ಜನವರಿಯವರೆಗೂ ರಾಜಧಾನಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿಲ್ಲ

Update: 2019-08-11 16:02 GMT

ಬೆಂಗಳೂರು, ಆ.11: ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಸತತವಾಗಿ ಮಳೆ ಆಗುತ್ತಿರುವುದರಿಂದ ಕೆಆರ್‌ಎಸ್ ಜಲಾಶಯಕ್ಕೆ ಭರ್ಜರಿ ನೀರು ಹರಿದು ಬರುತ್ತಿದೆ. ಇದರಿಂದ 2020ರ ಜನವರಿವರೆಗೂ ರಾಜಧಾನಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗುವುದಿಲ್ಲ ಎಂದು ಜಲಮಂಡಲಿ ಅಧಿಕಾರಿಗಳು ತಿಳಿಸಿದ್ದಾರೆ.

ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಒಂದು ವಾರದಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಜೂ.1ರಿಂದ ಆ.10ರವರೆಗೆ ಕೊಡಗು ಜಿಲ್ಲೆಯಲ್ಲಿ 1,842 ಮಿ.ಮೀ. ಮಳೆ ಸುರಿದಿದೆ. ಈ ಅವಧಿಯಲ್ಲಿ 1,672.8 ಮಿ.ಮೀ. ಮಳೆಯಾಗುತ್ತದೆ. ವಾಡಿಕೆಗೆ ಹೋಲಿಸಿದರೆ ಶೇ.10ರಷ್ಟು ಅಧಿಕ ಮಳೆ ಸುರಿದಿದೆ. ಮೈಸೂರು ಜಿಲ್ಲೆಯ ಕೆಲ ಭಾಗಗಳಲ್ಲಿ ಸುರಿಯುವ ಮಳೆ ಕಾವೇರಿ ಸೇರುತ್ತದೆ. ಮೈಸೂರು ಜಿಲ್ಲೆಯಲ್ಲಿ ಮುಂಗಾರು ಆರಂಭದಿಂದ ಇಲ್ಲಿಯವರೆಗೆ 390 ಮಿ.ಮೀ. ಮಳೆ ಸುರಿದಿದೆ. ವಾಡಿಕೆಯಂತೆ ಈ ಅವಧಿಯಲ್ಲಿ 206 ಮಿ.ಮೀ. ಮಳೆಯಾಗುತ್ತಿತ್ತು. ಈ ಬಾರಿ ವಾಡಿಕೆಗಿಂತ ಶೇ.89ರಷ್ಟು ಹೆಚ್ಚು ಮಳೆ ಸುರಿದಿದೆ. ಈ ಕಾರಣದಿಂದ ಕೆಆರ್‌ಎಸ್ ತುಂಬಿದ್ದು, ನಗರಕ್ಕೆ ಆಶಾದಾಯಕವಾಗಿದೆ.

ನಗರಕ್ಕೆ ಪ್ರತಿ ದಿನ 1,453 ದಶಲಕ್ಷ ಲೀಟರ್ ನೀರು ಸರಬರಾಜು ಮಾಡಲಾಗುತ್ತಿದೆ. 110 ಹಳ್ಳಿಗಳ ಪೈಕಿ 40 ಹಳ್ಳಿಗಳಿಗೆ ಇತ್ತೀಚೆಗೆ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ನಗರದ ಕೇಂದ್ರ ಭಾಗಗಳಲ್ಲಿ ನೀರಿನ ಬೇಡಿಕೆ ಸ್ವಲ್ಪಮಟ್ಟಿಗೆ ಕಡಿಮೆಯಾಗಿರುವುದರಿಂದ ಪೂರೈಸುವ ನೀರಿನಲ್ಲಿ ಸ್ವಲ್ಪಪ್ರಮಾಣವನ್ನು ಹಳ್ಳಿಗಳಿಗೆ ಸರಬರಾಜು ಮಾಡಲಾಗುತ್ತಿದೆ. ಹಳ್ಳಿಗಳಿಗೂ ನೀರು ಪೂರೈಸುವ ಸವಾಲು ಇದ್ದರಿಂದ ಜಲಾಶಯಗಳಲ್ಲಿ ನೀರು ಕೊರತೆಯಾದರೆ ನಗರದ ಕೇಂದ್ರ ಭಾಗಗಳಿಗೆ ನೀರು ಪೂರೈಸುವುದು ಹೇಗೆ ಎಂಬ ಆತಂಕ ಉಂಟಾಗಿತ್ತು. ಈಗ ಮಳೆ ಬಂದು ಜಲಾಶಯಗಳು ತುಂಬಿರುವುದರಿಂದ ಆತಂಕ ದೂರವಾಗಿದೆ.

ಜೂನ್ ಮತ್ತು ಜುಲೈ ತಿಂಗಳಲ್ಲಿ ಸುಮಾರು 45 ದಿನಗಳ ಕಾಲ ಮಳೆ ಕೊರತೆ ಉಂಟಾಗಿತ್ತು. ಇದರಿಂದಾಗಿ ನಗರದಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಬಹುದು ಎಂದು ಜಲಮಂಡಲಿ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದರು. ಆಗಸ್ಟ್ ಆರಂಭದಿಂದ ಭಾರಿ ಮಳೆ ಸುರಿದಿದ್ದು, ಕೆಆರ್‌ಎಸ್ ಹಾಗೂ ಕಬಿನಿ ಜಲಾಶಯಗಳಲ್ಲಿ ನೀರಿನ ಮಟ್ಟ ಏರಿದೆ. ಹೀಗಾಗಿ ನೀರಿನ ಕೊರತೆಯ ಆತಂಕ ಸಂಪೂರ್ಣವಾಗಿ ದೂರವಾಗಿದೆ.

ಕೆಆರ್‌ಎಸ್‌ನಲ್ಲಿ ಶನಿವಾರ 113 ಅಡಿ ಹಾಗೂ ಕಬಿನಿಯಲ್ಲಿ 2281 ಅಡಿ ನೀರು ತುಂಬಿತ್ತು. ನಗರಕ್ಕೆ ಕುಡಿಯುವ ನೀರಿಗಾಗಿ ಶೇ.75ರಷ್ಟು ನೀರನ್ನು ಕೆಆರ್‌ಎಸ್‌ನಿಂದ ಪಡೆಯಲಾಗುತ್ತಿದೆ. ಪ್ರತಿ ತಿಂಗಳು ಜಲಮಂಡಳಿ 1.5 ಟಿಎಂಸಿ ನೀರನ್ನು ಪಡೆಯಲು ಅವಕಾಶವಿದೆ. ಹೀಗಾಗಿ ತಿಂಗಳಿಗೆ ಬಹುತೇಕ 1.5 ಟಿಎಂಸಿ ನೀರು ಪಡೆಯಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News