ಮೋಹನದಾಸ ಮಹಾತ್ಮನಾದ ಹಾದಿಯ ಜಾಡು ಹಿಡಿದು...

Update: 2019-08-11 07:36 GMT

ಕಾಲಕಳೆದಂತೆ ಗಾಂಧೀಜಿ ಹೆಚ್ಚು ಹೆಚ್ಚು ಪ್ರಸ್ತುತವಾಗುತ್ತಿದ್ದಾರೆ. ಗಾಂಧೀಜಿ ಅವರದ್ದು ಯಾವತ್ತೂ ಪ್ರಸ್ತುತವಾಗಬಲ್ಲ ವ್ಯಕ್ತಿತ್ವ. ತನ್ನ ನಡೆಯ ಮೂಲಕ ಅಹಿಂಸಾ ತತ್ವವನ್ನು ಇಡೀ ಜಗತ್ತಿಗೆ ಸಾರಿದ ಮಹಾನ್ ನಾಯಕ. ಮಹಾತ್ಮಾ ಗಾಂಧೀಜಿಯ ಸತ್ಯ, ಅಹಿಂಸೆ, ಪ್ರಾಮಾಣಿಕತೆ ಮಾರ್ಗದಲ್ಲಿ ನಡೆಯುವ ಅವಶ್ಯಕತೆಯನ್ನು ಮುಂದಿನ ಪೀಳಿಗೆಗೆ ತಿಳಿಸುವ ಅನಿವಾರ್ಯತೆ ಇದೆ. ಮೋಹನದಾಸ ಮಹಾತ್ಮನಾದ ನಂತರದ ದಿನಗಳು ಎಲ್ಲ್ಲರಿಗೂ ತಿಳಿದಿವೆ ಹಾಗೂ ಮಹಾತ್ಮನ ಕುರಿತು ಜಗತ್ತಿನಾದ್ಯಂತ ಅನೇಕ ಪುಸ್ತಕಗಳು, ಲೇಖನಗಳು, ಸಂಪಾದಿತ ಕೃತಿಗಳು ಬಂದಿವೆ. ಆದರೆ, ಮಹಾತ್ಮನಾಗುವ ಹಾದಿಯಲ್ಲಿ ಅವರ ಬಾಲ್ಯದ ದಿನಗಳು ಹೇಗಿದ್ದವು. ಬಾಲ್ಯದಲ್ಲಿ ಅವರಿಗೆ ಪ್ರೇರಣೆ ಯಾರು? ಅವರ ಶಾಲಾ ದಿನಗಳಲ್ಲಿ ನಡೆದಂತಹ ಘಟನೆಗಳೇನು? ಅವರ 13ನೇ ವಯಸ್ಸಿನ ಮದುವೆ. ಹೀಗೆ ಅನೇಕ ಕೌತುಕದ ಪ್ರಶ್ನೆಗಳು ಕಾಡತೊಡಗುತ್ತವೆ. ಹಾಗಾದರೆ ಮಹಾತ್ಮಾ ಗಾಂಧಿ ಸಾಮಾನ್ಯರಂತೆಯೇ ಇದ್ದರಾ? ಈ ಎಲ್ಲ ಕುತೂಹಲಗಳಿಗೆ ಸದ್ಯದಲ್ಲಿಯೇ ಉತ್ತರ ಸಿಗುತ್ತದೆ ಅದು ಚಲನಚಿತ್ರದ ಮೂಲಕ. ಇಂತಹ ಮಹಾತ್ಮನ ಬಾಲ್ಯವನ್ನು ತೆರೆಯ ಮೇಲೆ ನೋಡುವುದು ಕೂಡ ಕುತೂಹಲವೇ. ಕನ್ನಡದ ಪ್ರಮುಖ ಸಂವೇದನಾಶೀಲ ನಿರ್ದೇಶಕ ಪಿ.ಶೇಷಾದ್ರಿಯವರು ಮಹಾತ್ಮನ ಬಾಲ್ಯವನ್ನು ಪುನರ್ ಸೃಷ್ಟಿಸಿ, ತೆರೆಯ ಮೇಲೆ ತರುತ್ತಿದ್ದಾರೆ. ಸರ್ವಕಾಲಕ್ಕೂ ಸಲ್ಲುವ ಮಹಾತ್ಮನ ಬಾಲ್ಯವನ್ನು ಚಿತ್ರಿಸುವುದು ಕಷ್ಟಸಾಧ್ಯ. ಇಡೀ ಚಿತ್ರದಲ್ಲಿ ಎಲ್ಲಿಯೂ ಅತೀಶಯೋಕ್ತಿ ಎನಿಸದ, ಯಾವುದೇ ಕಟ್ಟು ಕಥೆಗಳಿಗೆ ಕಿವಿಗೊಡದೆ, ಮಹಾತ್ಮನ ಬಗ್ಗೆ ಗೌರವ ಕಡಿಮೆಯಾಗದ ಹಾಗೆ ಅವರ ಬಾಲ್ಯವನ್ನು ಅವರೇ ಬರೆದುಕೊಂಡ ಹಾಗೆ ಚಿತ್ರಿಸಿರುವುದು ಶೇಷಾದ್ರಿ ಅವರ ಹೆಗ್ಗಳಿಕೆ. ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪಡೆದ ಬೊಳುವಾರು ವಿರಚಿತ ‘ಪಾಪು ಗಾಂಧಿ, ಗಾಂಧಿ ಬಾಪು ಆದ ಕತೆ’ ಪುಸ್ತಕ ಆಧಾರಿತ ಈ ಚಿತ್ರ ಏಕಕಾಲಕ್ಕೆ ಮೂರು ಭಾಷೆಗಳಲ್ಲಿ ಚಿತ್ರೀಕರಣ ವಾಗುತ್ತಿರುವುದು ಮತ್ತೊಂದು ವಿಶೇಷ. ಕನ್ನಡ, ಇಂಗ್ಲಿಷ್, ಹಿಂದಿ ಮೂರು ಭಾಷೆಗಳಲ್ಲಿ ಚಿತ್ರ ವನ್ನು ತಯಾರಿಸಲಾಗುತ್ತಿದೆ. ಇದು ಶೇಷಾದ್ರಿಯವರ ಮತ್ತೊಂದು ವಿಭಿನ್ನ ಪ್ರಯತ್ನ ಎನ್ನಬಹುದು. ಗಾಂಧೀಜಿಯ ಬಾಲ್ಯ ತುಂಬಾ ಸ್ವಾರಸ್ಯಕರವಾದದ್ದು. ಮೋಹನ ದಾಸ ಮಹಾತ್ಮನಾಗುವ ಹಾದಿಯಲ್ಲಿ ಹಲವಾರು ಎಡರು- ತೊಡರುಗಳನ್ನು, ಸಂಕಷ್ಟಗಳನ್ನು ಅನುಭವಿಸಿದ್ದಾರೆ. ಅನೇಕ ಸಮಸ್ಯೆಗಳನ್ನು ಎದುರಿಸಿದ್ದಾರೆ. ಸ್ವತಃ ಗಾಂಧೀಜಿಯವರೇ ತಮ್ಮ ಜೀವನ ಚರಿತ್ರೆಯಲ್ಲಿ ಹೇಳಿಕೊಂಡಂತೆ ಅನೇಕ ತಪ್ಪುಗಳನ್ನೂ ಮಾಡಿದ್ದಾರೆ. ಎಲ್ಲರಂತೆ ಸಾಮಾನ್ಯವಾಗಿ ಬಾಲ್ಯ ಕಳೆದ ಒಬ್ಬ ಬಾಲಕ ತನ್ನ ಜೀವನದಲ್ಲಿ ನಡೆದಂತಹ ಘಟನೆಗಳನ್ನು ಅನುಭವಗಳನ್ನು ಪುನರ್ ಆತ್ಮಾವಲೋಕನ ಮಾಡಿಕೋಳ್ಳುತ್ತಾ, ಮತ್ತೆ ಮತ್ತೆ ತಪ್ಪು ಮಾಡುತ್ತಾ, ಮಾಡಿದ ತಪ್ಪುಗಳನ್ನು ತಿದ್ದಿಕೊಳ್ಳುತ್ತಾ ಮಹಾತ್ಮನಾದ ಕಥೆ ಇಂದಿನ ಎಲ್ಲ ವಯೋಮಾನದವರಿಗೂ ಮಾದರಿ ಮತ್ತು ಸ್ಫೂರ್ತಿ.

 

ಗಾಂಧೀಜಿಯವರ ಜೀವನವನ್ನು ಮೂರು ಹಂತದಲ್ಲಿ ವಿಂಗಡಿಸಬಹುದು. ಮೊದಲನೆಯ ಹಂತ ಮೋನಿಯಾ, ಎರಡನೆಯದು ಮೋಹನದಾಸ, ಮೂರನೆಯದು ಮಹಾತ್ಮಾ ಗಾಂಧಿ. ಬಾಲ್ಯದ ಮೋನಿಯಾ ಹಂತದಿಂದ ಮೋಹನದಾಸ ಹಂತದವರೆಗೂ ಅವರು ಸಾಮಾನ್ಯರಲ್ಲಿ ಸಾಮಾನ್ಯರಾಗಿಯೇ ಜೀವನ ಸಾಗಿಸುತ್ತಿದ್ದರು ಎನ್ನುವುದು ಇಲ್ಲಿ ಗಮನಾರ್ಹ. ಅಂತೆಯೇ ಅದು ತೀರಾ ಕಠಿಣವಾಗಿಯೂ ಇದ್ದಿದ್ದು ಅಷ್ಟೇ ಸತ್ಯ.

ಮೋಹನದಾಸ ಬಾಲ್ಯದಲ್ಲಿ ನೋಡಿದ ಶ್ರವಣಕುಮಾರನ ಕಥೆ, ಹರಿಶ್ಚಂದ್ರ ನಾಟಕ ಹೀಗೆ ಹಲವಾರು ಘಟನೆಗಳು ಎಳೆಯ ಮನಸ್ಸಿನ ಮೋಹನನ ಮೇಲೆ ಗಾಢವಾಗಿ ಪರಿಣಾಮ ಬೀರುತ್ತವೆ. ಬಾಲ್ಯದಲ್ಲಿ ನಡೆದಂತಹ ಘಟನಾವಳಿಗಳು ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತವೆ ಎನ್ನುವುದಕ್ಕೆ ಗಾಂಧೀಜಿಯವರು ಒಂದು ಅತ್ಯುತ್ತಮ ಉದಾಹರಣೆ. ತಾಯಿಯ ಸತ್ಯವಂತಿಕೆ, ಅಣ್ಣ ಕರ್ಸನ್‌ನ ಅಸಹಾಯಕತೆ, ಗೆಳೆಯ ಮೆಹತಾಬ್‌ನ ದೇಶ ಪ್ರೇಮದ ಕಿಚ್ಚು, ಹೆಂಡತಿಯ ಕಾರುಣ್ಯ, ತಂದೆಯ ಅನಾರೋಗ್ಯದ ಚಿಂತೆ ಇವೆಲ್ಲದರ ಪರಿಣಾಮವೇ ಮೋಹನದಾಸನ ವ್ಯಕ್ತಿತ್ವವನ್ನು ರೂಪಿಸಲು ಸಾಧ್ಯವಾದವು. ದಿವಾನರ ಮಗನಾಗಿ ಹುಟ್ಟಿದರೂ ಅಸಹಾಯಕರ, ದೀನ ದಲಿತರ ಕಡೆಗೆ ಒಂದು ರೀತಿಯ ಸೆಳೆತ ಮತ್ತು ಕರುಣೆ ಚಿಕ್ಕಂದಿನಿಂದಲೇ ಗಾಂಧೀಜಿಗೆ ಇತ್ತು ಎನ್ನುವುದಕ್ಕೂ ಇಲ್ಲಿ ನಿದರ್ಶನವಿದೆ. ಗುಜರಾತಿನ ಪೋರ್‌ಬಂದರ್ ಮೋಹನದಾಸ ಹುಟ್ಟಿದ ಊರು. ಇಲ್ಲಿ ಪುತಲೀಬಾಯಿ ಅವರ ಮನೆ ‘ಕೀರ್ತಿ ಮಂದಿರ’ ಇಂದಿಗೂ ಹಾಗೆ ಇದೆ. ಮೋಹನದಾಸ ಹುಟ್ಟಿದ ಸ್ಥಳ, ಓಡಾಡಿ ಬೆಳೆದ ಮನೆ ಎಲ್ಲವೂ ಅದೇ ಸ್ವರೂಪದಲ್ಲಿದೆ. ಕೀರ್ತಿ ಮಂದಿರದ ಹಿಂದೆಯೇ ಕಸ್ತೂರ್ ಬಾ ಅವರ ಮನೆ ಇದೆ. ಅದು ಕೂಡ ಇತಿಹಾಸವನ್ನು ನೆನಪಿಸುವಂತಿದೆ. ಇವೆರಡು ಪುರಾತತ್ವ ಇಲಾಖೆಗೆ ಒಳಪಟ್ಟಿವೆ. ಮಹಾತ್ಮಾ ನಡೆದಾಡಿದ ಭೂಮಿ, ಶಿಕ್ಷಣ ಕಲಿತ ಶಾಲೆ, ಗೆಳೆಯರೊಂದಿಗೆ ಕುಣಿದು ಆಡಿದ ಬೀದಿಗಳಲ್ಲಿ ಚಿತ್ರೀಕರಣ ಮಾಡಿರುವುದು ನಾವೇ ಮಹಾತ್ಮನ ನೆಲಕ್ಕೆ ಭೇಟಿ ನೀಡಿದ ಅನುಭವವಾಗುತ್ತದೆ. ಮುಂಬರುವ ಅಕ್ಟೋಬರ್ 2ರಂದು ಗಾಂಧೀಜಿಯ 150ನೇ ಜನ್ಮ ದಿನಾಚರಣೆ. ಇದರ ಸವಿನೆನಪಿಗಾಗಿ ಮಹಾತ್ಮನ ಬಾಲ್ಯವನ್ನು ನೆನಪಿಸುವಂತಹ ಚಿತ್ರ ಬಿಡುಗಡೆ ಮಾಡಬೇಕು ಎನ್ನುವುದು ಶೇಷಾದ್ರಿಯವರ ಆಶೆ. ಖಂಡಿತವಾಗಿಯೂ ‘ಮೋಹನದಾಸ’ ಚಿತ್ರ ಅವೀಸ್ಮರಣೀಯವಾಗುವುದರಲ್ಲಿ ಸಂಶಯವಿಲ್ಲ. ಚಿತ್ರದ ಮೂಲಕವಾದರೂ ಗಾಂಧಿ ಮತ್ತೆ ಮತ್ತೆ ನೆನಪಾಗಲಿ.

ಗಾಂಧಿ ಜಯಂತಿ ಮತ್ತು ಚಿತ್ರ ನಿರ್ದೇಶನ:

ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗ ಅಕ್ಟೋಬರ್ 2 ಬಂತೆಂದರೆ ಎಲ್ಲಿಲ್ಲದ ಸಡಗರ. ಮುಂಜಾನೆ ಬೇಗ ಎದ್ದು, ಬಿಳಿ ಸಮವಸ್ತ್ರ ಧರಿಸಿ ಹೂ ಗಳನ್ನು ತೆಗೆದುಕೊಂಡು ಶಾಲೆಗೆ ಹೋಗುತ್ತಿದ್ದೆವು. ಹಿಂದಿನ ದಿನವೇ ಶಾಲೆಯನ್ನು ಸೆಗಣಿಯಿಂದ ಸಾರಿಸಿ, ಮಾವಿನ ತೋರಣಗಳನ್ನು ಹಾಕಿ ಒಪ್ಪ ಓರಣವಾಗಿಸಿಟ್ಟಿರಬೇಕಾಗಿತ್ತು. ಮುಂಜಾನೆ ಹುಡುಗಿಯರು ನಮಗಿಂತ ಬೇಗ ಬಂದು ರಂಗೋಲಿ ಹಾಕುತ್ತಿದ್ದರು. ಸ್ವಲ್ಪ ಜನ ಗಾಂಧಿಯ ಫೋಟೋಗೆ ಅಲಂಕಾರ ಮಾಡುವ ಕ್ರಿಯೆಯಲ್ಲಿ ತಲ್ಲೀನವಾಗಿರುತ್ತಿದ್ದರೆ ಮಿಕ್ಕವರು ನಮಗಿಂತ ಕಿರಿಯರನ್ನು ಲೈನಾಗಿ ಕೂರಿಸುವುದೇ ಒಂದು ಹೆಮ್ಮೆಯ ಕೆಲಸವೆಂದು ತಿಳಿದು ಅದನ್ನು ಮೇಷ್ಟ್ರು ಹೇಳಿದ್ದಕ್ಕಿಂತ ಜಾಸ್ತಿ ಶಿಸ್ತಿನಿಂದ ಪಾಲಿಸುತ್ತಿದ್ದರು. ಶಾಲೆಗೆ ಬಂದಿದ್ದ ಮುಖ್ಯ ಅತಿಥಿಗಳು ಗಾಂಧೀಜಿಯ ಫೋಟೊಗೆ ಮಾಲಾರ್ಪಣೆ ಮಾಡಿ, ಗಾಂಧೀಜಿಯ ಬಗ್ಗೆ ತಮಗೆ ಗೊತ್ತಿದ್ದಷ್ಟು ಮಾತನಾಡುತ್ತಿದ್ದರು. ಆನಂತರ ನಾವೆಲ್ಲರೂ ಸೇರಿ ಊರಲ್ಲಿ ಘೋಷಣೆ ಕೂಗುತ್ತಾ, ಗಾಂಧಿಯ ಫೋಟೊ ಹಿಡಿದು ಮೆರವಣಿಗೆ ಹೊರಟು ಮತ್ತೆ ಶಾಲೆಗೆ ಬಂದು ಪುರಿ, ಖಾರ ತಿಂದರೆ ಅಲ್ಲಿ ಗಾಂಧಿ ಜಯಂತಿ ಸಮಾಪ್ತಿಯಾಗುತ್ತಿತ್ತು. ಹೀಗೆ ಹಲವಾರು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಕಲಿತವರ ಗಾಂಧಿ ಜಯಂತಿ ನೆನಪು ಯಥಾಪ್ರಕಾರ ಇರುತ್ತದೆ. ಚಿಕ್ಕವರಿದ್ದಾಗ ಮೊದಲಿಗೆ ಗಾಂಧಿ ಎಂದರೆ ನಮಗೆ ತಿಳಿದಿದ್ದು ಬಿಳಿ ಕಚ್ಚೆ ಪಂಜೆ ತೊಟ್ಟ, ಕೈಯಲ್ಲಿ ಕೋಲು ಹಿಡಿದ, ಕನ್ನಡಕ ಹಾಕಿದ ತಾತ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿ ನಮೆಗೆಲ್ಲ ಸ್ವಾತಂತ್ರ ತಂದುಕೊಟ್ಟರು ಎನ್ನುವುದು. ಅವರು ಅಹಿಂಸಾತ್ಮಕವಾಗಿ ನಡೆಸಿದ ಹೋರಾಟಗಳ ಕಥೆ, ಗಾಂಧಿಯ ತತ್ವಗಳು, ಸಿದ್ಧಾಂತಗಳು, ವೈಯಕ್ತಿಕ ಜೀವನದ ಏರಿಳಿತ ಹೀಗೆ ಗಾಂಧೀಜಿ ಕುರಿತು ಎಲ್ಲವನ್ನು ಕೇಳುತ್ತಾ, ಓದುತ್ತಾ ಹೋದಂತೆ ಗಾಂಧಿಯೆಡೆಗೆ ಒಂದು ಗೌರವ ಮತ್ತು ತುಡಿತ ಹೆಚ್ಚಾಗಿದ್ದು ಮಾತ್ರ ನಿಜ.

 ಆದರೆ, ಗಾಂಧೀಜಿಯ ಬಾಲ್ಯದ ಬಗ್ಗೆ ಹೆಚ್ಚು ಗಮನ ಹರಿಸಿರಲಿಲ್ಲ. ಎಲ್ಲರ ಬಾಲ್ಯದಂತೆಯೇ ಮಹಾತ್ಮರ ಬಾಲ್ಯವೂ ಇರುತ್ತದೆ ಎನ್ನುವ ಕಲ್ಪನೆ ಕೂಡ ಬಂದಿರಲಿಲ್ಲ. ಸ್ವಾತಂತ್ರ ಪೂರ್ವದಲ್ಲಿ ಜನಿಸಿದವರ ಬಾಲ್ಯದ ಕಥೆಯನ್ನು ಕೇಳುವುದು ಕೂಡ ಒಂದು ಕುತೂಹಲವೇ. ಅದೇನೋ ಬಾಲ್ಯದಿಂದಲೂ ಸಿನೆಮಾ ಎಂದರೆ ನನಗೆ ಒಂದು ತೆರೆನಾದ ನೋಟ. ಮನೆಯಲ್ಲಿ ಟಿ.ವಿ. ಇರಲಿಲ್ಲ. ಟಿ.ವಿ. ಇಡಲು ಜಾಗವೂ ಇರಲಿಲ್ಲ. ಊರಿಗೆ ಎರಡೋ-ಮೂರೋ ಟಿವಿಗಳು. ಟಿವಿ ಉಳ್ಳವರ ಮನೆಯೇ ನಮಗೆ ಟಾಕೀಸ್. ಅವರ ಮನೆಗಳೇನು ಊರ ಮಂದಿ ಕೂರುವಷ್ಟು ಜಾಗವಿದ್ದವುಗಳಲ್ಲ. ಎರಡು ಕೇರಿಯ ಹುಡುಗರು ಹೋಗಿ ಕೂತರೆ ಮನೆಯವರಿಗೆ ಜಾಗ ಸಾಕಾಗುತ್ತಿರಲಿಲ್ಲ. ಅಷ್ಟಾಗಿಯೂ ನಾನು ದಿನಂಪ್ರತಿ ಟಿವಿ ಮುಂದೆ ಹಾಜರ್. ಆವಾಗಿನಿಂದಲೇ ಸಿನೆಮಾ ಬಗ್ಗೆ ಮಾತು, ಓದು, ಸಿನೆಮಾ ಗೀಳು ಅಂಟಿಕೊಂಡಿತ್ತು. ಮುಂದೊಂದು ದಿನ ಮಹಾತ್ಮರ ಬಾಲ್ಯದ ದಿನದ ಕಥೆಯನ್ನಾಧರಿಸಿದ ಚಿತ್ರದಲ್ಲಿ ನಾನು ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತೇನೆ ಎನ್ನುವುದು ನನ್ನ ಕಲ್ಪನೆಯಲ್ಲೂ ಇರಲಿಲ್ಲ. ಪತ್ರಿಕೋದ್ಯಮದ ಗಿರಣಿಯಲ್ಲಿ ಹಿಟ್ಟಾಗುತ್ತಿದ್ದೆ. ಮೈಸೂರು ಮತ್ತು ಬೆಂಗಳೂರಿನ ಪತ್ರಿಕಾ ಕಚೇರಿಗಳಲ್ಲಿ ಸವೆದು, ಇನ್ನು ಸಾಕು ಬದಲಾವಣೆ ಜಗದ ನಿಯಮ ಎನ್ನುವ ನನ್ನ ಧ್ಯೇಯ ವಾಕ್ಯದಂತೆ ಏನಾದರೂ ಮಾಡೋಣ ಅಂದಾಗ ತಕ್ಷಣ ಹೊಳೆದಿದ್ದು ಸಿನೆಮಾ. ಇದಕ್ಕಿಂತ ಬೇಗ ಮತ್ತು ಸುಲಭವಾಗಿ ನನಗೆ ಬೇರೆ ಯಾವ ವಿಷಯವೂ, ಕ್ಷೇತ್ರವೂ ಅರ್ಥವಾಗುವುದಿಲ್ಲ ಎಂದು ಅರಿತು ಮೊದಲನೆಯ ಪ್ರಯತ್ನದಲ್ಲಿಯೇ ಗಾಂಧಿ ಎನ್ನುವ ನಿಲುಕಿದರೂ ನಿಲುಕದ ನಕ್ಷತ್ರದಂತಹ ವ್ಯಕ್ತಿತ್ವದ ಬಾಲ್ಯದ ಬಗ್ಗೆ ಸಿನೆಮಾ ಮಾಡುತ್ತಿರುವುದು ಏಕಕಾಲಕ್ಕೆ ನನಗೆ ಆಶ್ಚರ್ಯವೂ, ಸಂತೋಷವು ಆಗುತ್ತಿದೆ.

ಪಿ.ಶೇಷಾದ್ರಿಯವರ ನಿರ್ದೇಶನದಲ್ಲಿ ಕೆಲಸ ಮಾಡುವ ಅನುಭವ ಒಂದೆಡೆಯಾದರೆ ನಿರ್ದೇಶನದ ಒಳನೋಟಗಳು, ಪರಿಕಲ್ಪನೆಗಳು, ಸಿನೆಮಾ ಮಾಧ್ಯಮದ ಸೂಕ್ಷ್ಮತೆಗಳನ್ನು ಅರಿಯುವಲ್ಲಿ ನನಗೆ ಇನ್ನೂ ಸಮಯ ಬೇಕು ಎಂದು ಅನ್ನಿಸಿರುವುದು ಸತ್ಯ. ಅದು ಅಷ್ಟು ಬೇಗ ಹಿಡಿತಕ್ಕೆ ಸಿಗುವುದಿಲ್ಲ ಎನ್ನುವುದು ಗೊತ್ತು. ಎಲ್ಲದರ ಹೊರತಾಗಿ ‘ಮೋಹನದಾಸ’ ಎಂಬ ಮಹಾತ್ಮರ ಬಾಲ್ಯದ ದಿನಗಳ ಕುರಿತ ಚಿತ್ರದಲ್ಲಿ ಕೆಲಸ ಮಾಡುತ್ತಿರುವುದು ನನ್ನೊಳಗಿನ ಗಾಂಧಿಯನ್ನು ಜಾಗೃತಗೊಳಿಸಿದೆ. ಎಲ್ಲ ಸಿನೆಮಾಗಳು ಇದನ್ನೇ ತಾನೆ ಮಾಡಬೇಕಾಗಿರುವುದು.

Writer - ಕಿರಣ್ ನಾಡಗೌಡ್ರ, ಹಾನಗಲ್

contributor

Editor - ಕಿರಣ್ ನಾಡಗೌಡ್ರ, ಹಾನಗಲ್

contributor

Similar News