ಈ ಶ್ರಾವಣ ಮುಗಿಯದಿರಲಿ...

Update: 2019-08-11 06:16 GMT

ಚೆಂದಗೆ ಹಾಡಿಕೊಳ್ಳುತ್ತಿದ್ದ ಅವಳು, ಕಿರಾಣಿ ಅಂಗಡಿಯ ಅವನು, ಮಧ್ಯೆ ‘ಇಂತಿ ಪ್ರೀತಿಯ ನಿನ್ನವಳು’ ಎಂದು ಪ್ರೇಮ ಪತ್ರ ಬರೆದುಕೊಡುತ್ತಿದ್ದ ನಾನು... ಅವಳ ಹಾಡಿಗೆ ಅವನು ಮನಸೋತನಾ? ಉಳಿದಿರುವ ಒಂದು ರೂಪಾಯಿಯನ್ನೂ ಮರಳಿಸುತ್ತಿದ್ದ ಅವನ ಪ್ರಾಮಾಣಿಕತೆಗೆ ಅವಳು ಮನಸೋತಳಾ? ಅಥವಾ ಪಿಸುಗುಡುವ ಹರೆಯ ಸಂಗಾತಿ ಬೇಕೆಂದು ದಂಬಾಲು ಬಿದ್ದಿತ್ತೋ? ಎಂದೆಲ್ಲಾ ಯೋಚನೆಗೆ ಬೀಳುವ ಮುನ್ನವೇ ಇಡೀ ಹೈಸ್ಕೂಲ್ ಅವರಿಬ್ಬರನ್ನು ಪ್ರೇಮಿಗಳೆಂದು ಘೋಷಿಸಿಬಿಟ್ಟಿತ್ತು.

ಆಷಾಢದ ಆರ್ಭಟ ಕಳೆದು ಜಿಟಿಜಿಟಿ ಹನಿವ ಮಳೆಯೊಂದಿಗೆ ಶ್ರಾವಣ ಆಪ್ತವಾಗಿ ಹೆಗಲು ಬಳಸಿ ಎದೆಯೊಳಗಿಳಿದಂತೆ ಅವರಿಬ್ಬರು ಕಾಡತೊಡಗುತ್ತಾರೆ; ಹಾಲುಗಲ್ಲದ ಮಗುವೊಂದು ಈಗಷ್ಟೇ ತೇಲಿಬಿಟ್ಟ ಕಾಗದದ ದೋಣಿಯಂತೆ. ಈ ಮೊಬೈಲ್, ಲ್ಯಾಪ್‌ಟಾಪ್, ಇಂಟರ್ನೆಟ್, ಫೇಸ್‌ಬುಕ್, ವಾಟ್ಸ್‌ಆ್ಯಪ್, ದಂಡಿಯಾಗಿ ಹರಿದು ಬರುವ ಟ್ರೋಲ್‌ಗಳು, ಯಾರದೋ ಬೆಡ್‌ರೂಮಿನಲ್ಲಿ ಕದ್ದು ಇಟ್ಟ ಕ್ಯಾಮರಾದ ಕಣ್ಣುಗಳಲ್ಲಿ ಸೆರೆಯಾದ ಸಾವಿರ ಸಾವಿರ ವೀಡಿಯೊಗಳು, ಪ್ರೈವಸಿಯ ಹೆಸರಲ್ಲೇ ಹರಾಜಾಗುತ್ತಿರುವ ಖಾಸಗಿತನ... ಎಲ್ಲವನ್ನೂ ನಿವಾಳಿಸಿ ಅರಬ್ಬೀ ಕಡಲಿಗೆಸೆದು ಸುಮ್ಮನೆ ಈ ಮಳೆಯಲಿ, ನೆನಪಲಿ ಕಳೆದುಹೋಗಬೇಕು ಅನ್ನಿಸುತ್ತಿರುತ್ತದೆ.

ಕುತ್ತಿಗೆಗೊಂದು, ಸೊಂಟಕ್ಕೊಂದು ಮೊಬೈಲನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲದ ಮಧ್ಯಮ ತರಗತಿಯ ಆ ಬದುಕು, ನಡುಮನೆಯಲ್ಲಿ ವೀರಾಜಮಾನವಾಗಿರುವ ಲ್ಯಾಂಡ್‌ಫೋನ್, ಅದಕ್ಕೊಂದು ಸ್ಟ್ಯಾಂಡ್, ಚಂದದ ಹಿಡಿಕೆ, ಪಕ್ಕದಲ್ಲಿ ಕುಳಿತುಕೊಳ್ಳಲು ಅನುವಾಗುವಂತೆ ಒಂದು ಪುಟ್ಟ ಸ್ಟೂಲ್... ಫೋನ್ ಒಮ್ಮೆ ರಿಂಗಾಯಿತೆಂದರೆ ಸಾಕು ಮನೆಯಲ್ಲಿನ ಅಷ್ಟೂ ಮಂದಿಯ ಕಿವಿಗಳು ನೆಟ್ಟಗಾಗುತ್ತಿದ್ದವು. ಹೊರದೇಶದಲ್ಲಿ ದುಡಿಯುತ್ತಿದ್ದ ಚಿಕ್ಕಪ್ಪಂದಿರೋ, ಆಗಾಗ ವರ್ಗವಾಗಿ ದೇಶ ಸುತ್ತುತ್ತಿದ್ದ ಮಾವಂದಿರೋ ಅಪರೂಪಕ್ಕೆ ಕರೆ ಮಾಡುತ್ತಿದ್ದರು ಅಷ್ಟೇ. ಆದರೆ ನಾವು ಹೈಸ್ಕೂಲ್ ಮೆಟ್ಟಿಲು ಹತ್ತುತ್ತಿದ್ದಂತೆ ಗೆಳೆಯರ ಬಳಗ, ಪೋನ್‌ನ ರಿಂಗ್ ಮತ್ತು ಫೋನ್ ಬಿಲ್ ಮೂರೂ ಒಮ್ಮೆಲೆ ಹೆಚ್ಚಾಯಿತು. ಅವರಿವರ ಪ್ರೇಮ ಪ್ರಕರಣಗಳು ನಮ್ಮನೆಯ ಫೋನಿನಲ್ಲಿ ರಿಂಗಣಿಸತೊಡಗಿದವು.

ಆದರೆ ಎಲ್ಲರ ಮುಂದೆಯೇ ಮಾತನಾಡಬೇಕಾದ ಅನಿವಾರ್ಯತೆ ನನ್ನನ್ನು ವಿಚಿತ್ರ ಪೀಕಲಾಟಕ್ಕೆ ತಳ್ಳುತ್ತಿತ್ತು. ಹೊತ್ತು ಗೊತ್ತಿಲ್ಲದೆ ಕರೆ ಮಾಡುವ ಗೆಳತಿ ಪಿಸ ಪಿಸ ಮಾತಾಡುತ್ತಿದ್ದರೆ ನಾನಲ್ಲಿ ನಡುಮನೆಯಲ್ಲಿ ಕಾಲುಚಾಚಿ ಕೂತು ಪೇಪರ್ ಓದುತ್ತಿದ್ದ ಅಜ್ಜನ ಮುಂದೆ ಮಾತಾಡಬೇಕಿತ್ತು. ಅವಳಿಗೋ ಅವಳ ಪ್ರೇಮದ ಸಣ್ಣ ಪುಟ್ಟ ಅಪ್ಡೇಟ್‌ಗಳನ್ನೂ ನನಗೆ ತಲುಪಿಸುವ ಉಮೇದು, ನನಗೆ ಯಾರಿಗೂ ಸಣ್ಣ ಸುಳಿವೂ ಸಿಗದಂತೆ ನಾಜೂಕಾಗಿ ಹೂಂಗುಟ್ಟಬೇಕಾದ ಅನಿವಾರ್ಯತೆ.

ಕೋಗಿಲೆ ಕಂಠದ ಹುಡುಗಿ ಮತ್ತು ಕಿರಾಣಿಯ ಹುಡುಗ ಪ್ರೀತಿಸುತ್ತಿದ್ದಾರೆನ್ನುವುದೇ ದೊಡ್ಡ ಪುಳಕ ನನಗೆ. ಅಂಥದ್ದರಲ್ಲಿ ಒಂದು ಸಂಜೆ ಅವನು ಹತ್ತಿರ ಬಂದು ನಾಗರ ಪಂಚಮಿಯಂದು ಸಿಗುತ್ತೇನೆ, ಹಸಿರು ಸೀರೆ ಉಟ್ಟು ಬಾ ಎಂದು ನಮ್ಮಿಬ್ಬರಿಗೆ ಮಾತ್ರ ಕೇಳಿಸುವಂತೆ ಹೇಳಿ ಸಂತೆಯಲ್ಲಿ ಮಾಯವಾಗಿದ್ದ. ಅವಳು ನಿಂತಲ್ಲೇ ನಾಚಿ ನೀರಾಗಿದ್ದರೆ ನನಗೆ ಅವನ ಮೇಲೆ ತೀರದ ಬೆರಗೊಂದು ಹುಟ್ಟಿಬಿಟ್ಟಿತ್ತು. ಆ ನಾಗರ ಪಂಚಮಿಯಂದು ನನಗೆ ನಿಂತರೂ ಕೂತರೂ ಅವರದೇ ಧ್ಯಾನ. ಭೇಟಿಯಾಗಿರಬಹುದೇ? ಮಾತಾಡಿಸಿರಬಹುದೇ? ಅವಳಂದುಕೊಂಡಂತೆ ಇಬ್ಬರೂ ಒಟ್ಟಿಗೆ ನಾಗನಿಗೆ ಹಾಲೆರೆದಿರಬಹುದೇ? ಹೀಗೆ ತರಹೇವಾರಿ ಪ್ರಶ್ನೆಗಳು, ಮುಗಿಯದ ಕುತೂಹಲ. ಅದಕ್ಕೆ ಸರಿಯಾಗಿ ಅವತ್ತಿಡೀ ಅವಳ ಫೋನಿಲ್ಲ. ಕಾಯಿನ್ ಬಾಕ್ಸ್ ಕೈ ಕೊಟ್ಟಿತ್ತೋ ಅಥವಾ ಅವಳೇ ಫೋನ್ ಮಾಡಲು ಮರೆತಳೋ ಒಂದೂ ಗೊತ್ತಾಗುತ್ತಿರಲಿಲ್ಲ.

ಮರುದಿನ ಶಾಲೆಯಲ್ಲಿ, ಅವಳು ಸೀರೆ ಉಟ್ಟದ್ದನ್ನೂ, ಉಡುವುದಕ್ಕೂ ಮೊದಲ ಬಚ್ಚಲು ಮನೆಯಲ್ಲಿ ಜಾರಿ ಬಿದ್ದದನ್ನೂ, ಒಟ್ಟಿಗೆ ಹಾಲೆರದದ್ದನ್ನೂ, ಎಲ್ಲರ ಕಣ್ಣು ತಪ್ಪಿಸಿ ಅಲ್ಲೆಲ್ಲೋ ಕೂತು ಇಬ್ಬರೂ ಮಾತಾಡಿಕೊಂಡದ್ದನ್ನೂ ಸಂಭ್ರಮದಿಂದ ಹೇಳುತ್ತಾ ಹೇಳುತ್ತಾ ಕಣ್ಣುತುಂಬಿಕೊಂಡಳು. ಅರೆ! ಇವಳಿಗೇನಾಯ್ತು ಅಂತ ನಾನು ಅಚ್ಚರಿ ಪಡುತ್ತಿದ್ದಂತೆ ಅವಳೇ ಗುಟ್ಟು ಹೇಳುವಂತೆ ನನ್ನ ಕಿವಿ ಪಕ್ಕ ಬಂದು ಅವನು ಕತ್ತಿನ ಪಕ್ಕ ನನ್ನ ಹೆಸರಿನ ಹಚ್ಚೆ ಹಾಕಿಸಿಕೊಂಡಿದ್ದಾನೆ ಕಣೇ ಅಂದಳು. ಹರೆಯದ ಪ್ರೀತಿ ಇಷ್ಟು ಉತ್ಕಟವಾಗಿರುತ್ತಾ ಅಂತ ನಾನು ಮತ್ತಷ್ಟು ಅಚ್ಚರಿಗೊಳಗಾಗುತ್ತಿದ್ದಂತೆ ಅವಳು ಕಣ್ಣೊರೆಸಿಕೊಂಡು ಬಾ ಹೊತ್ತಾಯಿತು, ಅಂಗಡಿಯ ಹತ್ತಿರ ಹೋಗಿ ಅವನನ್ನೊಮ್ಮೆ ನೋಡಿ ಕೊಂಡು ಬರುವ ಅಂದಳು. ಮೌನವಾಗಿ ಅವಳನ್ನು ಹಿಂಬಾಲಿಸಿದೆ. ಅವರಿಬ್ಬರಲ್ಲಿ ಜಗದ ಪರಿವೆ ಇಲ್ಲದೆ ಮಾತಾಡಿಕೊಳ್ಳುತ್ತಿದ್ದರೆ ನನ್ನ ಕಣ್ಣೊಳಗೆ ಕೃಷ್ಣ-ರಾಧೆಯರ ಬಿಂಬ ಮತ್ತಷ್ಟು ಗಟ್ಟಿಯಾಗಿ ದಾಖಲಾಗುತ್ತಿತ್ತು.

ಇಲ್ಲೀಗ ಈ ರಾತ್ರಿಯ ನೀರವತೆಯಲ್ಲಿ ತೆರೆದಿಟ್ಟ ಕಿಟಕಿಯಿಂದ ಸುಳಿಯುತ್ತಿರುವ ಶೀತಲ ಗಾಳಿ ಕದಪುಗಳನ್ನು ಸವರಿ ಕಿವಿಯ ಪಕ್ಕದಲ್ಲಿ ಅಂತರ್ಧಾನವಾಗುತ್ತಿರುವಾಗ ‘ಭಗವಂತಾ ಈ ವರ್ಷದ ಶ್ರಾವಣ ಮುಗಿಯದಿರಲಿ’ ಎಂದು ಮನಸ್ಸು ಆರ್ದ್ರವಾಗುತ್ತಿದೆ. ರಪ್ಪನೆ ಮುಖಕ್ಕೆ ರಾಚುವ ಮಳೆ ಹನಿಗಳು, ಗೋಡೆಗೆ ಹಬ್ಬಿಕೊಂಡಿರುವ ಮಲ್ಲಿಗೆ ಬಳ್ಳಿ, ಅಲ್ಲೆಲ್ಲೋ ಪುಟ್ಟ ಬಂಡೆ ಕಲ್ಲಿನ ಮೇಲೆ ಕೂತು ವಟಗುಟ್ಟುವ ಕಪ್ಪೆ, ಪಕ್ಕದಲ್ಲೇ ಇದ್ದಿರಬಹುದಾದ ಕೇರೆ ಹಾವಿನ ಹೊಯ್ದೆಟ, ಪಟ ಪಟ ರೆಕ್ಕೆ ಬಡಿಯುವ ತುಂಟ ತರಗೆಲೆಗಳು, ಆಗೊಮ್ಮೆ ಈಗೊಮ್ಮೆ ಬಂದು ಹೋಗೋ ಮಿಂಚು, ದೂರದಲ್ಲೇಲ್ಲೋ ಸಣ್ಣಗೆ ಮೊರೆಯುವ ಗುಡುಗು... ವರ್ಚುವಲ್ ಜಗತ್ತಿಗಾಚೆಗಿನ ಬದುಕು ನಿಜಕ್ಕೂ ರಮ್ಯ ಅನ್ನಿಸಿಬಿಡುವ ಹೊತ್ತಿಗೆ ಮತ್ತೆ ಅವರಿಬ್ಬರು ದಾಗುಂಢಿಯಿಡುತ್ತಾರೆ.

ಹೈಸ್ಕೂಲ್ ಮುಗಿದು ನಾನು ಪಿಯುಸಿಗೆಂದು ಪಕ್ಕದೂರಿನ ಕಾಲೇಜಿಗೆ ದಾಖಲಾದರೆ, ಆಕೆ ಪಟ್ಟಣದ ಹಾಸ್ಟೆಲ್ ಸೇರಿದ್ದಳು. ಅವನು ಆಗಾಗ ಅವಳನ್ನು ನೋಡಿಕೊಂಡು ಬರುತ್ತಿದ್ದ. ನನ್ನ ಕೈಗೆ ಮೊಬೈಲ್, ಅವಳ ಬದುಕು ಪಟ್ಟಣಕ್ಕೆ ಹೊಂದಿಕೊಂಡಂತೆ ನಮ್ಮಿಬ್ಬರ ನಡುವಿನ ಸಂಪರ್ಕ, ಆತ್ಮೀಯತೆ ತಪ್ಪಿ ಹೋಯಿತು. ನಾನು ಬದುಕಿನ ಬ್ಯುಸಿಯ ನೆಪ ಹೇಳಿ, ಅವಳು ಮತ್ತಿನ್ಯಾವುದೋ ನೆಪ ಹೇಳಿ ನಮ್ಮನ್ನು ನಾವೇ ಸುಳ್ಳೇ ಸುಳ್ಳು ನಂಬಿಸಿ ನಮ್ಮದೇ ಬದುಕಲ್ಲಿ ವ್ಯಸ್ತರಾಗಿಬಿಟ್ಟೆವು. ನಡುವೆ ಅವರಿಬ್ಬರ ಸಂಬಂಧ ಯಾವ ಗಳಿಗೆಯಲ್ಲಿ ತಂತು ಹರಿದುಕೊಂಡಿತೋ ಗೊತ್ತಿಲ್ಲ. ತೇಲಿಬಿಟ್ಟ ದೋಣಿ ಮಧ್ಯದಲ್ಲೆಲ್ಲೋ ಗಿಡಗಂಟಿಗೆ ಸಿಕ್ಕಿಹಾಕಿಕೊಂಡಿತೋ, ದೋಣಿಯ ಆಯುಷ್ಯ ಅಷ್ಟೇ ಇತ್ತೋ ಅಥವಾ ದಾಟಿಸುವ ಜವಾಬ್ದಾರಿ ಹೊತ್ತ ನೀರೇ ಅದನ್ನು ಮುಳುಗಿಸಿತೋ, ಒಟ್ಟಿನಲ್ಲಿ ದೋಣಿ ಮಾತ್ರ ಅರ್ಧದಲ್ಲೇ ಬದುಕು ಮುಗಿಸಿಕೊಂಡಿತು. ನನಗದೊಂದೂ ಗೊತ್ತೇ ಆಗಲಿಲ್ಲ, ನನ್ನ ಪ್ರಜ್ಞೆಯಲ್ಲಿ ಅವರಿಬ್ಬರು ಆಗಲೂ ರಾಧಾಕೃಷ್ಣರಂತೆಯೇ ಇದ್ದುಬಿಟ್ಟಿದ್ದರು.

ಆದರೆ ಒಂದು ಅರೆಗತ್ತಲಿನ ಮುಸ್ಸಂಜೆಯಲ್ಲಿ, ಆಷಾಢಕ್ಕೂ ಶ್ರಾವಣಕ್ಕೂ ವ್ಯತ್ಯಾಸವೇ ಗೊತ್ತಾಗದಷ್ಟು ಯಾಂತ್ರೀಕೃತವಾಗಿದ್ದೇನೆ ಅನ್ನಿಸಿ ಬರ್ಬರ ಒಂಟಿತನವೊಂದು ಮೆಲ್ಲ ಮೆಲ್ಲನೆ ಆವರಿಸಿಕೊಳ್ಳುತ್ತಿದ್ದಂತೆ ಪಕ್ಕನೆ ಜ್ಞಾನೋದಯವಾದಂತೆ, ’ಅವಳನ್ನು ಹುಡುಕಬೇಕು, ಆತ್ಮಕ್ಕಂಟಿಕೊಂಡಂತೆ ಕೂತು ನಿಂಬೀಯಾ ಬನಾದ ಮ್ಯಾಗಳ ಹಾಡಿಸಬೇಕು’ ಅನ್ನಿಸಲಾರಂಭಿಸಿ ಅವಳನ್ನು ಹುಡುಕಲು ಶುರುವಿಟ್ಟುಕೊಂಡೆ. ಅದೇ ವರ್ಷದ ಶ್ರಾವಣದ ಒಂದು ಮಧ್ಯಾಹ್ನ ಅಚಾನಕ್ಕಾಗಿ, ಹಸಿರು ಗದ್ದೆಯ ಮಧ್ಯದಲ್ಲೆಲ್ಲೋ ಒಂಟಿ ಕಾಲಿನಲ್ಲಿ ಧ್ಯಾನ ಮಾಡುವ ಕೊಕ್ಕರೆಯಂತೆ ಮನೆಗೇ ಬಂದು ನನ್ನ ಅವಳು ತಬ್ಬಿಕೊಂಡಳು.

ಅವಳ ಹಾಡು, ಅವಳ ಘಮ, ಕ್ಯಾನವಾಸಿನ ಮೇಲೆ ಮನಬಂದಂತೆ ಚೆಲ್ಲಿರುವ ಅಸಂಖ್ಯಾತ ಬಣ್ಣಗಳು, ಯಾವತ್ತೋ ಓದಿದ ಕವಿತೆಯೊಂದರ ಪುಟ್ಟ ಸಾಲಿನಂತಹ ಸ್ನೇಹ, ಒಂದಿಡೀ ಬದುಕು, ಅವನ ನೆನಪು ಎಲ್ಲಾ ಒಟ್ಟಾಗಿ ದೂರದ ಬೆಟ್ಟದಲ್ಲಿ ಶ್ರಾವಣ ಮತ್ತಷ್ಟು ಚೆಂದಗೆ ನಗುತ್ತಿದೆ. ಈ ಕ್ಷಣಕ್ಕೆ ನನ್ನ ಪ್ರಾರ್ಥನೆಯೊಂದೇ...

ಭಗವಂತಾ ಈ ಶ್ರಾವಣ ಮುಗಿಯದಿರಲಿ...

Writer - ಫಾತಿಮಾ ರಲಿಯಾ

contributor

Editor - ಫಾತಿಮಾ ರಲಿಯಾ

contributor

Similar News