ರಾಜಧಾನಿಯಲ್ಲಿ ಕಸದಿಂದ ವಿದ್ಯುತ್ ಉತ್ಪಾದನೆಗೆ ಬಿಬಿಎಂಪಿ ಸಿದ್ಧತೆ

Update: 2019-08-11 16:43 GMT

ಬೆಂಗಳೂರು, ಆ.11: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾವಳ್ಳಿಪುರ ಹಾಗೂ ಕನ್ನಹಳ್ಳಿಯಲ್ಲಿ ಕಸದಿಂದ ವಿದ್ಯುತ್ ಉತ್ಪಾದನೆ ಮಾಡುವ ಘಟಕ ಸ್ಥಾಪನೆ ಮಾಡಲು ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

ಮಾವಳ್ಳಿಪುರದಲ್ಲಿ ಕಸದಿಂದ ವಿದ್ಯುತ್ ಉತ್ಪಾದನೆ (ವೇಸ್ಟ್ ಟು ಎನರ್ಜಿ ಪ್ಲಾಂಟ್) ಘಟಕ ಸ್ಥಾಪನೆ ಮಾಡುವ ಪ್ರಸ್ತಾವನೆ ಮತ್ತೆ ಮುನ್ನೆಲೆಗೆ ಬಂದಿದೆ. ಕನ್ನಹಳ್ಳಿ, ಸೀಗೇಹಳ್ಳಿ, ಲಿಂಗಧೀರನಹಳ್ಳಿ, ದೊಡ್ಡಬಿದರಕಲ್ಲು, ಕೊಡ್ಲು, ಚಿಕ್ಕನಾಗಮಂಗಲ, ಸುಬ್ಬರಾಯನ ಪಾಳ್ಯ, ಮಾವಳ್ಳಿಪುರ, ಬಾಗಲೂರಿನ ತ್ಯಾಜ್ಯ ವಿಲೇವಾರಿ ಘಟಕವನ್ನು ವಿದ್ಯುತ್ ಉತ್ಪಾದನಾ ಘಟಕಗಳನ್ನಾಗಿ ಪರಿವರ್ತನೆ ಮಾಡುವ ಪ್ರಸ್ತಾವನೆ ಕಗ್ಗಂಟಾಗಿತ್ತು.

ಈಗ ಮೊದಲ ಹಂತದಲ್ಲಿ ಮಾವಳ್ಳಪುರ ಹಾಗೂ ಕನ್ನಹಳ್ಳಿಯಲ್ಲಿ ಸಮಸ್ಯೆ ಇತ್ಯರ್ಥವಾಗುವ ಲಕ್ಷಣಗಳು ಕಂಡುಬರುತ್ತಿವೆ. ಈ ಮಧ್ಯೆ, ಮಾವಳ್ಳಿಪುರ ಹಾಗೂ ಕನ್ನಹಳ್ಳಿಯಹಲ್ಲಿ ಕಸದಿಂದ ವಿದ್ಯುತ್ ಘಟಕ ಸ್ಥಾಪನೆ ಮಾಡುವ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಬಿಬಿಎಂಪಿಯ ಕೆಲವು ಅಧಿಕಾರಿಗಳೊಂದಿಗೆ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅವರು ಚರ್ಚಿಸಿದ್ದಾರೆ ಎಂದು ಹೇಳಲಾಗಿದೆ.

ಬಿಬಿಎಂಪಿಯ ಕೆಲವರು ಸದಸ್ಯರು ಈ ಹಿಂದೆ ಕೌನ್ಸಿಲ್ ಸಭೆಯಲ್ಲಿ, ತ್ಯಾಜ್ಯ ಘಟಕ ಸ್ಥಾಪನೆಗೆ ನಮ್ಮ ವಾರ್ಡ್‌ನಲ್ಲಿ ಅವಕಾಶ ನೀಡಲಾಗಿದೆ. ಹೆಚ್ಚಿನ ಅನುದಾನಕ್ಕೆ ಆದ್ಯತೆ ನೀಡಬೇಕು, ಅನುದಾನ ನೀಡದಿದ್ದಲ್ಲಿ ಘಟಕವನ್ನು ನಿಲ್ಲಿಸುವುದಾಗಿ ಬೆದರಿಕೆ ಹಾಕಿದ್ದರು. ಒಂದು ವರ್ಷದಿಂದ ಹಿಂದಿನ ಪ್ರಸ್ತಾವನೆಗಳು ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಚುರುಕು ಪಡೆದುಕೊಂಡಿವೆ. ಈಗಾಗಲೇ ಬೆಳ್ಳಳ್ಳಿ ಕ್ವಾರಿ ಭರ್ತಿಯಾಗಿದ್ದು, ಮುಂದೇನು ಎನ್ನುವ ಆತಂಕ ಶುರುವಾಗಿತ್ತು. ಮಿಟಗಾನಹಳ್ಳಿಯಲ್ಲಿ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಟೆಂಡರ್ ಕರೆಯಬೇಕಾಗಿತ್ತು.

ಆದರೆ, ರಾಜ್ಯ ಸರ್ಕಾರ ಬಿಬಿಎಂಪಿ ಬಜೆಟ್ ತಡೆ ಹಿಡಿದಿರುವುದರಿಂದ ಟೆಂಡರ್ ಕರೆಯುವುದಕ್ಕೂ ತೊಡಕುಂಟಾಗಿದೆ. ನಗರದಲ್ಲಿ ಮುಂದೆ ತ್ಯಾಜ್ಯ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದಂತೆ ನೋಡಿಕೊಳ್ಳುವ ಉದ್ದೇಶದಿಂದ ಬಿಬಿಎಂಪಿ ಮತ್ತು ರಾಜ್ಯ ಸರ್ಕಾರ ತೆರೆ ಮರೆಯಲ್ಲಿ ಸಹಾಸ ಮುಂದುವರಿಸಿದೆ.

ನಗರಾಭಿವೃದ್ಧಿ ಇಲಾಖೆಯು ಸಹ ನಗರದಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಯಾಗದಂತೆ ಎಚ್ಚರಿಕೆ ವಹಿಸಿದೆ.ಈ ಹಿಂದಿನಂತೆ ಪ್ರತಿ ಶನಿವಾರ ಸ್ವಚ್ಛತಾ ಆಂದೋಲನ ನಡೆಸುವಂತೆ ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಿದೆ. ಇದರೊಂದಿಗೆ ಯಾವುದೇ ಕಾರಣಕ್ಕೂ ನಗರದಲ್ಲಿ ತ್ಯಾಜ್ಯ ಸಮಸ್ಯೆ ಉಲ್ಬಣವಾಗದಂತೆ ಎಚ್ಚರಿಕೆ ವಹಿಸುವಂತೆಯೂ ನಿರ್ದೇಶಿಸಿದೆ.

ಮಾವಳ್ಳಿಪುರದಲ್ಲಿ ತ್ಯಾಜ್ಯ ಸುರಿಯುವುದಕ್ಕೆ ಅವಕಾಶ ನೀಡುವುದಿಲ್ಲ ಎನ್ನುವುದಕ್ಕೆ ಈಗಲೂ ಬದ್ಧನಾಗಿದ್ದೇನೆ. ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಘಟಕ ಸ್ಥಾಪನೆ ಇನ್ನಷ್ಟೇ ಅಂತಿಮವಾಗಬೇಕಿದೆ. ಇದರಿಂದ ಅಲ್ಲಿನ ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಯಾಗುವುದಿಲ್ಲ. ಸ್ಥಳೀಯರೊಂದಿಗೆ ಮಾತನಾಡಿಯೇ ಮುಂದುವರೆಯುತ್ತೇನೆ.

- ಎ ಸ್.ಆರ್.ವಿಶ್ವನಾಥ್, ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News