವು ನೀಡುವ ವಿಶ್ವಾಸವಿದೆ ಎಂದು ತಿಳಿಸಿದರು.

10 ಸಾವಿರ ಹೊದಿಕೆ: ಪ್ರವಾಹ ಸಂತ್ರಸ್ತರಿಗೆ ತಮಿಳುನಾಡಿನಿಂದ ಕೂಡಲೇ 10 ಸಾವಿರ ಹೊದಿಕೆಗಳನ್ನು ತರಿಸಿ ವಿತರಿಸುವೆ. ಅಲ್ಲದೆ, ಸಂತ್ರಸ್ತರಿಗೆ ಅಗತ್ಯ ನೆರವು ನೀಡಲಾಗುವುದು. ಪರಿಸ್ಥಿತಿ ನಿಭಾಯಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಕುಮಾರಸ್ವಾಮಿ ಹೇಳಿದರು.

ಜನರ ಸಂಕಷ್ಟಗಳಿಗೆ ಎಲ್ಲ ರೀತಿಯಲ್ಲೂ ನೆರವಾಗಬೇಕು. ಮೂರು ದಿನಗಳಿಂದ ಅನಾರೋಗ್ಯ ನನ್ನನ್ನು ಬಾಧಿಸಿದ್ದು, ಹೀಗಾಗಿ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ನೆರೆಹಾವಳಿ ಪ್ರದೇಶಗಳಿಗೆ ತಡವಾಗಿ ಭೇಟಿ ನೀಡಿದ್ದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅವಶ್ಯಕತೆಯಿಲ್ಲ ಎಂದರು.

‘ವಿಪಕ್ಷಗಳ ಶಾಸಕರು ರಾಜೀನಾಮೆ ನೀಡಿದ್ದರಿಂದಲೇ ಮುಖ್ಯಮಂತ್ರಿ ಆಗಿರುವ ಯಡಿಯೂರಪ್ಪನವರು ಇದೀಗ ಕೆಲಸ ಮಾಡಲಿ. ಯಡಿಯೂರಪ್ಪನವರಿಗೆ ವಯಸ್ಸಿನ ಸಮಸ್ಯೆಗಳಿರಬಹುದು. ಆದರೆ, ಅವರಿಗೆ ಸಂಪುಟವೇ ಇಲ್ಲ. ನುರಿತ ಅಧಿಕಾರಿಗಳಿಂದ ಮಾಹಿತಿ ಪಡೆದು ಜನರ ಸಮಸ್ಯೆಗಳಿಗೆ ಸ್ಪಂದಿಸಲಿ’

-ಎಚ್.ಡಿ.ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News