ಮಕ್ಕಳ ಸುಳ್ಳಿನ ಪ್ರಪಂಚ

Update: 2019-08-11 07:07 GMT

ಕಲಿಕೆಯೆಂಬ ಪ್ರಕ್ರಿಯೆ

ಭಾಗ-33

ಮಕ್ಕಳಲ್ಲಿ ಸುಳ್ಳಿನ ಹುಟ್ಟಿಗೆ ಹಲವು ಕಾರಣಗಳಿರುತ್ತವೆ ಮತ್ತು ಆ ಸುಳ್ಳುಗಳು ವ್ಯಕ್ತವಾಗುವುದರಲ್ಲಿ ಹಲವು ಆಯಾಮಗಳಿರುತ್ತವೆ. ಹಾಗಾಗಿ ಎಲ್ಲಾ ಮಕ್ಕಳ ಸುಳ್ಳುಗಳ ಹಿಂದಿನ ಕಾರಣಗಳು ಒಂದೇ ಆಗಿರುವುದಿಲ್ಲ. ಆದರೂ ಸಾಮಾನ್ಯೀಕರಿಸಿ ಒಂದಷ್ಟು ಭಾಗಗಳನ್ನಾಗಿ ಮಾಡಬಹುದು.

ಶಿಕ್ಷೆಯ ಭಯ

ಶಿಕ್ಷೆಯ ಭಯದಿಂದ ಸುಳ್ಳು ಹೇಳುವುದು ಸಣ್ಣ ಮಕ್ಕಳಲ್ಲೇನು, ದೊಡ್ಡವರಲ್ಲಿಯೂ ಕೂಡಾ ಸರ್ವೇ ಸಾಮಾನ್ಯ. ಮಕ್ಕಳ ವಿಷಯದಲ್ಲಿ ಶಿಕ್ಷೆಯ ಭಯದಿಂದ ರೂಢಿಯಾಗುವ ಸುಳ್ಳುಗಳು ಮುಂದೆ ಇತರರನ್ನು ವೃಥಾ ದೂರುವುದಕ್ಕೂ ಮುಂದುವರಿಯುತ್ತದೆ. ತಮ್ಮೆಲ್ಲಾ ತಪ್ಪುಗಳನ್ನು ಇತರರ ಮೇಲೆ ಹಾಕಿಯೋ ಅಥವಾ ಇತರರ ಕಾರಣದಿಂದ ತಾವು ಹೀಗೆ ಮಾಡಿದ್ದೇವೆಯೇ ಹೊರತು ತಾವು ತಪ್ಪನ್ನು ಮಾಡಿಯೇ ಇಲ್ಲ ಎನ್ನುವಂತೆಯೋ ಮಕ್ಕಳು ವಾದಿಸಲು ಯತ್ನಿಸುತ್ತಿರುತ್ತಾರೆ. ಶಿಕ್ಷೆಯ ಭಯದಿಂದ ಆಗುವ ಅನಾಹುತಗಳನ್ನು ನೋಡಿ.

1.ಮಗುವಿಗೆ ಪ್ರಾಮಾಣಿಕತೆಯನ್ನು ರೂಢಿಸಿಕೊಳ್ಳಲೇ ಆಗದು.

2.ಸದಾ ಇತರರ ಮೇಲೆ ತಪ್ಪನ್ನು ಹಾಕುವ, ದೂರುವ ಅಥವಾ ತನ್ನ ಕೃತ್ಯಕ್ಕೆ ಇನ್ನಾರೋ ಕಾರಣ ಎನ್ನುವ ಬೇಜವಾಬ್ದಾರಿತನವು ರೂಢಿಯಾಗುತ್ತದೆ.

3.ತನಗೆ ಆಗುವ ಶಿಕ್ಷೆಯು ಬೇರೆಯವರಿಗೆ ಆಗಲಿ, ತಾನು ಅದರಿಂದ ತಪ್ಪಿಸಿಕೊಳ್ಳುವಂತಾಗಲಿ ಎಂಬ ಮನಸ್ಥಿತಿಯು ಬೆಳೆದು ಇತರಿಗೆ ಕೇಡನ್ನು ಬಯಸುವಂತಹ ಮನೋಭಾವದ ರೂಢಿಯಾಗುತ್ತದೆ.

4.ಮಗುವು ಪಶ್ಚಾತ್ತಾಪ, ಕ್ಷಮಾಯಾಚನೆ, ಪ್ರಾಯಶ್ಚಿತ ಇತ್ಯಾದಿ ವೌಲ್ಯಗಳಿಂದ ದೂರವಾಗುತ್ತಾ ಹೋಗುತ್ತದೆ.

5.ಮಾಡುವ ತಪ್ಪನ್ನು ಮಾಡಬಹುದು. ಆದರೆ ಶಿಕ್ಷೆಗೆ ಒಳಗಾಗದಂತೆ ಎಚ್ಚರವಹಿಸಬೇಕು ಎಂಬಂತಹ ಕಿಲಾಡಿತನವನ್ನು ಬೆಳೆಸಿಕೊಳ್ಳುತ್ತದೆ.

6.ಶಿಕ್ಷೆ ಎಂಬುದು ದೊರಕಿದಾಗ ಬಹುಪಾಲು ವ್ಯಕ್ತಿಗಳಲ್ಲಿ ತಪ್ಪನ್ನು ಮಾಡಿರುವ ಬಗ್ಗೆಗಿಂತಲೂ ಸಿಕ್ಕಿ ಹಾಕಿಕೊಂಡದ್ದರೆ ಬಗ್ಗೆ ವಿಷಾದವಿರುತ್ತದೆ. ಇದು ಮಕ್ಕಳ ವಿಷಯದಲ್ಲಿಯೂ ಸತ್ಯ.

7.ಪ್ರಾಮಾಣಿಕತೆಯನ್ನು ಬೆಳೆಸುವುದರಲ್ಲಿ ಶಿಕ್ಷೆಯು ಯಾವ ರೀತಿಯೂ ಸಹಕಾರಿಯಾಗದು.

ಮಗುವು ಯಾವುದೋ ಒಂದು ವಸ್ತುವನ್ನು ಮುರಿದು ಹಾಕಿಬಿಟ್ಟಿತೆಂದಿಟ್ಟುಕೊಳ್ಳಿ. ಅದಕ್ಕೆ ಪ್ರತಿಯಾಗಿ ನೀವು ಶಿಕ್ಷೆ ಕೊಟ್ಟರೆ ತಾನು ಶಿಕ್ಷೆ ಅನುಭವಿಸಿದ ಕೋಪ ಮತ್ತು ನೋವು ಅದರಲ್ಲಿ ಗುಪ್ತವಾಗಿಯೇ ಉಳಿದಿರುತ್ತದೆ. ಯಾವಾಗಲಾದರೂ ಅಥವಾ ಎಂತಹದ್ದಾದರೂ ಸಂದರ್ಭದಲ್ಲಿ ಇನ್ನು ತಾನು ಸಿಕ್ಕಿ ಹಾಕಿಕೊಳ್ಳುವುದಿಲ್ಲ ಅಥವಾ ಶಿಕ್ಷೆಗೆ ಒಳಗಾಗುವ ಸಾಧ್ಯತೆಗಳಿಲ್ಲ ಎಂದು ಅದಕ್ಕೆ ಖಚಿತವಾಗಿದ್ದರೆ, ಆ ಬಗೆಯ ವಸ್ತುಗಳನ್ನು ಅಥವಾ ಶಿಕ್ಷೆಗೆ ಕಾರಣರಾದವರ ಮತ್ತು ಶಿಕ್ಷೆ ಕೊಟ್ಟವರ ವಸ್ತುಗಳನ್ನು ಘನಘೋರವಾಗಿ ಧ್ವಂಸ ಮಾಡಿ ತಾನು ವಿಜಯಿಯಾದೆನೆಂಬ ಭಾವದಲ್ಲಿ ತೃಪ್ತಿಪಡುತ್ತದೆ. ಶಿಕ್ಷೆ ಎಂಬುದು ನೀಡುವವರ ದೃಷ್ಟಿಯಲ್ಲಿ ಪ್ರಾಯಶ್ಚಿತವೇ ಹೊರತು ಅದು ಎಂದಿಗೂ ಪಡೆಯುವವರ ಪಶ್ಚಾತ್ತಾಪವಾಗುವುದಿಲ್ಲ. ಪ್ರಾಮಾಣಿ ಕತೆಯೇ ಪಶ್ಚಾತ್ತಾಪದ ಮೂಲ. ಅದರಲ್ಲಿಯೂ ಮಗುವಿಗೆ ಶಿಕ್ಷೆ ಎಂಬುದು ಯಾವ ರೀತಿಯಲ್ಲಿಯೂ ಪ್ರಾಮಾಣಿಕತೆಯನ್ನು ಕಲಿಸದು.

ಶಾಲೆಯಲ್ಲಿ ಅಥವಾ ಎಲ್ಲಿಯಾದರೂ ಕಲಿಕೆಯ ಕೇಂದ್ರದಲ್ಲಿ ಬಲಶಾಲಿಯಾದ ಮತ್ತು ಒರಟ ವಿದ್ಯಾರ್ಥಿ ಮಗುವೊಂದು ಮತ್ತೊಂದು ಮೃದು ಸ್ವಭಾವದ ಮಗುವಿಗೆ ಹಿಂಸೆಯನ್ನೋ ಅಥವಾ ಕಿರುಕುಳವನ್ನೋ ಕೊಟ್ಟಿತ್ತೆಂದಿಟ್ಟುಕೊಳ್ಳಿ. ಆ ಒರಟ ಮಗುವಿಗೆ ತರಬೇತಿದಾರರು ಅಥವಾ ಶಿಕ್ಷಕರು ಅಥವಾ ಪಾಲಕರು ಶಿಕ್ಷೆಯನ್ನು ಕೊಟ್ಟು ಇನ್ನೊಮ್ಮೆ ಆ ದುರ್ಬಲ ಅಥವಾ ಮೆತ್ತನೆಯ ಸ್ವಭಾವದ ಮಗುವಿನ ತಂಟೆಗೆ ಹೋಗದಿರುವಂತೆ ಎಚ್ಚರಿಕೆ ಕೊಟ್ಟಿರೆಂದುಕೊಳ್ಳಿ, ಅದು ಯಾವ ರೀತಿಯಲ್ಲಿಯೂ ಆ ಒರಟ ಹುಡುಗನಿಗೆ ಆ ಮತ್ತೊಂದು ಮಗುವಿನ ಬಗ್ಗೆ ಒಳ್ಳೆಯ ಅಭಿಪ್ರಾಯವೋ, ಅಥವಾ ಅನುಕಂಪವೋ ಖಂಡಿತ ಮೂಡುವುದಿಲ್ಲ. ಆ ಮಗುವಿನ ತಂಟೆಗೆ ಹೋಗಬೇಡ ಎಂದು ಒಡ್ಡುವ ಭಯವು ಅವನಲ್ಲಿ ದಯೆಯನ್ನು ಉಂಟುಮಾಡುವುದಿಲ್ಲ. ಎರಡೂ ಮಕ್ಕಳೇ. ಅವುಗಳು ಅವುಗಳ ಸ್ವಭಾವವನ್ನು ವ್ಯಕ್ತಪಡಿಸುತ್ತವೆ. ಒರಟ ಹುಡುಗನ ಮನಸ್ಸಿಗೆ ಆಪ್ತರಾಗದೇ, ಅವನ ಹೃದಯವನ್ನು ಆರ್ದ್ರಗೊಳಿಸದೇ ಹಿರಿಯರು ಯಾವ ರೀತಿಯಲ್ಲಿಯೂ ಅವನ ಬದಲಾಯಿಸುವಲ್ಲಿ ಯಶಸ್ವಿಯಾಗುವುದಿಲ್ಲ. ಶಿಕ್ಷೆಯ ಭಯ ಸುಳ್ಳಿನ ಕಾರಣ ಮಾತ್ರವಲ್ಲ, ಪುಟಿದೇಳುವ ನಕಾರಾತ್ಮಕ ಗುಣಗಳನ್ನು ತತ್ಕಾಲಕ್ಕೆ ಅದುಮಿಟ್ಟುಕೊಂಡಿರುವಂತಹ ಒತ್ತಡವಷ್ಟೇ ಆಗಿರುತ್ತದೆ. ಎಲ್ಲಿ ಶಿಕ್ಷೆಗೆ ಅವಕಾಶವಿರುವುದಿಲ್ಲವೋ ಅಥವಾ ಸಿಕ್ಕಿ ಬೀಳುವ ಅವಕಾಶವಿರುವುದಿಲ್ಲವೋ ಆಗ ಆಸ್ಫೋಟಗೊಂಡು ವಿಜೃಂಭಿಸುತ್ತದೆ. ನಗರದಲ್ಲಿ ಯಾವುದಾದರೂ ಬಂದ್ ಅಥವಾ ಇತ್ಯಾದಿ ಗಲಭೆೆ ಗಳಾಗುವಾಗ ಯಾರವರು ಸಾರ್ವಜನಿಕರ ಆಸ್ತಿಪಾಸ್ತಿಗಳನ್ನು ಧ್ವಂಸ ಮಾಡುತ್ತಾ ಆಕ್ರೋಶ ವ್ಯಕ್ತಪಡಿಸುವವರು? ಅವರ ಆಕ್ರೋಶದ ಹಿಂದಿನ ಕಾರಣ ಸರಕಾರವಾಗಿರುವುದಿಲ್ಲ. ಯಾವಾಗಿಂದಾವಾಗಿಂದಲೋ ಅವರು ಅದುಮಿಟ್ಟಿಕೊಂಡಿರುವ ಆಸ್ಫೋಟದ ಮನಸ್ಥಿತಿಯಾಗಿರುತ್ತದೆ.

ದೊಡ್ಡ ಮಾತುಗಳೊಂದಿಗೆ ಸಂವಾದಿಸಲು

ಮಕ್ಕಳಾಗಲಿ ಅಥವಾ ಹದಿಹರೆಯದವರಾಗಲಿ ವಯಸ್ಕರು ಮತ್ತು ಜವಾಬ್ದಾರಿಯುತ ಸಂಸಾರಸ್ಥರು ಆಲೋಚಿಸುವಂತೆ ಆಲೋಚಿಸುವುದಿಲ್ಲ ಹಾಗೂ ಅವರಿಬ್ಬರಿಗೂ ಇವರಿಗಿರುವಂತಹ ಹೊಣೆಗಾರಿಕೆಗಳೂ ಮತ್ತು ಕೆಲಸಗಳೂ ಇರುವುದಿಲ್ಲ. ಇದು ದೊಡ್ಡವರಿಗೆ ಮೊದಲು ಅರ್ಥವಾಗಬೇಕು. ಅಂತೆಯೇ ಮಾತಾಡುವಾಗ ಹೆಂಡತಿಯೊಬ್ಬಳು ಗಂಡನೊಬ್ಬನಿಗೆ ಅವಳ ಜವಾಬ್ದಾರಿಗಳನ್ನು ಪ್ರಶ್ನಿಸುವಂತೆ ಅಥವಾ ಬೆಳೆದು ಮದುವೆಯಾಗಲು ನಿಂತ ಮಗನಿಗೆ ತಂದೆಯೊಬ್ಬ ಅವನ ಬದ್ಧತೆಗಳನ್ನು ಪ್ರಶ್ನಿಸುವಂಗೆ ಪಾಲಕರಾಗಲಿ, ಶಿಕ್ಷಕರಾಗಲಿ ಮಗುವೊಂದನ್ನು ಪ್ರಶ್ನಿಸುವುದನ್ನು ನಿಲ್ಲಿಸಿದರೆ ಮಗು ಕೂಡಾ ಸುಳ್ಳು ಹೇಳುವುದನ್ನು ನಿಲ್ಲಿಸುವ ಸಾಧ್ಯತೆಗಳಿರುತ್ತವೆ.

ಮಕ್ಕಳಿಗೆ ದೊಡ್ಡವರು ಮೊದಲು ದೊಡ್ಡದೊಡ್ಡ ಮಾತುಗಳನ್ನು ಆಡುವುದನ್ನು, ದೊಡ್ಡದೊಡ್ಡ ಪ್ರಶ್ನೆಗಳನ್ನು ಕೇಳುವುದನ್ನು ನಿಲ್ಲಿಸಬೇಕು. ಜವಾಬ್ದಾರಿ, ಹೊಣೆಗಾರಿಕೆ, ಬದ್ಧತೆ, ಕಷ್ಟಪಟ್ಟರೆ ಫಲವುಂಟು, ಕೈ ಕೆಸರಾದರೆ ಬಾಯಿ ಮೊಸರು, ದುಡ್ಡೇ ದೊಡ್ಡಪ್ಪ - ವಿದ್ಯೆ ಅವರಪ್ಪ; ಇತ್ಯಾದಿಗಳೆಲ್ಲಾ ಮಕ್ಕಳ ಕಿವಿಯ ಮೇಲೆ ಬಿದ್ದರೆ ಏನೂ ಪ್ರಯೋಜನವಾಗುವುದಿಲ್ಲ. ಇವೆಲ್ಲವೂ ಜೀವಂತ ಉದಾಹರಣೆಗಳಾಗಿ ಅವರಿಗೆ ದಿನಬೆಳಗಿನ ಮಾದರಿಗಳಾಗಿದ್ದು, ಜೊತೆಯಾಗಿ ತರಬೆೀತಿ ಕೊಡುತ್ತಾ ರೂಢಿಯಾಗಬೇಕಷ್ಟೇ.

ನಾವು ದೊಡ್ಡದೊಡ್ಡ ಮಾತುಗಳನ್ನು ಅವರಿಗೆ ಹೇಳುತ್ತಾ ಹೋದಂತೆ ಅವರು ದೊಡ್ಡದೊಡ್ಡ ಸುಳ್ಳುಗಳನ್ನು ಹೇಳುತ್ತಾ ಹೋಗುತ್ತಾರೆ. ಸ್ವಾತಂತ್ರ ದಿನಾಚರಣೆಗೋ, ಶಾಲಾ ವಾರ್ಷಿಕೋತ್ಸವಕ್ಕೋ ಬರುವಂತಹ ಬಹಳಷ್ಟು ಅತಿಥಿಗಳು, ತಂದೆ ತಾಯಿಗಳನ್ನು ಮತ್ತು ಶಿಕ್ಷಕರನ್ನು ದೇವರಂತೆ ನೋಡುವುದನ್ನೋ, ಸಾಧಕರ ಮತ್ತು ಮಹನೀಯರ ಉದಾಹರಣೆ ಗಳನ್ನು ಕೊಟ್ಟು ದೇಶಭಕ್ತಿ ಮತ್ತು ಸಮಾಜಸೇವೆ ಇತ್ಯಾದಿ ಗಳನ್ನು ಒಳಗೊಂಡಂತೆ ಆಡುವ ಮಾತುಗಳನ್ನು ಯಾವ ಮಗುವಾದರೂ ಕೇಳಿ, ಹೌದು ಹೌದು, ನಾನು ಹೀಗೆಯೇ ಆಗಬೇಕು ಎಂದು ನಡೆದುಕೊಂಡ ಉದಾಹರಣೆಯನ್ನಂತೂ ನಾನು ಇದುವರೆಗೂ ಕಂಡಿಲ್ಲ.

ಸರಿ, ಈ ದೊಡ್ಡದೊಡ್ಡ ಮಾತುಗಳಿಗೂ ಮತ್ತು ಮಕ್ಕಳು ಆಡುವ ಸುಳ್ಳು ಮಾತುಗಳಿಗೂ ಏನು ಸಂಬಂಧ ಎಂದುಕೊಳ್ಳಬೇಡಿ. ಸಂಬಂಧ ಗಾಢವಾಗಿಯೇ ಇದೆ.

1.ದೊಡ್ಡ ಮಾತುಗಳ ಸರದಾರರಾದ ದೊಡ್ಡವರಿಗೆ ತಮ್ಮ ಸರಳ ಮತ್ತು ಏನೂ ಘನವಲ್ಲದ ಪುಟ್ಟಪುಟ್ಟ ಸಂಗತಿಗಳು, ಚೇಷ್ಟೆಗಳು, ಸನ್ನಿವೇಶಗಳು ಹಿಡಿಸದು ಎಂದು ಅವರ ಮಾತಿಗೆ ಅನುಗುಣವಾಗಿರಬಹುದಾಗಿರುವಂತಹ ಸುಳ್ಳುಗಳನ್ನು ಮಕ್ಕಳು ಹೊಸೆಯುತ್ತಾರೆ.

2.ತಮ್ಮ ಪುಟ್ಟಪುಟ್ಟ ಮತ್ತು ಸರಳ ಸಂಗತಿಗಳು ದೊಡ್ಡವರ ಮಾತಿನ ಮುಂದೆ ಕ್ಷುಲ್ಲಕ ಎನಿಸುವುದಷ್ಟೇ ಮಾತ್ರವಲ್ಲದೇ ದೊಡ್ಡವರು ತಮ್ಮ ಮಾತನ್ನು ಒಪ್ಪುವುದಿಲ್ಲ ಎಂದುಕೊಂಡು ತಮ್ಮ ಸಂಗತಿಗಳ ವೌಲ್ಯಪ್ರಮಾಣವನ್ನು ಹಿಗ್ಗಿಸಿಕೊಳ್ಳಲು ಯತ್ನಿಸುತ್ತಾರೆ. ಅದೋ ಭಯಂಕರ ಮತ್ತು ಅಸಹನೀಯವಾದಂತಹ ಅವಾಸ್ತವದಿಂದ ಕೂಡಿರುತ್ತದೆ. ಮಕ್ಕಳ ಬಗ್ಗೆ ಅತ್ಯಂತ ಸಹಾನುಭೂತಿ ಇರುವಂತವರಿಗೂ ಮುಜುಗರವಾಗುವಷ್ಟು ಇರಿಸುಮುರಿಸಾಗುತ್ತದೆ.

3.ದೊಡ್ಡವರ ಮಾತಿನಲ್ಲಿ ಕೇಳುವ ವೌಲ್ಯವನ್ನು ತಮ್ಮಲ್ಲಿ ಇದೆಯೆಂದು ಕಾಣಿಸಿಕೊಳ್ಳಲು ಮಕ್ಕಳು ಮೊಟ್ಟಮೊದಲು ಉಪಯೋಗಿಸುವ ಸಾಧನವೆಂದರೆ ಸುಳ್ಳಿನ ಮಾತು.

4.ಮಕ್ಕಳೊಂದಿಗೆ ಮಾತಾಡುವಾಗ ಅವರ ಭಾಷೆಯಲ್ಲಿಯೇ ಮಾತಾಡಬೇಕು ಹಾಗೂ ಅವರಿಗೆಟಕುವ ವಿಷಯಗಳನಷ್ಟೇ ನಿವೇದಿಸಬೇಕು. ಅವರಿಗೆ ಆ ವಿಷಯಗಳ ಆಳ ಮತ್ತು ಎತ್ತರಗಳನ್ನು ಪರಿಚಯಿಸುವ ಮನಸ್ಸು ದೊಡ್ಡವರಿಗೆ ಕಿಂಚಿತ್ತಾದರೂ ಇದ್ದರೆ ವಯಸ್ಕರ ಅಳತೆಗನುಗುಣವಾದ ದೊಡ್ಡದೊಡ್ಡ ಪದಗಳನ್ನು ಬಳಸದೇ ಮಕ್ಕಳು ತಮ್ಮ ದೃಷ್ಟಿಯಲ್ಲಿ ಗ್ರಹಿಸುವ ಸಂಗತಿಗಳಿಗೆ ಅನ್ವಯವಾಗುವಂತಹ ಮಾತುಗಳನ್ನು ಬಳಸಬೇಕು. ನೈತಿಕ ನಿರ್ದೇಶನಗಳನ್ನೂ ಕೂಡಾ ಹಾಗೆಯೇ ಕೊಡಬೇಕು.

5.ನೈತಿಕ ನಿರ್ದೇಶನವೆಂದರೆ, ಬದುಕಿನ ವೌಲ್ಯಗಳನ್ನು ಅಳವಡಿಸಿಕೊಳ್ಳಲು ಹೀಗಿರಬೇಕು, ಹಾಗಿರಬೇಕು ಎಂಬಂತಹ ಮಾರ್ಗಸೂಚಿ. ಅದು ಯಾವಾಗಲೂ ಸಾಂದರ್ಭಿಕವಾಗಿ ಮತ್ತು ಸಮಯೋಚಿತವಾಗಿರಬೇಕು. ಅದುಬಿಟ್ಟು, ಮಕ್ಕಳು ದೊಡ್ಡವರಾದ ಮೇಲೆ ದೇಶ ಮತ್ತು ಸಮಾಜಕ್ಕೆ ಮಹತ್ತಾದ ಸೇವೆಗಳನ್ನು ಕೊಡುವಂತಹ ಮುಂದಿನ ಆದರ್ಶದ ಕನಸುಗಳ ಭ್ರಮೆಗಳನ್ನು ಮಾತುಗಳನ್ನಾಗಿಸಬಾರದು. ಯಾವ ಮಗುವಿಗೂ ಅವು ಅರ್ಥವೂ ಆಗುವುದಿಲ್ಲ ಮತ್ತು ತನ್ನ ಸದ್ಯದ ಸ್ಥಿತಿಗೆ ಅನ್ವಯ ಮಾಡಿಕೊಳ್ಳಲೂ ಬರುವುದಿಲ್ಲ. ಸಮಾಜದಲ್ಲಿ ಬಹುದೊಡ್ಡ ಹೆಸರು ಮಾಡಿರುವ ಅಥವಾ ಸಾಧನೆ ಮಾಡಿರುವ ಗಣ್ಯವ್ಯಕ್ತಿಯು ಅವರ ಜೊತೆಗೆ ನಿತ್ಯ ಕೆಲಸ ಮಾಡುತ್ತಿದ್ದರೂ ಅಥವಾ ಏನಾದರೂ ಹೇಳಿಕೊಡುತ್ತಿದ್ದರೂ ಸಣ್ಣಮಕ್ಕಳಿಗೆ ಅದೇನೂ ಒಂದು ವಿಷಯವೇ ಅಲ್ಲ. ಅದರ ತತ್ಕಾಲದ ಅಗತ್ಯಗಳನ್ನು ಆ ವ್ಯಕ್ತಿ ಪೂರೈಸುತ್ತಿದ್ದಾನಾ? ಆ ಹೊತ್ತಿನ ಸಂತೋಷಕ್ಕೆ ಕಾರಣನಾಗಿದ್ದಾನಾ ಎಂಬುದಷ್ಟನ್ನೇ ಅವು ಗಮನಿಸುವುದು.

 ಒಟ್ಟಾರೆ ದೊಡ್ಡದೊಡ್ದ ಮಾತುಗಳಿಂದ ಮಗುವಿಗೆ ಭ್ರಮೆಯನ್ನೋ, ಹುಸಿ ಔನ್ನತ್ಯವನ್ನೋ ಸೃಷ್ಟಿಸಿ ಆ ಮಕ್ಕಳು ಅಪ್ರಾಸಂಗಿಕವಾಗಿ, ಅನಗತ್ಯ ವಾಗಿ, ಅವಾಸ್ತವದಿಂದ ಕೂಡಿರುವಂತಹ ಮಾತುಗಳನ್ನು ಆಡುತ್ತಾ ಆಡುತ್ತಾ ಹುಸಿಗಾರರನ್ನಾಗಿ ಮಾಡುವುದು ಬೇಡ.

ಸುಳ್ಳಿನ ಕಾರಣಿಕ ಪ್ರಪಂಚ ಇಷ್ಟಕ್ಕೇ ಮುಗಿಯುವುದಿಲ್ಲ. ಇನ್ನೂ ಇದೆ.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News